ಚಿನ್ನಸ್ವಾಮಿ ದುರಂತದ ಬಳಿಕ ರಾಜ್ಯ ಸರ್ಕಾರ ಇದೀಗ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ಮಾಡಿದೆ. ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣ 60 ಸಾವಿರ ಸಾಮರ್ಥ್ಯ ಹೊಂದಿದ್ದು, 42 ಏಕರೆಯಲ್ಲಿ ತಲೆ ಎತ್ತಲಿದೆ. 

ಬೆಂಗಳೂರು (ಆ.21) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ರೋಫಿ ಗೆಲುವಿನ ಸಂಭ್ರಮ ದುರಂತದಲ್ಲಿ ಅಂತ್ಯಗೊಂಡಿತ್ತು. ಚಿನ್ನಸ್ವಾಮಿಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಂದ ನೂಕು ನುಗ್ಗಲು ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆ ಕರ್ನಾಟಕ ಕ್ರೀಡಾ ಇತಿಹಾಸದಲ್ಲೇ ನಡೆದ ಅತೀ ದೊಡ್ಡ ದುರಂತವಾಗಿದೆ. ಈ ಘಟನೆಯಿಂದ ರಾಜ್ಯ ಸರ್ಕಾರ ಕೂಡ ತೀವ್ರ ಹಿನ್ನಡೆ ಅನುಭವಿಸಿತ್ತು. ಈ ದುರಂತದ ಬೆನ್ನಲ್ಲೇ ರಾಜ್ಯಕ್ಕೆ ಎರಡನೇ ಕ್ರೀಡಾಂಗಣ ಚರ್ಚೆಗಳು ತೀವ್ರಗೊಂಡಿತ್ತು. ಇದೀಗ ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ಹೊಸ ಕ್ರೀಡಾಂಗಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಎರಡನೇ ಕ್ರೀಡಾಂಗಣ ತುಮಕೂರಿನಲ್ಲಿ ನಿರ್ಮಾಣವಾಗುತ್ತಿದೆ.

42 ಏಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣ

ತುಮಕೂರಿನಲ್ಲಿ ಬರೋಬ್ಬರಿ 42 ಏಕರೆ ಪ್ರದೇಶದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಪೆವಿಲಿಯನ್ ಸೇರಿದ ಅಂತಾರಾಷ್ಟ್ರೀಯ ಕ್ರೀಡಾಂಗಣ, ಪ್ರಾಕ್ಟೀಸ್ ಮೈದಾನ, ಡ್ರೆಸ್ಸಿಂಗ್ ರೂಂ, ಹಾಲ್, ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯದ ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

60,000 ಆಸನ ಸಾಮರ್ಥ್ಯದ ಕ್ರೀಡಾಂಗಣ

ರಾಜ್ಯದ ಎರಡನೇ ಅಂತಾರಾಷ್ಟ್ರೀಯ ಕ್ರೀಡಾಂಗಣ ಬರೋಬ್ಬರಿ 60 ಸಾವಿರ ಸಾಮರ್ಥ್ಯದ ಆಸನ ವ್ಯವಸ್ಥೆ ಹೊಂದಿರಲಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕುಳಿತು ಪಂದ್ಯ ವೀಕ್ಷಣೆ ಮಾಡಬಹುದು. ಇಷ್ಟೇ ಅಲ್ಲ ಉದ್ಘಾಟನೆ, ಸಮಾರೋಪ ಸಮಾರಂಭ ಕಾರ್ಯಕ್ರಮಳಿಗೂ ಬಳಸಿಕೊಳ್ಳಲು ಸಹಾಯವಾಗಲಿದೆ. ಸುಸಜ್ಜಿತ ಕ್ರೀಡಾಂಗಣ ಮೂಲಕ ಕ್ರಿಕೆಟ್ ಹಾಗೂ ಕ್ರೀಡಾಭಿಮಾನಿಗಳ ಬಹುದಿನಗಳ ಬೇಡಿಯನ್ನೂ ಈಡೇರಿಸಲಾಗುತ್ತದೆ ಎಂದಿದ್ದಾರೆ.

ಗುಜರಾತ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ದೊಡ್ಡದಾಗಿದೆ. ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿಯ ಮೈದಾನವನ್ನು ತುಮಕೂರಿನಲ್ಲಿ ನಿರ್ಮಾಣ ಮಾಡಲಾಗುತ್ತದೆ.

ದೇವನಹಳ್ಳಿ ಯಲ್ಲಿ ಸ್ಪೋರ್ಟ್ಸ್ ಕ್ಲಬ್

ದೇವನಹಳ್ಳಿಯಲ್ಲಿ ಸ್ಪೋರ್ಟ್ಸ್ ಕ್ಲಬ್ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಮೂಲಕ ದೇವನಹಳ್ಳಿ ಹಾಗೂ ತುಮಕೂರಿನಲ್ಲಿ ಕ್ರೀಡಾ ಹಬ್ ನಿರ್ಮಾಣಗೊಳ್ಳಲಿದೆ ಎಂದು ಗೃಹ ಪರಮೇಶ್ವರ್ ಹೇಳಿದ್ದಾರೆ.

ಕ್ರೀಡಾ ಚಟುವಟಿಕೆಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬಾರದು ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿತ್ತು. ಆದರೆ ಚಿನ್ನಸ್ವಾಮಿ ಕಾಲ್ತುಳಿತ ಘಟನೆ ಬಳಿಕ ಸರ್ಕಾರ ಮಧ್ಯ ಪ್ರವೇಶ ಮಾಡಿದೆ. ಕೆಲ ಕಟ್ಟು ನಿಟ್ಟಿನ ನಿಯಮ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.