Asianet Suvarna News Asianet Suvarna News

Cricket: ಟಿ20 ಅಂಧರ ವಿಶ್ವಕಪ್ ನಲ್ಲಿ ಕೊಪ್ಪಳ ಯುವಕನಿಗೆ ಸ್ಥಾನ

ಡಿಸೆಂಬರ್‌ನಲ್ಲಿ ಅಂಧರ ಟಿ20 ವಿಶ್ವಕಪ್‌ ನಡೆಯಲಿದ್ದು, ಭಾರತ ತಂಡಕ್ಕೆ ತಾಲೂಕಿನ ಚಿಕ್ಕಬೆಣಕಲ್‌ ಗ್ರಾಮದ ಯಡಳ್ಳಿ ಲೋಕೇಶ್ ಎಂಬ ಯುವಕ ಆಯ್ಕೆಯಾಗಿ ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾನೆ.

Koppal youth gets place in T20 Blind World Cup
Author
First Published Nov 27, 2022, 5:23 PM IST

ವರದಿ- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಪ್ಪಳ (ನ.27) : ಸಾಧನೆ ಮಾಡಬೇಕೆಂದರೆ ಕೇವಲ ಅಂದುಕೊಂಡರೆ ಸಾಲದು.‌ ಅದಕ್ಕೆ ನಿರಂತರ ಪರಿಶ್ರಮ, ಹಾರ್ಡ್ ವರ್ಕ್ ಬಹಳ ಮುಖ್ಯ. ಹೀಗೆ ನಿರಂತರ ಪರಿಶ್ರಮದಿಂದ ಇಲ್ಲೊಬ್ಬ ಯವಕ ಟಿ20 ಅಂಧರ ವಿಶ್ವಕಪ್ ನಲ್ಲಿ ಆಡಲು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಅಷ್ಟಕ್ಕೂ ಆ ಅಂಧ ಯುವಕ ಯಾರು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದಿದೆ.‌ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುವ ಮೂಲಕ ಭತ್ತದ ಕಣಜ ಎಂದು ಕರೆಯಲ್ಪಡುತ್ತಿದೆ. ಇದರ ಜೊತೆಗೆ ಗಂಗಾವತಿ ತಾಲೂಕು ಇದೀಹ ಮತ್ತೊಮ್ಮೆ ಪ್ರಸಿದ್ಧಿಯಾಗಿದೆ.‌ ಈ ಬಾರಿ ಗಂಗಾವತಿ ಪ್ರಸಿದ್ಧಿಯಾಗಿರುವುದು ಕ್ರಿಕೆಟ್ ನಿಂದ. ಹೌದು  ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್‌ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡಳ್ಳಿ ಗ್ರಾಮದ ಲೋಕೇಶ್, ಸತತ ಪ್ರಯತ್ನದ ಫಲವಾಗಿ ಅಂಧರ ಟಿ20 ವಿಶ್ವಕಪ್‌ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.

ವಿಶ್ವಕಪ್‌ ಸೋಲಿಗೆ ಮುಂದುವರಿದ ಬಿಸಿಸಿಐ ಸಿಟ್ಟು, ಟೀಮ್‌ ಇಂಡಿಯಾ ಮತ್ತೊಂದು ಸಿಬ್ಬಂದಿಗೆ ಗೇಟ್‌ಪಾಸ್‌!

ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಲೋಕೇಶ್: ಅಂಧರ ಟಿ20 ವಿಶ್ವಕಪ್‌ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಭಾರತ ತಂಡಕ್ಕೆ ತಾಲೂಕಿನ ಚಿಕ್ಕಬೆಣಕಲ್‌ ಗ್ರಾಮದ ಯಡಳ್ಳಿ ಲೋಕೇಶ್ ಎಂಬ ಯುವಕ ಆಯ್ಕೆಯಾಗಿ ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾನೆ. ಕಡು ಬಡತನ ಕುಟುಂಬದ ರೇಣುಕಪ್ಪ, ಹುಲಿಗೆಮ್ಮ ದಂಪತಿಯ 4ನೇ ಮಗ ಲೋಕೇಶ್ ಹುಟ್ಟುವಾಗಲೇ ಅಂಧತ್ವ ಕಾಡಿತ್ತು. ಚಿಕ್ಕ ವಯಸ್ಸಿನಿಂದ ಕ್ರಿಕೆಟ್ ಆಡುವುದನ್ನು ರೂಢಿಸಿಕೊಂಡಿದ್ದ ಲೋಕೇಶ್ ಸರಿಯಾಗಿ ಮನೆಯವರಿಂದ ಪ್ರೋತ್ಸಾಹ ದೊರೆಯದೆ ಇರುವುದರಿಂದ 15 ವರ್ಷಗಳ ಹಿಂದೆ ಮನೆ ಬಿಟ್ಟು ಬೆಂಗಳೂರಿಗೆ ಹೋಗಿ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದನು. ಕೂಲಿ ಕೆಲಸದ ಜತೆಗೆ ಬೆಂಗಳೂರಿನ ಸಮರ್ಥನಂ ಟ್ರಸ್ಟ್ ಎಂಬ ಸಂಸ್ಥೆಯಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವ ಮೂಲಕ ರಣಜಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾನೆ. ನಂತರ ಭಾರತ ತಂಡದ ಅಂಧರ ವಿಭಾಗಕ್ಕೆ ಆಯ್ಕೆಯಾಗಿ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಅವಕಾಶ ಪಡೆದು ಕೊಂಡಿದ್ದಾನೆ. 

ಅಂಧರ ಏಷ್ಯಾಕಪ್ ನಲ್ಲಿ ಆಡಿದ ಅನುಭವಿ: ಲೋಕೇಶ್  ಮೊದಲ ಬಾರಿ 2016ರಲ್ಲಿ ಅಂಧರ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಉತ್ತಮ ಆಲ್‌ ರೌಂಡರ್ ಎಂದು ಗುರುತಿಸಿ ಕೊಂಡಿದ್ದಾನೆ. ಅಂಧರ ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಕನಸು ಕಟ್ಟಿ ಕೊಂಡು, ಸತತ ಅಭ್ಯಾಸ ನಡೆಸುತ್ತಿದ್ದ ಲೋಕೇಶ್ ಕೊನೆಗೂ ತನ್ನ ಕನಸು ನನಸು ಮಾಡಿಕೊಂಡಿದ್ದಾನೆ. 

ಅಂಧರ ಟಿ20 ವಿಶ್ವಕಪ್‌ಗೆ ಯುವರಾಜ್ ಸಿಂಗ್ ರಾಯಭಾರಿ, ಡಿ.6ರಿಂದ ಟೂರ್ನಿ!

ತರಬೇತಿ ವೇಳೆಯೂ ಉತ್ತಮ ಪ್ರದರ್ಶನ‌: ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬೈಂಡ್ ಇನ್ ಇಂಡಿಯಾ ಸಂಸ್ಥೆಯು ದೇಶದ 56  ಆಟಗಾರರನ್ನು ಆಯ್ಕೆ ಮಾಡಿಕೊಂಡು, ಬೆಂಗಳೂರಿನಲ್ಲಿ ಶಿಬಿರ ನಡೆಸಿ, ತರಬೇತಿ ನೀಡಿತ್ತು. ನಂತರ ಆಯ್ಕೆ ಸಮಿತಿಯಿಂದ ಮೌಲ್ಯ ಮಾಪನ ಮಾಡಲಾಗಿದ್ದು, 56 ಜನ ಆಟಗಾರರಲ್ಲಿ ಕೇವಲ 29 ಜನ ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಯಿತು. ನಂತರ ಭೋಪಾಲ್‌ನಲ್ಲಿ 121 ದಿನಗಳ ಕಾಲ ಕಠಿಣ ಕ್ರಿಕೆಟ್ ತರಬೇತಿ ಹಾಗೂ ಹಾಗೂ ದೈಹಿಕ ಸದೃಢತೆಯ – ಮೌಲ್ಯಮಾಪನ ನಡೆಸಲಾಗಿದ್ದು, ಕೊನೆಯದಾಗಿ ಟಿ20 ವಿಶ್ವಕಪ್‌ಗೆ ಅವಶ್ಯಕ ಇರುವ 17 ಜನ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ 17 ಆಟಗಾರರಲ್ಲಿ ಲೋಕೇಶ್ ಸ್ಥಾನ ಪಡೆದುಕೊಂಡು 3ನೇ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾನೆ.

ಒಟ್ಟಿನಲ್ಲಿ ಸತತ ಪ್ರಯತ್ನದಿಂದ ಏನಾದರೂ ಸಾಧಿಸಬಹು ಎನ್ನುವುದಕ್ಕೆ ಲೋಕೇಶ್ ಉತ್ತಮ ಉದಾಹರಣೆ ಆಗಿದ್ದಾನೆ. ಇನ್ನು ಅಂಧರ ಟಿ20 ವಿಶ್ವಕಪ್‌ ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತವನ್ನು ಗೆಲ್ಲಿಸಿ, ಕೊಪ್ಪಳ ಜಿಲ್ಲೆಗೆ ಕೀರ್ತಿ ತರಲೆಂದು ಹಾರೈಸೋಣ.

Follow Us:
Download App:
  • android
  • ios