ಮೊದಲ ಪಂದ್ಯದಲ್ಲಿ ಆರ್‌ಸಿಬಿಯನ್ನು ಹೊಸಕಿ ಹಾಕಿದ್ದ ಕೆಕೆಆರ್‌ತವರಿನಲ್ಲಿ 4ನೇ ಜಯಕ್ಕೆ ಕಾತರಿಸುತ್ತಿರುವ ಆರ್‌ಸಿಬಿಫಾಫ್‌ ಪಡೆಗೆ ಮಧ್ಯಮ ಕ್ರಮಾಂಕದ ತಲೆಬಿಸಿಸತತ 4 ಸೋಲುಗಳೊಂದಿಗೆ ಕುಗ್ಗಿರುವ ಕೋಲ್ಕತಾ

ಬೆಂಗಳೂರು(ಏ.26): ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು ಈ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 8 ಅಂಕ ಕಲೆಹಾಕಿದ್ದರೂ, ತಂಡದ ನೆಟ್‌ ರನ್‌ರೇಟ್‌ ಕಳಪೆಯಾಗಿರಲು ಕೋಲ್ಕತಾ ನೈಟ್‌ರೈಡ​ರ್ಸ್‌ ವಿರುದ್ಧ ಮೊದಲ ಮುಖಾಮುಖಿಯಲ್ಲಿ ಅನುಭವಿಸಿದ ಸೋಲೇ ಕಾರಣ. ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಅಬ್ಬರಿಸಿ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ ತುಡಿಯುತ್ತಿದೆ.

ಆರ್‌ಸಿಬಿ ತನ್ನ ಅಗ್ರ ಕ್ರಮಾಂಕವನ್ನು ಅತಿಯಾಗಿ ನೆಚ್ಚಿಕೊಂಡಿದ್ದು ಫಾಫ್‌ ಡು ಪ್ಲೆಸಿಸ್, ವಿರಾಟ್‌ ಕೊಹ್ಲಿ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಆರಂಭಿಕ ಜೋಡಿಯಾದ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಹೆಚ್ಚೂ ಕಡಿಮೆ 500 ರನ್‌ ಕಲೆಹಾಕಿದ್ದು, ಎರಡು ಶತಕದ ಜೊತೆಯಾಟದಲ್ಲೂ ಭಾಗಿಯಾಗಿದ್ದಾರೆ. ಇನ್ನು ಪ್ರಚಂಡ ಲಯದಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್‌ ಚಿನ್ನಸ್ವಾಮಿಯಲ್ಲಿ ಕಳೆದ 4 ಇನ್ನಿಂಗ್ಸ್‌ಗಳಲ್ಲಿ 3 ಅರ್ಧಶತಕ ಸಿಡಿಸಿದ್ದಾರೆ. ಈ ಮೂವರು ಸೇರಿ ಒಟ್ಟು 937 ರನ್‌ ಗಳಿಸಿದ್ದು, 12 ಅರ್ಧಶತಕ ಬಾರಿಸಿದ್ದಾರೆ. ಇವರ ಮೇಲೆಯೇ ಈ ಪಂದ್ಯದ ಫಲಿತಾಂಶವೂ ನಿಂತಿದೆ. ಮಧ್ಯಮ ಕ್ರಮಾಂಕ ಕಳಪೆಯಾಟ ಮುಂದುವರಿಸಿದ್ದು, ಮಹಿಪಾಲ್‌ ಲೊಮ್ರೊರ್‌, ಸುಯಶ್‌ ಪ್ರಭುದೇಸಾಯಿ, ದಿನೇಶ್‌ ಕಾರ್ತಿಕ್‌, ಶಾಬಾಜ್‌ ಅಹ್ಮದ್‌ ಸೇರಿ ಒಟ್ಟು ಕೇವಲ 161 ರನ್‌ ಕಲೆಹಾಕಿದ್ದಾರೆ. ಇಷ್ಟಿದ್ದರೂ ಆರ್‌ಸಿಬಿ ತನ್ನ ಬ್ಯಾಟಿಂಗ್‌ ಪಡೆಯಲ್ಲಿ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಇಲ್ಲ. ತಂಡದ ಕ್ರಿಕೆಟ್‌ ನಿರ್ದೇಶಕ ಮೈಕ್‌ ಹೆಸ್ಸನ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬ್ಯಾಟರ್‌ಗಳನ್ನು ಸಮರ್ಥಿಸಿಕೊಂಡಿದ್ದು, ವಿಶ್ವಾಸ ಕಳೆದುಕೊಂಡಿಲ್ಲ ಎಂದರು.

ಇನ್ನು ಬೌಲಿಂಗ್‌ ಪಡೆಯನ್ನು ಮೊಹಮದ್‌ ಸಿರಾಜ್‌ ಮುನ್ನಡೆಸುತ್ತಿದ್ದು, ಹರ್ಷಲ್‌ ಪಟೇಲ್‌ ಕೂಡ ಲಯ ಕಂಡುಕೊಂಡಂತೆ ಕಾಣುತ್ತಿದೆ. ಜೋಶ್‌ ಹೇಜಲ್‌ವುಡ್‌ ಸಂಪೂರ್ಣ ಫಿಟ್‌ ಆಗದ ಕಾರಣ ಡೇವಿಡ್‌ ವಿಲ್ಲಿ ಮುಂದುವರಿಯುವುದು ಬಹುತೇಕ ಖಚಿತ. ಲೆಗ್‌ ಸ್ಪಿನ್ನರ್‌ ವನಿಂಡು ಹಸರಂಗ ಕಳೆದ ಪಂದ್ಯದಲ್ಲಿ ರನ್‌ ನಿಯಂತ್ರಿಸುವಲ್ಲಿ ಯಶಸ್ವಿಯಾದರೂ, ತಂಡ ಅವರನ್ನು ವಿಕೆಟ್‌ ಪಡೆಯುವ ಬೌಲರ್‌ ಆಗಿ ನೋಡಲು ಇಷ್ಟಪಡಲಿದೆ. ಕರ್ನಾಟಕದ ವೈಶಾಖ್‌ ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಆಡುವ ಸಾಧ್ಯತೆ ಹೆಚ್ಚು. ಡು ಪ್ಲೆಸಿ ಫೀಲ್ಡಿಂಗ್‌ ಮಾಡಲು ಇನ್ನೂ ಫಿಟ್‌ ಆದಂತೆ ಕಾಣುತ್ತಿಲ್ಲ. ಹೀಗಾಗಿ ಕೊಹ್ಲಿಯೇ ಈ ಪಂದ್ಯಕ್ಕೂ ನಾಯಕರಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಐಪಿಎಲ್‌ ಪಂದ್ಯದಿಂದ 2 ಕೋಟಿ ರೂ ಜಾಕ್‌ಪಾಟ್, ರಾತ್ರೋರಾತ್ರಿ ಕೋಟ್ಯಾಧೀಶನಾದ ಕೂಲಿ ಕಾರ್ಮಿಕ!

ಒತ್ತಡದಲ್ಲಿ ಕೆಕೆಆರ್‌: ಆಡಿರುವ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಕೆಕೆಆರ್‌ ಸಮಸ್ಯೆಗಳ ಆಗರವಾದಂತೆ ಕಾಣುತ್ತಿದೆ. 7 ಪಂದ್ಯಗಳಲ್ಲಿ 5 ವಿವಿಧ ಆರಂಭಿಕ ಜೋಡಿಗಳನ್ನು ಬಳಸಿರುವ ತಂಡ, ಪವರ್‌-ಪ್ಲೇನಲ್ಲಿ ಅತಿಹೆಚ್ಚು(17) ವಿಕೆಟ್‌ಗಳನ್ನು ಕಳೆದುಕೊಂಡಿದೆ. ಮೊದಲ 6 ಓವರಲ್ಲಿ ಕೇವಲ 7.80 ರನ್‌ರೇಟ್‌ ಹೊಂದಿದ್ದು, ಇದು ತಂಡ ಒತ್ತಡಕ್ಕೆ ಸಿಲುಕಲು ಮತ್ತೊಂದು ಪ್ರಮುಖ ಕಾರಣ. ಈಗಾಗಲೇ ಲಭ್ಯವಿರುವ ಎಲ್ಲಾ 8 ವಿದೇಶಿ ಆಟಗಾರರನ್ನು ಬಳಸಿದ್ದರೂ ಕೆಕೆಆರ್‌ಗೆ ಸೂಕ್ತ ಸಂಯೋಜನೆ ಕಂಡುಕೊಳ್ಳಲು ಆಗಿಲ್ಲ. 3 ಬಾರಿ 200ಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟಿರುವ ಕೆಕೆಆರ್‌ ವಿರುದ್ಧ ಆರ್‌ಸಿಬಿಯೂ ರನ್‌ ಹೊಳೆ ಹರಿಸಿದರೆ ಅಚ್ಚರಿಯಿಲ್ಲ.

ಒಟ್ಟು ಮುಖಾಮುಖಿ: 31

ಆರ್‌ಸಿಬಿ: 14

ಕೆಕೆಆರ್‌: 17

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್‌ ಕೊಹ್ಲಿ(ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್‌ ಲೋಮ್ರಾರ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಸುಯಶ್‌ ಪ್ರಭುದೇಸಾಯಿ, ಶಾಬಾಜ್‌ ಅಹಮ್ಮದ್, ದಿನೇಶ್ ಕಾರ್ತಿಕ್‌, ವನಿಂದು ಹಸರಂಗ, ಹರ್ಷಲ್‌ ಪಟೇಲ್, ಡೇವಿಡ್‌ ವಿಲ್ಲಿ, ಮೊಹಮ್ಮದ್ ಸಿರಾಜ್‌, ವೈಶಾಖ್‌ ವಿಜಯ್‌ಕುಮಾರ್.

ಕೆಕೆಆರ್‌: ಜೇಸನ್ ರಾಯ್‌, ಎನ್‌ ಜಗದೀಶನ್‌, ವೆಂಕಟೇಶ್ ಅಯ್ಯರ್‌, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್‌, ಸುನಿಲ್ ನರೇನ್‌, ಟಿಮ್ ಸೌಥಿ, ಉಮೇಶ್‌ ಯಾದವ್, ವೈಭವ್‌ ಅರೋರ, ವರುಣ್‌ ಚಕ್ರವರ್ತಿ, ಸುಯಶ್‌ ಪ್ರಭುದೇಸಾಯಿ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7.30ಕ್ಕೆ ಆರಂಭಗೊಂಡ ಕಳೆದೆರಡು ಪಂದ್ಯಗಳ ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ 200ಕ್ಕೂ ಹೆಚ್ಚು ಮೊತ್ತ ದಾಖಲಾಗಿದೆ. ಈಗಾಗಲೇ ಒಟ್ಟು 102 ಸಿಕ್ಸರ್‌ಗಳಿಗೆ ಸಾಕ್ಷಿಯಾಗಿರುವ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ.