ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಕ್ರಿಕೆಟಿಗ ವರುಣ್ ಚಕ್ರವರ್ತಿಗೆ ಬಿಸಿಸಿಐ ಪಂದ್ಯದ ಶುಲ್ಕದ 25% ದಂಡ ವಿಧಿಸಿದೆ ಮತ್ತು ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗಾಗಿ ಡಿಮೆರಿಟ್ ಪಾಯಿಂಟ್ ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಕ್ರಮಣಕಾರಿ ಸನ್ನೆಗಾಗಿ ಈ ಶಿಕ್ಷೆ ವಿಧಿಸಲಾಗಿದೆ.
ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2 ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಕ್ರಿಕೆಟಿಗ ವರುಣ್ ಚಕ್ರವರ್ತಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ
ಹೌದು, ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಅವರ ಪಂದ್ಯದ ಶುಲ್ಕದ 25 ಪ್ರತಿಶತ ದಂಡ ವಿಧಿಸಲಾಗಿದೆ ಮತ್ತು ಬುಧವಾರ ಈಡನ್ ಗಾರ್ಡನ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಲೀಗ್‌ನ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಸಮಯದಲ್ಲಿ, ವರುಣ್ ಚಕ್ರವರ್ತಿ, ಸಿಎಸ್‌ಕೆ ಬ್ಯಾಟರ್ ಡೆವಾಲ್ಡ್ ಬ್ರೆವಿಸ್‌ರನ್ನು ಔಟ್ ಮಾಡಿದ ನಂತರ ಹಿಂದಕ್ಕೆ ಹೋಗಲು ಆಕ್ರಮಣಕಾರಿ ರೀತಿಯಲ್ಲಿ ಸನ್ನೆ ಮಾಡಿದರು.
“ಕೋಲ್ಕತ್ತಾ ನೈಟ್ ರೈಡರ್ಸ್‌ನ ಬೌಲರ್ ವರುಣ್ ಚಕ್ರವರ್ತಿಗೆ ಅವರ ಪಂದ್ಯದ ಶುಲ್ಕದ 25 ಪ್ರತಿಶತ ದಂಡ ವಿಧಿಸಲಾಗಿದೆ ಮತ್ತು ಬುಧವಾರ ಈಡನ್ ಗಾರ್ಡನ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ” ಎಂದು ಐಪಿಎಲ್‌ನ ಮಾಧ್ಯಮ ಹೇಳಿಕೆ ತಿಳಿಸಿದೆ.
ವರುಣ್ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡರು ಮತ್ತು ಪಂದ್ಯದ ರೆಫರಿಯ ನಿರ್ಧಾರವನ್ನು ಒಪ್ಪಿಕೊಂಡರು ಎಂದು ಐಪಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಕೆಆರ್ ಬಹುತೇಕ ಹೊರಕ್ಕೆ
ಕೋಲ್ಕತಾ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ 18ನೇ ಆವೃತ್ತಿ ಐಪಿಎಲ್‌ನಿಂದ ಬಹುತೇಕ ಹೊರಬಿದ್ದಿದೆ. ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2 ವಿಕೆಟ್ ಸೋಲು ಕಂಡ ಕೆಕೆಆರ್, ಇನ್ನು ಪ್ಲೇ-ಆಫ್‌ಗೇರಲು ಪವಾಡವೇ ನಡೆಯಬೇಕು.
ಕೋಲ್ಕತಾ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, ಒಟ್ಟು 11 ಅಂಕ ಸಂಪಾದಿಸಿದೆ. ತಂಡ ಇನ್ನುಳಿದ 2 ಪಂದ್ಯಗಳಲ್ಲಿ ಗೆದ್ದರೂ ಗರಿಷ್ಠ 15 ಅಂಕವಾಗುತ್ತದೆ. ಇದು ಪ್ಲೇ-ಆಫ್‌ಗೇರಲು ಸಾಕಾಗಲ್ಲ. ಆದರೆ ಅದೃಷ್ಟ ಕೈಹಿಡಿದು, ಇತರೆಲ್ಲಾ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರಷ್ಟೇ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಮತ್ತೊಂದೆಡೆ, ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದ್ದ ಚೆನ್ನೈ ಟೂರ್ನಿಯಲ್ಲಿ 3ನೇ ಗೆಲುವು ಸಾಧಿಸಿದರೂ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ.
ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 6 ವಿಕೆಟ್‌ಗೆ 179 ರನ್ ಕಲೆಹಾಕಿತು. ಅಜಿಂಕ್ಯಾ ರಹಾನೆ 33 ಎಸೆತಕ್ಕೆ 48 ರನ್ ಸಿಡಿಸಿದರೆ, ಕೊನೆಯಲ್ಲಿ ಮಿಂಚಿದ ಮನೀಶ್ ಪಾಂಡೆ ಔಟಾಗದೆ 36, ಆ್ಯಂಡ್ರೆ ರಸೆಲ್ 21 ಎಸೆತಗಳಲ್ಲಿ ಔಟಾಗದೆ 38 ರನ್ ಸಿಡಿಸಿದರು. ಮತ್ತೆ ತಮ್ಮ ಸ್ಪಿನ್ ಕೈಚಳಕ ತೋರಿಸಿದ ನೂರ್ ಅಹ್ಮದ್ 4 ವಿಕೆಟ್ ಕಬಳಿಸಿದರು.
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಚೆನ್ನೈ, ಆರಂಭಿಕ ಆಘಾತದ ಹೊರತಾಗಿಯೂ 19.4 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಊರ್ವಿಲ್ ಪಟೇಲ್(11 ಎಸೆತಕ್ಕೆ 31) ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿದರು. ಪವರ್-ಪ್ಲೇ ಓವರ್‌ಗಳಲ್ಲೇ ತಂಡದ 5 ವಿಕೆಟ್ ಉರುಳಿದರೂ, ರನ್ ಸರಾಗವಾಗಿ ಹರಿದುಬಂತು. ಆರಂಭಿಕ 6 ಓವರ್‌ಗಳಲ್ಲಿ ತಂಡದ ಸ್ಕೋರ್ 62. ಹತ್ತು ಓವರಲ್ಲಿ ತಂಡ 93 ರನ್ ಗಳಿಸಿತ್ತು. ವೈಭವ್ ಅರೋರಾ ಎಸೆದ 11ನೇ ಓವರ್‌ನಲ್ಲಿ ಡೆವಾಲ್ಡ್ ಬ್ರೆವಿಸ್ 3 ಬೌಂಡರಿ, 3 ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. 25 ಎಸೆತಕ್ಕೆ 52 ರನ್ ಗಳಿಸಿ ಬ್ರೆವಿಸ್ ಔಟಾದ ಬಳಿಕ ಶಿವಂ ದುಬೆ(45), ಎಂ.ಎಸ್.ಧೋನಿ(ಔಟಾಗದೆ 17) ತಂಡವನ್ನು ಗೆಲ್ಲಿಸಿದರು.


