ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ ಬೆನ್ನಲ್ಲೇ, ಯುವ ಆಟಗಾರ ಶುಭ್‌ಮನ್ ಗಿಲ್ ಅವರನ್ನು ಮುಂಬರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ಒಲವು ಹೊಂದಿದೆ. ಬುಮ್ರಾ ಫಿಟ್ನೆಸ್‌ ಸಮಸ್ಯೆ ಮತ್ತು ಕೆಎಲ್ ರಾಹುಲ್ ಅವರ ಸ್ಥಿರತೆಯ ಕೊರತೆಯಿಂದಾಗಿ ಗಿಲ್ ಮುನ್ನಲೆಗೆ ಬಂದಿದ್ದಾರೆ.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಗಿಯುತ್ತಿದ್ದಂತೆಯೇ ಭಾರತ ಕ್ರಿಕೆಟ್ ತಂಡವು ಮುಂಬರುವ ಜೂನ್‌ನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ಮೊದಲೇ, ದಿಢೀರ್ ಎನ್ನುವಂತೆ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರೋಹಿತ್ ಶರ್ಮಾ ಗುಡ್‌ಬೈ ಹೇಳಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.

ಇದೀಗ ರೋಹಿತ್ ಶರ್ಮಾ ಅವರಿಂದ ತೆರವಾದ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕರಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಭಾರತ ಟೆಸ್ಟ್ ತಂಡದ ನಾಯಕರಾಗುವುದು ಸೂಕ್ತ ಎನ್ನುವಂತಹ ಮಾತುಗಳು ಕೇಳಿ ಬರಲಾರಂಭಿಸಿವೆ. ಇದರ ಜತೆಗೆ ಕನ್ನಡಿಗ ಕೆ ಎಲ್ ರಾಹುಲ್ ಅವರ ಹೆಸರು ಚರ್ಚೆಯಲ್ಲಿದೆ. ಆದರೆ ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಗೆ ಈ ಇಬ್ಬರೂ ನಾಯಕರಾಗುವುದು ಅನುಮಾನ ಎನ್ನಲಾಗುತ್ತಿದೆ.

ಮುನ್ನಲೆಗೆ ಬಂದ ಶುಭ್‌ಮನ್ ಗಿಲ್‌!

ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್‌ಕರ್, 25 ವರ್ಷದ ಯುವ ಆಟಗಾರ ಶುಭ್‌ಮನ್ ಗಿಲ್ ಅವರನ್ನು ಮುಂಬರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದ ನಾಯಕರನ್ನಾಗಿ ನೇಮಿಸಲು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಶುಭ್‌ಮನ್ ಗಿಲ್ ಅವರನ್ನು ನಾಯಕರನ್ನಾಗಿ ನೇಮಿಸುವ ಮುನ್ನ ಬಿಸಿಸಿಐ ಸೆಲೆಕ್ಟರ್ಸ್‌ ಅವರ ಜತೆ ಮಾತುಕತೆ ನಡೆಸಲಾಗುವುದು ಎಂದು ವರದಿಯಾಗಿದೆ.

ಬುಮ್ರಾ ಸಂಪೂರ್ಣ ಟೆಸ್ಟ್ ಸರಣಿ ಆಡೋದು ಡೌಟ್:

ಟೀಂ ಇಂಡಿಯಾ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ ಪ್ರವಾಸದ ವೇಳೆ ಎಲ್ಲಾ 5 ಟೆಸ್ಟ್ ಪಂದ್ಯಗಳನ್ನು ಆಡುವುದು ಅನುಮಾನ ಎನ್ನುವಂತಹ ಮಾತುಗಳು ಕೇಳಿ ಬರಲಾರಂಭಿಸಿವೆ. ಫಿಟ್ನೆಸ್‌ ಸಮಸ್ಯೆ ಹಾಗೂ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಮಾಡುವ ಉದ್ದೇಶದಿಂದ ಬುಮ್ರಾ ಅವರಿಗೆ ಟೆಸ್ಟ್ ಸರಣಿಯಲ್ಲಿ ಕೆಲ ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿಯೇ ಬುಮ್ರಾಗೆ ನಾಯಕತ್ವ ಪಟ್ಟ ಕಟ್ಟದಿರಲು ಆಯ್ಕೆ ಸಮಿತಿ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಅಂದಹಾಗೆ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ವೇಳೆಯಲ್ಲಿ ಉಪನಾಯಕರಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆಯಲ್ಲಿಯೇ ಜಸ್ಪ್ರೀತ್ ಬುಮ್ರಾ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಜಸ್ಪ್ರೀತ್ ಬುಮ್ರಾ ಹೊರಬಿದ್ದಿದ್ದರು. ಇನ್ನು ಇದಷ್ಟೇ ಅಲ್ಲದೇ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಗೂ ಬುಮ್ರಾ ಅಲಭ್ಯರಾಗಿದ್ದರು. ಇದೇ ಕಾರಣಕ್ಕಾಗಿ ಬಿಸಿಸಿಐ ಬುಮ್ರಾ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದೆ.

ಇನ್ನು ಕನ್ನಡಿಗ ಕೆ ಎಲ್ ರಾಹುಲ್‌, ಟೆಸ್ಟ್ ಮಾದರಿಯಲ್ಲಿ ಸ್ಥಿರ ಪ್ರದರ್ಶನ ತೋರಲು ವಿಫಲವಾಗುತ್ತಾ ಬಂದಿದ್ದಾರೆ. ಹೀಗಾಗಿ ರಾಹುಲ್ ಅವರ ಮೇಲೆ ಟೆಸ್ಟ್ ತಂಡದ ನಾಯಕತ್ವ ವಹಿಸುವ ವಿಚಾರದಲ್ಲಿ ಆಯ್ಕೆ ಸಮಿತಿ ಕೊಂಚ ಗೊಂದಲದಲ್ಲಿದೆ ಎಂದು ವರದಿಯಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಜೂನ್ 20 ರಿಂದ ಆರಂಭವಾಗಲಿದ್ದು, ಕೊನೆಯ ಪಂದ್ಯ ಜುಲೈ 31 ರಂದು ನಡೆಯಲಿದೆ. ಇದಕ್ಕೂ ಮೊದಲು ಬಿಸಿಸಿಐ ಆಯ್ಕೆ ಸಮಿತಿ ಟೀಂ ಇಂಡಿಯಾ ಬಳಗವನ್ನು ಘೋಷಿಸಲಿದೆ.