ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿರುವಾಗ, ಕ್ರಿಕೆಟಿಗ ಕರುಣ್ ನಾಯರ್ ನಿಗೂಢವಾದ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಾರೆ. ಮೈದಾನದಲ್ಲಿ ಇಲ್ಲದಿರುವ ನೋವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾ ಅನುಭವಿ ಬ್ಯಾಟರ್, ಕರ್ನಾಟಕ ಮೂಲದ ಕ್ರಿಕೆಟಿಗ ಕರುಣ್ ನಾಯರ್, ಸದ್ಯ ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಕುರಿತಂತೆ ನಿಗೂಢವಾದ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ. ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಭಾರತೀಯ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿರುವ ಬೆನ್ನಲ್ಲೇ ಕರುಣ್ ನಾಯರ್ ಮಾಡಿದ ಪೋಸ್ಟ್ ಇದೀಗ ಹೆಚ್ಚು ವೈರಲ್ ಆಗುತ್ತಿದೆ
ಭಾರತದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಅನ್ನು 9/0 ರಿಂದ ಮೂರನೇ ದಿನದಾಟವನ್ನು ಆರಂಭಿಸಿತು. ಟೀಂ ಇಂಡಿಯಾ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ತಂಡಕ್ಕೆ ಆಸರೆಯಾದರು ಮತ್ತು ರಾಹುಲ್ ಔಟಾಗುವ ಮೊದಲು 65 ರನ್‌ಗಳ ಜೊತೆಯಾಟವನ್ನು ನೀಡಿದರು. ರಾಹುಲ್ ವಿಕೆಟ್ ನಂತರ, ಜೈಸ್ವಾಲ್ ಭಾರತದ ಇನ್ನಿಂಗ್ಸ್ ಮುಂದುವರಿಸಿ 85 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ 95/2 ಆಗಿದ್ದಾಗ ಅವರ ಆಟ ಕೊನೆಗೊಂಡಿತು. ನಂತರ, ಕೇವಲ 27 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು 122/7 ಕ್ಕೆ ಕುಸಿಯುವ ಮೂಲಕ ಆತಿಥೇಯರ ಬ್ಯಾಟಿಂಗ್ ಲೈನ್ಅಪ್ ಪತನಗೊಂಡಿತು.
ಆದಾಗ್ಯೂ, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಈ ಕುಸಿತದ ನಂತರ ಪ್ರತಿರೋಧ ತೋರಿದರು. ಟೀ ವಿರಾಮದ ಮೊದಲು ಭಾರತ 170 ರನ್ ಗಡಿ ದಾಟಿತು. ಅಂತಿಮವಾಗಿ ಭಾರತ ಕೇವಲ 201 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 288 ರನ್‌ಗಳ ಬೃಹತ್ ಹಿನ್ನಡೆ ಅನುಭವಿಸಿತು. ಹೀಗಿದ್ದೂ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಭಾರತದ ಮೇಲೆ ಫಾಲೋ ಆನ್ ಹೇರದೇ, ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದರು. ಮೂರನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ವಿಕೆಟ್ ನಷ್ಟವಿಲ್ಲದೇ 26 ರನ್ ಗಳಿಸಿದ್ದು, ಒಟ್ಟಾರೆ 314 ರನ್‌ಗಳ ಮುನ್ನಡೆ ಸಾಧಿಸಿದೆ
ಕರುಣ್ ನಾಯರ್ ಗುರಿ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಆಗಿತ್ತೇ?
ಗುವಾಹಟಿ ಟೆಸ್ಟ್‌ನಲ್ಲಿ ಭಾರತದ ಬ್ಯಾಟಿಂಗ್ ಕುಸಿತದ ನಡುವೆ, ಕರುಣ್ ನಾಯರ್ ತಮ್ಮ ಎಕ್ಸ್ ಖಾತೆಯಲ್ಲಿ (ಹಿಂದಿನ ಟ್ವಿಟರ್) ಒಂದು ನಿಗೂಢ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ, ಕರುಣ್ ನಾಯರ್ ಆಟದಿಂದ ಹೊರಗುಳಿದಿರುವ ಬಗ್ಗೆ, ಆಟದ ತೀವ್ರತೆಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ತಮ್ಮ ಭಾವನಾತ್ಮಕ 'ನೋವನ್ನು' ವ್ಯಕ್ತಪಡಿಸಿದ್ದಾರೆ.
"ಕೆಲವು ಪರಿಸ್ಥಿತಿಗಳು ನಿಮಗೆ ಹೃದಯದಿಂದಲೇ ತಿಳಿದಿರುವ ಅನುಭವವನ್ನು ನೀಡುತ್ತವೆ - ಮತ್ತು ಅಲ್ಲಿ ಮೈದಾನದಲ್ಲಿ ಇಲ್ಲದಿರುವ ಮೌನವು ತನ್ನದೇ ಆದ ನೋವನ್ನು ನೀಡುತ್ತದೆ," ಎಂದು ಕರ್ನಾಟಕದ ಅನುಭವಿ ಬ್ಯಾಟರ್ ಬರೆದಿದ್ದಾರೆ.
ತಂಡದಿಂದ ಹೊರಬಿದ್ದ ಕರುಣ್ ನಾಯರ್
ಸಾಕಷ್ಟು ವರ್ಷಗಳ ಬಳಿಕ ಕರುಣ್ ನಾಯರ್ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದರು. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್, 4 ಪಂದ್ಯಗಳ 8 ಇನ್ನಿಂಗ್ಸ್‌ಗಳಿಂದ ಒಂದು ಅರ್ಧಶತಕ ಸಹಿತ 25.62ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 205 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದರ ಬೆನ್ನಲ್ಲೇ ಮತ್ತೆ ಕರುಣ್ ನಾಯರ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿ ಹಾಗೂ ಇದೀಗ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಿಂದಲೂ ಅವರನ್ನು ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಕರುಣ್ ನಾಯರ್ ಅವರ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.


