ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಮಾರ್ಕೊ ಯಾನ್ಸನ್ ಅವರ ಮಾರಕ ಬೌಲಿಂಗ್‌ಗೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲೌಟ್ ಆಗಿದೆ. ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಅವರ ಹೋರಾಟದ ಹೊರತಾಗಿಯೂ, ಭಾರತ 288 ರನ್‌ಗಳ ಬೃಹತ್ ಹಿನ್ನಡೆ ಅನುಭವಿಸಿದೆ.

ಗುವಾಹಟಿ: ಮಾರ್ಕೊ ಯಾನ್ಸನ್ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 201 ರನ್‌ಗಳಿಗೆ ಸರ್ವಪತನ ಕಂಡಿದೆ. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಮೂರನೇ ದಿನದಾಟದಲ್ಲಿ ಕೊನೆಯಲ್ಲಿ 201 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಬರೋಬ್ಬರಿ ಮೊದಲ ಇನ್ನಿಂಗ್ಸ್‌ನಲ್ಲಿ 288 ರನ್‌ಗಳ ಹಿನ್ನಡೆ ಅನುಭವಿಸಿದೆ. ಭಾರತದ ಮೇಲೆ ಫಾಲೋ ಆನ್ ಹೇರುವ ಅವಕಾಶವಿದ್ದರೂ ತೆಂಬಾ ಬವುಮಾ, ಫಾಲೋ ಆನ್ ಹೇರದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಭಾರತಕ್ಕೆ ಆರಂಭಿಕ ಆಘಾತ

ಎರಡನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 9 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ, ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಕೆ ಎಲ್ ರಾಹುಲ್ ಜೋಡಿ 65 ರನ್‌ಗಳ ಜತೆಯಾಟವಾಡಿದರು. 22 ರನ್ ಗಳಿಸಿದ ಕೆ ಎಲ್ ರಾಹುಲ್ ಸ್ಪಿನ್ನರ್ ಕೇಶವ್ ಮಹರಾಜ್ ಬೌಲಿಂಗ್‌ನಲ್ಲಿ ಏಯ್ಡನ್ ಮಾರ್ಕ್‌ರಮ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇನ್ನು ಸಾಯಿ ಸುದರ್ಶನ್ 15 ರನ್ ಗಳಿಸಿ ಹಾರ್ಮರ್‌ಗೆ ವಿಕೆಟ್ ಒಪ್ಪಿಸಿದರೆ, ಮೊದಲ ಸಲ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಧ್ರುವ್ ಜುರೆಲ್ ಖಾತೆ ತೆರೆಯುವ ಮುನ್ನವೇ ಯಾನ್ಸನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಇನ್ನು ಟೀಂ ಇಂಡಿಯಾ ಹಂಗಾಮಿ ನಾಯಕ ರಿಷಭ್ ಪಂತ್, ಮಾರ್ಕೊ ಯಾನ್ಸನ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಕೀಪರ್‌ಗೆ ಕ್ಯಾಚ್ ನೀಡುವ ಮೂಲಕ ನಿರಾಸೆ ಅನುಭವಿಸಿದರು. ಪಂತ್ ಬ್ಯಾಟಿಂಗ್ ಕೇವಲ 7 ರನ್‌ಗಳಿಗೆ ಸೀಮಿತವಾಯಿತು. ಇದರ ಬೆನ್ನಲ್ಲೇ ಅಲ್ರೌಂಡರ್ ರವೀಂದ್ರ ಜಡೇಜಾ 6 ರನ್ ಗಳಿಸಿ ಯಾನ್ಸನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್ ಕೇವಲ 10 ರನ್‌ಗಳಿಗೆ ಸೀಮಿತವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ಸುಂದರ್-ಕುಲ್ದೀಪ್ ದಿಟ್ಟ ಹೋರಾಟ: 

ಒಂದು ಹಂತದಲ್ಲಿ ಕೇವಲ 122 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಮೊತ್ತಕ್ಕೆ ಆಲೌಟ್ ಆಗುವ ಭೀತಿಗೆ ಸಿಲುಕಿದ್ದ ಭಾರತ ತಂಡಕ್ಕೆ 8ನೇ ವಿಕೆಟ್‌ಗೆ ಕುಲ್ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 208 ಎಸೆತಗಳನ್ನು ಎದುರಿಸಿ 72 ರನ್‌ಗಳ ಜತೆಯಾಟವಾಡಿತು. ವಾಷಿಂಗ್ಟನ್ ಸುಂದರ್ 92 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 48 ರನ್ ಬಾರಿಸಿ ಹಾರ್ಮರ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 134 ಎಸೆತಗಳನ್ನು ಎದುರಿಸಿದ ಕುಲ್ದೀಪ್ ಯಾದವ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಇನ್ನಿಂಗ್ಸ್‌ನಲ್ಲಿ ಭಾರತ ಪರ ಗರಿಷ್ಠ ಎಸೆತಗಳನ್ನು ಎದುರಿಸಿದ ಬ್ಯಾಟರ್ ಎನ್ನುವ ಹೆಗ್ಗಳಿಕೆ ಕುಲ್ದೀಪ್ ಯಾದವ್ ಪಾಲಾಯಿತು. ಇನ್ನು 5 ರನ್ ಗಳಿಸಿ ಯಾನ್ಸನ್‌ಗೆ ಆರನೇ ಬಲಿಯಾದರು.

ದಕ್ಷಿಣ ಆಫ್ರಿಕಾ ಪರ ಬ್ಯಾಟಿಂಗ್‌ನಲ್ಲಿ ಆಕರ್ಷಕ 93 ರನ್ ಸಿಡಿಸಿದ್ದ ಯಾನ್ಸನ್, ಬೌಲಿಂಗ್‌ನಲ್ಲಿ 48 ರನ್ ನೀಡಿ 6 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಇನ್ನು ಹಾರ್ಮರ್ 3, ಕೇಶವ್ ಮಹರಾಜ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.