Asianet Suvarna News Asianet Suvarna News

ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್ ಭೇಟಿ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್..! ವೆಂಕಿ ರಾಜಕೀಯಕ್ಕೆ ಎಂಟ್ರಿ?

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್-ವೆಂಕಟೇಶ್ ಪ್ರಸಾದ್ ಭೇಟಿ
ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ
ಟ್ವೀಟ್ ಮೂಲಕ ವಿಚಾರ ಬಹಿರಂಗ ಪಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Karnataka Minister Laxmi Hebbalkar meet former Team India Cricketer Venkatesh Prasad discuss Political developments kvn
Author
First Published Jun 6, 2023, 1:41 PM IST

ಬೆಂಗಳೂರು(ಜೂ.06): 16ನೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಭರ್ಜರಿ ಬಹುಮತದೊಂದಿಗೆ ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸಿದೆ. ಇನ್ನು ಬೆಳಗಾಗಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅನಿರೀಕ್ಷಿತವಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರನ್ನು ಭೇಟಿಯಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದಷ್ಟೇ ಅಲ್ಲದೇ ವೆಂಕಟೇಶ್ ಪ್ರಸಾದ್ ಅವರು ರಾಜಕೀಯಕ್ಕೆ ಕರೆತರುವ ಪ್ರಯತ್ನದ ಬಗ್ಗೆಯೂ ಸುಳಿವನ್ನು ನೀಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್, "ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಮಧ್ಯಮ ವೇಗದ ಬೌಲರ್ ಶ್ರೀ ವೆಂಕಟೇಶ್ ಪ್ರಸಾದ್ ಹಾಗೂ ಅವರ ಧರ್ಮಪತ್ನಿಯನ್ನು ಆಕಸ್ಮಿಕವಾಗಿ ಭೇಟಿ ಮಾಡಲಾಯಿತು. ರಾಜಕೀಯ ಬಗ್ಗೆ ಅವರಿಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು" ಎಂದು ಬರೆದುಕೊಂಡಿದ್ದಾರೆ.

ಕನ್ನಡಿಗ, ನೀಳಕಾಯದ ವೇಗಿ ವೆಂಕಟೇಶ್‌ ಪ್ರಸಾದ್‌ 1994ರಿಂದ 2001ರ ವರೆಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. 1994ರಲ್ಲಿ ನ್ಯೂಜಿಲೆಂಡ್ ವಿರುದ್ದ ವೆಂಕಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಎರಡು ವರ್ಷಗಳ ಬಳಿಕ ಅಂದರೆ 1996ರಲ್ಲಿ ಇಂಗ್ಲೆಂಡ್ ಎದುರು ವೆಂಕಟೇಶ್ ಪ್ರಸಾದ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಭಾರತ ಪರ ವೆಂಕಟೇಶ್ ಪ್ರಸಾದ್‌ 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 96 ಹಾಗೂ 196 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವೆಂಕಟೇಶ್ ಪ್ರಸಾದ್ 2007ರಲ್ಲಿ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

ದೇವಸ್ಥಾನದ ಆವರಣದಲ್ಲೇ ಕ್ರಿಕೆಟ್ ಆಡಿದ ವೆಂಕಟೇಶ್ ಅಯ್ಯರ್‌..! ವಿಡಿಯೋ ವೈರಲ್‌

2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸಹಾಯಕ ಸಿಬ್ಬಂದಿಗಳಲ್ಲಿ ವೆಂಕಿ ಕೂಡಾ ಒಬ್ಬರೆನಿಸಿದ್ದರು. ವೆಂಕಟೇಶ್ ಪ್ರಸಾದ್ ಗರಡಿಯಲ್ಲಿ ಆರ್‌ ಪಿ ಸಿಂಗ್, ಇರ್ಫಾನ್ ಪಠಾಣ್ ಹಾಗೂ ಎಸ್ ಶ್ರೀಶಾಂತ್ ಅವರಂತಹ ವೇಗಿಗಳು ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. ಇದಾದ ಬಳಿಕ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾಣಿಸಿಕೊಂಡಿದ್ದರು. ಸದ್ಯ ವೆಂಕಟೇಶ್ ಪ್ರಸಾದ್‌ ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ವಾಹಿನಿಯ ವೀಕ್ಷಕ ವಿವರಣೆಗಾರರಾಗಿ ಗಮನ ಸೆಳೆದಿದ್ದಾರೆ.

ಇನ್ನು 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಾರಾ ಆಟಗಾರ ಅಂಬಟಿ ರಾಯುಡು, ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ರಾಯುಡು ಆಂಧ್ರ ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿಬಂದಿದ್ದು, ಇದುವರೆಗೂ ಯಾವುದೇ ಪಕ್ಷವನ್ನು ಸೇರ್ಪಡೆಗೊಂಡಿಲ್ಲ. ಇದೆಲ್ಲದರ ನಡುವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ವೆಂಕಟೇಶ್ ಪ್ರಸಾದ್ ನಡುವಿನ ಅಚಾನಕ್ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಟ್ವೀಟ್‌ನಂತೆ ವೆಂಕಟೇಶ್ ಪ್ರಸಾದ್ ಅವರಿಗೆ ರಾಜಕೀಯ ಬಗ್ಗೆ ಅವರಿಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು ಎಂಬ ಮಾತು ಸಾಕಷ್ಟು ಕುತೂಹಲ ಕೆರಳಿಸಿದೆ. ವೆಂಕಿಯನ್ನು ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

Follow Us:
Download App:
  • android
  • ios