ಕೈಯಲ್ಲಿ ಬ್ಯಾಟು, ತಲೆಮೇಲೆ ಹ್ಯಾಟು; ಲುಂಗಿ ಮೇಲೆಯೇ ಕ್ರಿಕೆಟ್ ಆಡಿದ ಸಿಎಂ ಸಿದ್ದರಾಮಯ್ಯ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಶಂಕುಸ್ಥಾಪನೆ ನೆರವೇರಿಸಿ. ಲುಂಗಿ ಧರಿಸಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.
ತುಮಕೂರು (ಡಿ.02): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಮೂಲದವರಾಗಿದ್ದು, ಗ್ರಾಮೀಣ ಪ್ರತಿಭೆಯಾಗಿದ್ದಾರೆ. ಹೀಗಾಗಿ, ತಾವು ಮೈಸೂರು ಹಾಗೂ ಚಾಮರಾಜನಗರದ ಗ್ರಾಮೀಣ ಶೈಲಿಯ ನೃತ್ಯವನ್ನು ಮಾಡುವ ಮೂಲಕ ಕನ್ನಡಿಗರಿಗೆ ಭಾರೀ ಇಷ್ಟವಾಗಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯ ಅವರು ಎಲ್ಲ ವರ್ಗದ ಯುವಕರು ಹಾಗೂ ಹಿರಿಯರು ಇಷ್ಟಪಡುವಂತಹ ಕ್ರಿಕೆಟ್ ಆಟವನ್ನು ಆಡಿದ್ದಾರೆ. ಲುಂಗಿ ಧರಿಸಿ ಕ್ರಿಕೆಟ್ ಕ್ಯಾಪ್ ಹಾಕಿ ಫೀಲ್ಡ್‌ಗಿಳಿದ ಸಿದ್ದರಾಮಯ್ಯ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ತುಮಕೂರಿನಲ್ಲಿ ಸರ್ಕಾರದ 50 ಎಕರೆ ಭೂಮಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯಿಂದ (ಕೆಎಸ್‌ಸಿಎ) ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕಾಮಗಾರಿ ವಹಿಸಲಾಗಿದೆ. ಇದಕ್ಕೆ ಸೋಮವಾರ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಲ್ಲಿ ಲುಂಗಿ ತೊಟ್ಟು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಈವರೆಗೆ ರಾಜ್ಯದಲ್ಲಿ ಗ್ರಾಮೀಣ ಸೊಗಡಿನ ನೃತ್ಯವನ್ನು ಮಾಡಿ ಪ್ರಸಿದ್ಧಿಯಾಗಿದ್ದ ಸಿದ್ದರಾಮಯ್ಯ ಅವರು ಇದೀಗ ಕ್ರಿಕೆಟ್ ಆಡುವ ಮೂಲಕ ಯುವಜನರ ಫೇವರೀಟ್ ಆಗಿದ್ದಾರೆ. ಇನ್ನು ಸ್ವತಃ ಕ್ರಿಕೆಟ್ ಪ್ರೇಮಿಯೂ ಆಗಿರುವ ಸಿದ್ದರಾಮಯ್ಯ ಅವರು, ಭಾರತ ಹಾಗೂ ಇತರೆ ದೇಶಗಳ ನಡುವೆ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಳಿತು ನೋಡಿದ್ದಾರೆ. ಇದೀಗ ತಾವೇ ಸ್ವತಃ ಬ್ಯಾಟ್ ಹಿಡಿದು ಬೌಂಡರಿ ಚಚ್ಚಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಹಾಗೂ ಜಿಲ್ಲೆಯ ಶಾಸಕರು, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ರಘುರಾಮ್ ಭಟ್ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಖ್ಯಾತಿ ಕುಗ್ಗಿಸಲಿದೆಯೇ ತುಮಕೂರು ಅಂತಾರಾಷ್ಟ್ರೀಯ ಸ್ಟೇಡಿಯಂ!
ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದೇವೆ. ಇದು ತುಮಕೂರು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಕ್ರೀಡಾ ಪ್ರಗತಿಗೆ ಪೂರಕವಾಗಲಿದೆ. ಆದಷ್ಟು ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸುವಂತೆ ಸೂಚನೆ ನೀಡಿದ್ದೇನೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದೆ. ಮೈಸೂರಿನಲ್ಲೂ ಜಾಗ ಕೊಡುತ್ತೇವೆ.
ತುಮಕೂರು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ಹಣದ ಆಮಿಷ ಒಡ್ಡಿರುವ ಸುದ್ದಿ ನೋಡಿದೆ. ನಾನು 41 ವರ್ಷದಿಂದ ಮಂತ್ರಿ ಆಗಿದ್ದೇನೆ. ಎರಡು ಬಾರಿ ವಿರೋಧ ಪಕ್ಷದ ನಾಯಕ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೀನಿ. ಇಂಥಾದ್ದಕ್ಕೆಲ್ಲಾ ಹೆದರಿದ್ದರೆ ರಾಜಕಾರಣದಲ್ಲಿ ಉಳಿಯೋಕೆ ಆಗ್ತಿರಲಿಲ್ಲ. ಯಾವ ತಪ್ಪು ಮಾಡದ ನಾನು ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನ ಎಂ ಚಿನ್ನಸ್ವಾಮಿಯ ಸ್ಟಾಂಡ್‌ಗೆ 10 ದಿಗ್ಗಜ ಕ್ರಿಕೆಟರ್ ಹೆಸರು!