ದುಬೈ(ಡಿ.08): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ಬ್ಯಾಟ್ಸ್‌ಮನ್‌ಗಳ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೇರಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆ ಜಂಟಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್‌ ವಿರುದ್ದದ ಮೊದಲ ಟೆಸ್ಟ್‌ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಪರಿಷ್ಕೃತ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪ್ರಕಟಿಸಿದ್ದು, ವಿಂಡೀಸ್ ಎದುರು ಆಕರ್ಷಕ 251 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್‌ 886 ರೇಟಿಂಗ್ ಅಂಕಗಳೊಂದಿಗೆ ಕೊಹ್ಲಿ ಜತೆ ಎರಡನೇ ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಾ ತಮ್ಮ ಖಾತೆಯಲ್ಲಿ 886 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ಇನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 911 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಭದ್ರವಾಗಿದ್ದಾರೆ. ಇನ್ನುಳಿದಂತೆ ಟೆಸ್ಟ್‌ ಬ್ಯಾಟ್ಸ್‌ಮನ್‌ ಟಾಪ್‌ 10 ಪಟ್ಟಿಯೊಳಗೆ ಸ್ಥಾನ ಪಡೆದ ಮತ್ತೊಬ್ಬ ಟೀಂ ಇಂಡಿಯಾ ಆಟಗಾರನೆಂದರೆ ಅದು ಚೇತೇಶ್ವರ್ ಪೂಜಾರ. ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 766 ರೇಟಿಂಗ್ ಅಂಕಗಳೊಂದಿಗೆ 7ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಜಿಲೆಂಡ್‌ಗೆ ಇನ್ನಿಂಗ್ಸ್‌ ಹಾಗೂ 134 ರನ್‌ಗಳ ಭರ್ಜರಿ ಜಯ

ಇನ್ನು ಟೆಸ್ಟ್‌ ಬೌಲರ್‌ಗಳ ಪಟ್ಟಿಯಲ್ಲಿ 904 ರೇಟಿಂಗ್ ಅಂಗಳೊಂದಿಗೆ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ನೀಲ್ ವ್ಯಾಗ್ನರ್, ಸ್ಟುವರ್ಟ್‌ ಬ್ರಾಡ್ ಹಾಗೂ ಟಿಮ್ ಸೌಥಿ ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿದ್ದಾರೆ. ಇನ್ನು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 9ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಜೇಸನ್ ಹೋಲ್ಡರ್ ಹಿಂದಿಕ್ಕಿರುವ ಬೆನ್ ಸ್ಟೋಕ್ಸ್‌ ಮೊದಲ ಸ್ಥಾನ ಆಕ್ರಮಿಸಿಕೊಂಡಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ 3ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.