ಹ್ಯಾಮಿಲ್ಟನ್(ಡಿ.07)‌: ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ನ್ಯೂಜಿಲೆಂಡ್‌ ಇನ್ನಿಂಗ್ಸ್‌ ಹಾಗೂ 134 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 

ಈ ಗೆಲುವಿನೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್‌, ತವರಿನಲ್ಲಿ ವಿಂಡೀಸ್‌ ಹಾಗೂ ಪಾಕಿಸ್ತಾನ ವಿರುದ್ಧ ನಡೆಯಲಿರುವ ಒಟ್ಟು 4 ಪಂದ್ಯಗಳನ್ನು ಜಯಿಸಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಗುರಿ ಹೊಂದಿದೆ. ಫಾಲೋ ಆನ್‌ ಹೇರಿಸಿಕೊಂಡು 2ನೇ ಇನ್ನಿಂಗ್ಸ್‌ 3ನೇ ದಿನದಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿದ್ದ ವಿಂಡೀಸ್‌, 4ನೇ ದಿನವಾದ ಭಾನುವಾರ 247 ರನ್‌ಗಳಿಗೆ ಆಲೌಟ್‌ ಆಯಿತು.

ಕೊರೋನಾದಿಂದಾಗಿ ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ಮೊದಲ ಏಕದಿನ ರದ್ದು!

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಟಾಮ್ ಲಾಥಮ್(86), ಕೈಲ್ ಜ್ಯಾಮಿಸ್ಸನ್(51*) ಹಾಗೂ ನಾಯಕ ಕೇನ್ ವಿಲಿಯಮ್ಸನ್‌ ಕೆಚ್ಚೆದೆಯ 251 ರನ್‌ಗಳ ನೆರವಿನಿಂದ 7 ವಿಕೆಟ್‌ ಕಳೆದುಕೊಂಡು 519 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು. 

ಇದಕ್ಕುತ್ತರವಾಗಿ ಟಿಮ್ ಸೌಥಿ ಮಾರಕ ದಾಳಿಗೆ ತತ್ತರಿಸಿದ ಕೆರಿಬಿಯನ್ನರು ಮೊದಲ ಇನಿಂಗ್ಸ್‌ನಲ್ಲಿ ಕೇವಲ 138 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಫಾಲೋಆನ್‌ಗೆ ಒಳಗಾಯಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಜೆರ್ಮೈನ್‌ ಬ್ಲಾಕ್‌ವುಡ್(104) ಹಾಗೂ ಅಲ್ಜೇರಿ ಜೋಸೆಫ್‌(86) ಆಕರ್ಷಕ ಬ್ಯಾಟಿಂಗ್‌ ಹೊರತಾಗಿಯೂ ಇನಿಂಗ್ಸ್‌ ಸೋಲು ಕಂಡಿತು.

ಸ್ಕೋರ್‌:

ನ್ಯೂಜಿಲೆಂಡ್‌ 519/7 ಡಿಕ್ಲೇರ್, 
ವಿಂಡೀಸ್‌ 138 ಹಾಗೂ 247