ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡೆಯುತ್ತಿರುವಾಗಲೇ ಈ ನಿರ್ಧಾರ ಪ್ರಕಟಿಸಿದ್ದು, 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 19,346 ರನ್ ಗಳಿಸಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೊಂದಿಗೆ ಅವರು ವಿದಾಯ ಹೇಳುತ್ತಿದ್ದಾರೆ.

ಲಂಡನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಹಾಗೂ ಮಾಜಿ ನಾಯಕ ಕೇನ್ ವಿಲಿಯಮ್ಸನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡೆಯುತ್ತಿರುವಾಗಲೇ 35 ವರ್ಷದ ವಿಲಿಯಮ್ಸನ್ ಈ ಅನಿರೀಕ್ಷಿತ ನಿರ್ಧಾರ ಪ್ರಕಟಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವೇ ತಮ್ಮ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಕೂಲ್ ಕ್ಯಾಪ್ಟನ್ ಖ್ಯಾತಿಯ ಕೇನ್ ವಿಲಿಯಮ್ಸನ್ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ 17ರಿಂದ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಆರಂಭವಾಗಬೇಕಿತ್ತು. ಈ ಹೊತ್ತಲ್ಲಿ ಬಂದ ನಿವೃತ್ತಿ ಸುದ್ದಿ ವಿಲಿಯಮ್ಸನ್ ಅವರ ಸಹ ಆಟಗಾರರನ್ನೂ ಅಚ್ಚರಿಗೊಳಿಸಿದೆ. ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೊಂದಿಗೆ ವಿಲಿಯಮ್ಸನ್ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳುತ್ತಿದ್ದಾರೆ. "ಕೆಲ ಕಾಲದಿಂದ ಈ ನಿರ್ಧಾರದ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಕಳೆದ ಕೆಲವು ದಿನಗಳಲ್ಲಿ ಇದೇ ಸರಿಯಾದ ಸಮಯ ಎಂದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ನ್ಯೂಜಿಲೆಂಡ್ ಪರ ಆಡಿದ ಎಲ್ಲಾ ಪಂದ್ಯಗಳಲ್ಲೂ ನನ್ನ ನೂರಕ್ಕೆ ನೂರು ಪ್ರತಿಶತ ನೀಡಿದ್ದೇನೆ ಎಂಬ ತೃಪ್ತಿಯೊಂದಿಗೆ ನಾನು ಕೆಳಗಿಳಿಯುತ್ತಿದ್ದೇನೆ," ಎಂದು ವಿಲಿಯಮ್ಸನ್ ಭಾವುಕರಾಗಿ ಹೇಳಿದ್ದಾರೆ.

2010ರಲ್ಲಿ ಕಿವೀಸ್‌ ಪರ ಪಾದಾರ್ಪಣೆ ಮಾಡಿದ ಕೇನ್ ವಿಲಿಯಮ್ಸನ್‌

2010ರಲ್ಲಿ ಭಾರತದ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡಕ್ಕೆ ಪದಾರ್ಪಣೆ ಮಾಡಿದರು. 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಅವರು 110 ಟೆಸ್ಟ್‌ಗಳಿಂದ 9515 ರನ್, 175 ಏಕದಿನ ಪಂದ್ಯಗಳಿಂದ 7257 ರನ್ ಮತ್ತು 90 ಟಿ20 ಪಂದ್ಯಗಳಿಂದ 2575 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 33 ಮತ್ತು ಏಕದಿನದಲ್ಲಿ 15 ಶತಕಗಳನ್ನು ಬಾರಿಸಿದ್ದಾರೆ. ಒಟ್ಟು 378 ಪಂದ್ಯಗಳಿಂದ 19,346 ರನ್ ಗಳಿಸಿ, ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ಪ್ಯಾಡ್ ಕಳಚಿಟ್ಟಿದ್ದಾರೆ.

ಕ್ಯಾಪ್ಟನ್ ಕೂಲ್ ಖ್ಯಾತಿಯ ಕೇನ್ ವಿಲಿಯಮ್ಸನ್

ಕೇವಲ ಬ್ಯಾಟರ್ ಆಗಿ ಮಾತ್ರವಲ್ಲ, ತಮ್ಮ ಶಾಂತ ಸ್ವಭಾವ ಮತ್ತು ಸಭ್ಯ ನಡವಳಿಕೆಯಿಂದ ವಿಲಿಯಮ್ಸನ್ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದರು. ನಾಯಕನಾಗಿ, ಅವರು ನ್ಯೂಜಿಲೆಂಡ್ ತಂಡವನ್ನು ಏಕದಿನ ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದಿದ್ದರು. 2021ರಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತಂಡಕ್ಕೆ ಕಿರೀಟವನ್ನು ತಂದುಕೊಟ್ಟರು. ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಕಿವೀಸ್ ಪಡೆಗೆ ಈ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಈ ಮೂಲಕ ದಶಕಗಳ ಬಳಿಕ ಕಿವೀಸ್ ತಂಡಕ್ಕೆ ಐಸಿಸಿ ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ಇನ್ನು 2019ರ ಏಕದಿನ ವಿಶ್ವಕಪ್ ಮತ್ತು 2021ರ ಟಿ20 ವಿಶ್ವಕಪ್‌ನಲ್ಲೂ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು. 2019ರ ವಿಶ್ವಕಪ್‌ನಲ್ಲಿ 'ಟೂರ್ನಮೆಂಟ್‌ನ ಶ್ರೇಷ್ಠ ಆಟಗಾರ' ಪ್ರಶಸ್ತಿಯನ್ನು ವಿಲಿಯಮ್ಸನ್ ಪಡೆದಿದ್ದರು. 2015ರ ಏಕದಿನ ವಿಶ್ವಕಪ್ ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್-ಅಪ್ ಆದ ನ್ಯೂಜಿಲೆಂಡ್ ತಂಡದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ಪರ ವಿಲಿಯಮ್ಸನ್ ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಗೆ ವಿಲಿಯಮ್ಸನ್ ಬದಲಿಗೆ ಬೇರೆ ಆಟಗಾರನನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಇನ್ನು ಕೇನ್ ವಿಲಿಯಮ್ಸನ್ ನಿವೃತ್ತಿಗೆ ದಿನೇಶ್ ಕಾರ್ತಿಕ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಅವರ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದ್ದಾರೆ.