ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಹಿನ್ನಡೆಯಾಗಿದ್ದು, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದರೂ, ಕಾಲಿನ ಉಳುಕಿನಿಂದ ಬಳಲುತ್ತಿರುವ ಪಾಂಡ್ಯ, ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯ ಸಲಹೆಯಂತೆ ವಿಶ್ರಾಂತಿ ಪಡೆಯಲಿದ್ದಾರೆ.

ಬೆಂಗಳೂರು: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಜೂನ್ 13ರಿಂದ ಆರಂಭವಾಗಲಿದೆ. ಈ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಿಂದ ಹೊರಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ನಿನ್ನೆಯಷ್ಟೇ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪಾಲ್ಗೊಂಡು ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದಾರೆ ಎಂದು ವರದಿಯಾಗಿತ್ತು. 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆಯಲ್ಲಿ ಬೆನ್ನು ನೋವಿನ ಸೆಳೆತಕ್ಕೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ, ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದರು. ಇದೀಗ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಇದೆಲ್ಲದರ ನಡುವೆ ಇದೀಗ ಹಾರ್ದಿಕ್ ಪಾಂಡ್ಯ ಕಾಲಿನ ಉಳುಕು ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಹಾರ್ದಿಕ್ ಪಾಂಡ್ಯ, ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

'ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ ಬಳಿಕ ಇದೀಗ ಭಾರತ ತಂಡಕ್ಕೆ ಕೊನೆಯ ಕ್ಷಣದಲ್ಲಿ ದೊಡ್ಡ ಹಿನ್ನಡೆ ಎದುರಾಗಿದ್ದು, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯಗೆ ಕಾಲಿನ ಉಳುಕು ಕಾಣಿಸಿಕೊಂಡಿದೆ. ಹೀಗಾಗಿ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ, ಹಾರ್ದಿಕ್ ಪಾಂಡ್ಯ ಅವರಿಗೆ ಮುಂದಿನ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ, ಇನ್ನು ಕೆಲವು ದಿನಗಳ ಕಾಲ ಹಾರ್ದಿಕ್ ಪಾಂಡ್ಯ ಬೆಂಗಳೂರಿನಲ್ಲೇ ಉಳಿದುಕೊಂಡು, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಸಿಯೋ ಮಾರ್ಗದರ್ಶನದಲ್ಲಿ ಚೇತರಿಸಿಕೊಳ್ಳಲು ಬಿಸಿಸಿಐ ಸೂಚಿಸಿದೆ' ಎಂದು ವರದಿಯಾಗಿದೆ.

2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಒಂದೂ ಏಕದಿನ ಪಂದ್ಯವನ್ನಾಡದ ಹಾರ್ದಿಕ್ ಪಾಂಡ್ಯ:

ಅಂದಹಾಗೆ ಭಾರತದ ಅತ್ಯಂತ ನಂಬಿಗಸ್ಥ ಬ್ಯಾಟಿಂಗ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, 2025ರ ಮಾರ್ಚ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಎದುರಿನ ಸರಣಿ ಸರಣಿ ಪ್ರವಾಸಕ್ಕೂ ಮುನ್ನ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಇನ್ನು ತವರಿನಲ್ಲೇ ನಡೆದ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಗೂ ಮುನ್ನ 2026ರ ಟಿ20 ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟುಕೊಂಡು ವರ್ಕ್‌ಲೋಡ್ ಮ್ಯಾನೇಜ್‌ ಮಾಡುವ ಉದ್ದೇಶದಿಂದ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ವಿಶ್ರಾಂತಿ ನೀಡಿತ್ತು.

ಆಫ್ಘಾನಿಸ್ತಾನ ಎದುರಿನ ಸರಣಿಗೂ ಮುನ್ನ ಇಂದು ಭಾರತ ತಂಡದ ಬಹುತೇಕ ಆಟಗಾರರು ಮೊಹಾಲಿಯಲ್ಲಿ ಸೇರಿಕೊಳ್ಳುವ ನಿರೀಕ್ಷೆಯಿದೆ. ಧರ್ಮಶಾಲಾಗೆ ವಿಮಾನವೇರುವ ಮುನ್ನ ಭಾರತ ತಂಡದ ಆಟಗಾರರು ಒಟ್ಟಾಗಿ ಅಭ್ಯಾಸ ನಡೆಸುವ ನಿರೀಕ್ಷೆಯಿದೆ.

ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿಗೆ ಭಾರತ ತಂಡ:

ಶುಭ್‌ಮನ್ ಗಿಲ್(ನಾಯಕ), ರೋಹಿತ್ ಶರ್ಮಾ,ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್(ಉಪನಾಯಕ), ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), (ಹಾರ್ದಿಕ್ ಪಾಂಡ್ಯ), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.