ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಆಯ್ಕೆಯ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ನಾಲ್ವರು ಸ್ಪಿನ್ನರ್‌ಗಳನ್ನು ಒಳಗೊಂಡಿರುವ ಈ ತಂಡದಲ್ಲಿ, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಆಗಸ್ಟ್ 15ರಂದು ಶ್ರೀಲಂಕಾ ವಿರುದ್ದ ಭಾರತ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಿಟ್ಟಿನಲ್ಲಿ ಲಂಕಾ ಎದುರಿನ ಟೆಸ್ಟ್ ಸರಣಿಯು ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಹೀಗಿರುವಾಗಲೇ ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿದ್ದಾರೆ. ಈ ಪೈಕಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಭಾರತ ತಂಡ ಲಂಕಾ ಎದುರು ನಾಲ್ಕು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿದೆ:
ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ರವೀಂದ್ರ ಜಡೇಜಾ, ಮಾನವ್ ಸುತಾರ್, ಸಾರಾನ್ಶ್ ಜೈನ್ ಹಾಗೂ ಕುಲ್ದೀಪ್ ಯಾದವ್ ಹೀಗೆ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಈ ನಾಲ್ವರು ಸ್ಪಿನ್ನರ್‌ಗಳ ಬೌಲಿಂಗ್ ಶೈಲಿಯು ವಿಭಿನ್ನವಾಗಿರುವುದರಿಂದ ಲಂಕಾ ಬ್ಯಾಟರ್‌ಗಳು ಪಿಚ್‌ಗೆ ಹೊಂದಿಕೊಳ್ಳಲು ಕಷ್ಟವಾಗಲಿದೆ ಎಂದು ಅಶ್ವಿನ್ ಹೇಳಿದ್ದಾರೆ.
ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಮಾತ್ರವಲ್ಲದೇ ಓರ್ವ ಸ್ಪೆಷಲಿಸ್ಟ್ ಬ್ಯಾಟರ್ ಆಗಿಯೂ ತಂಡಕ್ಕೆ ಆಸರೆಯಾಗಬಲ್ಲರು. ಇನ್ನು ಸಾರಾನ್ಶ್ ಜೈನ್ ಈಗಾಗಲೇ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಜೈನ್ ಕೂಡಾ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.
'ಜಡೇಜಾ ಖಂಡಿತವಾಗಿಯೂ ಆಡುತ್ತಾರೆ. ಇನ್ನು ಮಾನವ್ ಸುತಾರ್ ಕಳೆದ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಕಬಳಿಸಿದ್ದರು. ಹೀಗಾಗಿ ಸುತಾರ್‌ಗೆ ಕೂಡಾ ತಂಡದಲ್ಲಿ ಅವಕಾಶ ಸಿಗಲಿದೆ. ಇನ್ನು ತಜ್ಞ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡಾ ಆಡಲಿದ್ದಾರೆ. ಅಲ್ಲಿಗೆ ಮೂವರು ಸ್ಪಿನ್ನರ್‌ಗಳಾಯ್ತು. ಇನ್ನು ಏಳನೇ ಕ್ರಮಾಂಕದಲ್ಲಿ ಸಾರಾನ್ಶ್ ಜೈನ್‌ಗೂ ಅವಕಾಶ ಸಿಗಬಹುದು. ಹೀಗಾದಲ್ಲಿ ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶುಭ್‌ಮನ್ ಗಿಲ್, ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಇಲ್ಲವೇ ಸಾಯಿ ಸುದರ್ಶನ್, ಆರಂಭಿಕರಾಗಿ ಕೆ ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆಯಲಿದ್ದಾರೆ. ಹೀಗಾದಲ್ಲಿ ಎರಡು ವೇಗಿಗಳ ಸ್ಥಾನ ಬಾಕಿ ಉಳಿಯಲಿದೆ ಎಂದು ಅಶ್ವಿನ್ ಹೇಳಿದ್ದಾರೆ.
ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ನಾಲ್ವರು ವೇಗಿಗಳು ಮಾತ್ರ ಸ್ಥಾನ ಪಡೆದಿದ್ದಾರೆ. ಈ ಪೈಕಿ ಮೊದಲ ಟೆಸ್ಟ್‌ಗೆ ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ದ್ ಕೃಷ್ಣ ನಡುವೆ ಪೈಪೋಟಿಯಿದೆ. ಈ ಮೂವರ ಪೈಕಿ ಇಬ್ಬರಿಗೆ ಸ್ಥಾನ ಸಿಗಲಿದೆ. ಹೀಗಾದಲ್ಲಿ ಜಸ್ಪ್ರೀತ್ ಬುಮ್ರಾಗೆ ರೆಸ್ಟ್ ನೀಡುವುದು ಬೆಸ್ಟ್ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಅಶ್ವಿನ್ ಆಯ್ಕೆ ಮಾಡಿದ ಭಾರತ ಸಂಭಾವ್ಯ ತಂಡ ಹೀಗಿದೆ.
ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್/ದೇವದತ್ ಪಡಿಕ್ಕಲ್, ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸಾರಾನ್ಶ್ ಜೈನ್, ಮಾನವ್ ಸುತಾರ್, ಕುಲ್ದೀಪ್ ಯಾದವ್, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್/ಪ್ರಸಿದ್ದ್ ಕೃಷ್ಣ.


