ಲಖನೌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ರಹಸ್ಯವನ್ನು ನಾಯಕ ಜಿತೇಶ್ ಶರ್ಮಾ ಬಿಚ್ಚಿಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಅವರ ಪ್ರೋತ್ಸಾಹದ ಮಾತುಗಳು ತಮ್ಮ ಆತ್ಮವಿಶ್ವಾಸ ಹೆಚ್ಚಿಸಿದವು ಎಂದು ಹೇಳಿದ್ದಾರೆ.
ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ ಜಿದ್ದಿಗೆ ಬಿದ್ದಂತೆ ಹೋರಾಟ ನಡೆಸಿ ಲಖನೌ ಎದುರು ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲುವಿನ ಬೆನ್ನಲ್ಲೇ ಮಾತನಾಡಿದರ ಜಿತೇಶ್ ಶರ್ಮಾ, ತಾವು ಮೈಚಳಿ ಬಿಟ್ಟು ಬ್ಯಾಟ್ ಬೀಸಲು ಕಾರಣವಾದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಫಿಯರ್‌ಲೆಸ್ ಬ್ಯಾಟಿಂಗ್‌ಗೆ ತಮ್ಮ ಗುರು ಹಾಗೂ ಮೆಂಟರ್ ದಿನೇಶ್ ಕಾರ್ತಿಕ್ ಅವರು ಹೇಳಿದ ಆ ಒಂದು ಮಾತೇ ಕಾರಣ ಎನ್ನುವ ಆಸಕ್ತಿದಾಯಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಲಖನೌ ತಂಡಗಳು ಮುಖಾಮುಖಿಯಾಗಿದ್ದವು. ಮೊದಲ ಬ್ಯಾಟ್ ಮಾಡಿದ ಲಖನೌ, ನಾಯಕ ರಿಷಭ್ ಪಂತ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 227 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗೆಲ್ಲಲು ಕಠಿಣ ಗುರಿ ಪಡೆದ ಆರ್‌ಸಿಬಿಗೆ ಲಖನೌ ಕೊಟ್ಟ ಟಾರ್ಗೆಟ್ ಆರಂಭದಲ್ಲಿ ಬೆಟ್ಟದಂತೆ ಭಾಸವಾಗಿತ್ತು. ಆದರೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮೊದಲ ವಿಕೆಟ್‌ಗೆ ಸ್ಪೋಟಕ ಅರ್ಧಶತಕದ ಜತೆಯಾಟವಾಡಿಕೊಟ್ಟರು. ಆದರೆ 123 ರನ್ ಗಳಿಸುವಷ್ಟರಲ್ಲಿ ಆರ್‌ಸಿಬಿ ತಂಡವು ಫಿಲ್ ಸಾಲ್ಟ್, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಅಷ್ಟರಲ್ಲಾಗಲೇ 11 ಓವರ್ ಮುಕ್ತಾಯವಾಗಿತ್ತು. ಆಗ ಕ್ರೀಸ್‌ಗಿಳಿದ ಜಿತೇಶ್ ಶರ್ಮಾ, ಕನ್ನಡಿಗ ಮಯಾಂಕ್ ಅಗರ್‌ವಾಲ್ ಅವರ ಜತೆಗೂಡಿ ಅಜೇಯ ಶತಕದ ಜತೆಯಾಟವಾಡುವ ಮೂಲಕ ಇನ್ನೂ 8 ಎಸೆತ ಬಾಕಿ ಇರುವಂತೆಯೇ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಜಿತೇಶ್ ಶರ್ಮಾ ಕೇವಲ 33 ಎಸೆತಗಳನ್ನು ಎದುರಿಸಿ 257.58ರ ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 85 ರನ್ ಸಿಡಿಸಿದರು. ಮಯಾಂಕ್ ಅಗರ್‌ವಾಲ್ ಜತೆಗೂಡಿ ಜಿತೇಶ್ ಶರ್ಮಾ ಮುರಿಯದ 107 ರನ್‌ಗಳ ಜತೆಯಾಟವಾಡಿ, ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಜಿತೇಶ್ ಶರ್ಮಾ, 'ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ನಾನು ಈ ಇನ್ನಿಂಗ್ಸ್ ಆಡಿದೆನಾ ಎನ್ನುವುದನ್ನು ನಂಬುವುದಕ್ಕೂ ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ ಔಟ್ ಆದ ಬಳಿಕ ನಾನು ಪಂದ್ಯವನ್ನು ಎಷ್ಟು ಕೊನೆಯವರೆಗೂ ಕೊಂಡೊಯ್ಯಲು ಸಾಧ್ಯವೋ ಅಲ್ಲಿಯವರೆಗೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದೆ. ಆಗ ನನ್ನ ಗುರು ಹಾಗೂ ಮೆಂಟರ್ ದಿನೇಶ್ ಕಾರ್ತಿಕ್ ಬಂದು, ನೀನು ಎಷ್ಟು ಸಾಧ್ಯವೋ ಅಷ್ಟು ಕೊನೆಯವರೆಗೂ ಮ್ಯಾಚ್ ತೆಗೆದುಕೊಂಡು ಹೋಗು. ನಿನಗೆ ಮ್ಯಾಚ್ ಫಿನಿಶ್ ಮಾಡುವ ಸಾಮರ್ಥ್ಯವಿದೆ ಎಂದು ಧೈರ್ಯ ತುಂಬಿದರು ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ ಬಾರಿಗೆ 2016ರಲ್ಲಿ ಐಪಿಎಲ್ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್ ಎದುರು ಮುಗ್ಗರಿಸುವ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಆರ್‌ಸಿಬಿ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಆರ್‌ಸಿಬಿ ಕ್ವಾಲಿಫೈಯರ್ 1 ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಕ್ವಾಲಿಫೈಯರ್ 1 ಜಯಿಸಿದರೆ, ಆರ್‌ಸಿಬಿ ಜೂನ್ 03ರಂದು ನಡೆಯಲಿರುವ ಫೈನಲ್‌ಗೆ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳಲಿದೆ.
