SA20 League: ಒಂದೇ ಕೈಯಲ್ಲಿ ಜೇಮ್ಸ್ ನೀಶಮ್ ಹಿಡಿದ ಕ್ಯಾಚ್ ವಿಡಿಯೋ ವೈರಲ್..!
SA20 League ಟೂರ್ನಿಯಲ್ಲಿ ಜೇಮ್ಸ್ ನೀಶಮ್ ಅದ್ಭುತ ಕ್ಯಾಚ್
ಡರ್ಬನ್ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ನೀಶಮ್ ಅದ್ಭುತ ಕ್ಯಾಚ್
ಅಗ್ರಸ್ಥಾನದಲ್ಲೇ ಮುಂದುವರೆದ ಪ್ರಿಟೋರಿಯಾ ಕ್ಯಾಪಿಟಲ್ಸ್
ಕೇಪ್‌ಟೌನ್(ಫೆ.06): ಚೊಚ್ಚಲ ಆವೃತ್ತಿಯ SA20 ಲೀಗ್ ಟೂರ್ನಿಯು ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಜಗತ್ತಿನ ಹಲವು ಅದ್ಭುತ ಟಿ20 ಸ್ಪೆಷಲಿಸ್ಟ್ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಪಂದ್ಯಾಟವು ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.
ಇದೀಗ ದರ್ಬನ್ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಲ್ರೌಂಡರ್ ಜೇಮ್ಸ್ ನೀಶಮ್ ಹಿಡಿದ ಅದ್ಭುತ ಕ್ಯಾಚ್, ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿದೆ. ಪಾಯಿಂಟ್‌ನಲ್ಲಿ ನಿಂತು ಕ್ಷೇತ್ರರಕ್ಷಣೆ ಮಾಡುತ್ತಿದ್ದ ಜೇಮ್ಸ್ ನೀಶಮ್, ತಮ್ಮಿಂದ ಸಾಕಷ್ಟು ದೂರಕ್ಕೆ ಬಂದ ಕ್ಯಾಚ್‌ನ್ನು ಅದ್ಭುತ ಡೈವ್ ಮೂಲಕ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋವೋಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಜೇಮ್ಸ್ ನೀಶಮ್ ಹಿಡಿದ ಕ್ಯಾಚ್ ನೋಡಿ ಬ್ಯಾಟಿಂಗ್ ಮಾಡುತ್ತಿದ್ದ ಡರ್ಬನ್ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್ ವಿಯಾನ್ ಮುಲ್ಡರ್ ಒಂದು ಕ್ಷಣ ತಬ್ಬಿಬ್ಬಾಗಿ ಹೋದರು. ಹೀಗಿತ್ತು ನೋಡಿ ಜೇಮ್ಸ್ ನೀಶಮ್ ಹಿಡಿದ ಕ್ಯಾಚ್ ವಿಡಿಯೋ
ಇನ್ನು ಚೊಚ್ಚಲ ಆವೃತ್ತಿಯ SA20 ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ನ್ಯೂಜಿಲೆಂಡ್ ಸ್ಟಾರ್ ಆಲ್ರೌಂಡರ್ ಜೇಮ್ಸ್ ನೀಶಮ್, ಇದೊಂದು ರೀತಿ ಸಣ್ಣ ಐಪಿಎಲ್ ಆಡಿದಂತೆ ಭಾಸವಾಗುತ್ತಿದೆ ಎಂದಿದ್ದಾರೆ. " ಟೂರ್ನಿಯು ತುಂಬಾ ಚೆನ್ನಾಗಿ ನಡೆಯುತ್ತಿದೆ. ತುಂಬಾ ಒಳ್ಳೆಯ ಅಭಿಮಾನಿಗಳು, ತುಂಬಾ ಒಳ್ಳೆಯ ವಾತಾವರಣವಿದ್ದು, ನಾವು ಈ ಟೂರ್ನಿಯನ್ನು ಎಂಜಾಯ್ ಮಾಡುತ್ತಿದ್ದೇವೆ. ಸದ್ಯ ನಾವು ಟೂರ್ನಿಯಲ್ಲಿ ಅರ್ಧಭಾಗ ಕ್ರಮಿಸಿದ್ದೇವೆ. ಇನ್ನು ಮುಂದಿನ ಕೆಲ ವಾರಗಳು ಕೂಡಾ ಉತ್ತಮ ಪ್ರದರ್ಶನದ ಹೊರಹೊಮ್ಮುವ ವಿಶ್ವಾಸವಿದೆ ಎಂದು ಜೇಮ್ಸ್ ನೀಶಮ್ ಹೇಳಿದ್ದಾರೆ.
ಅಗ್ರಸ್ಥಾನದಲ್ಲೇ ಮುಂದುವರೆದ ಪ್ರಿಟೋರಿಯಾ ಕ್ಯಾಪಿಟಲ್ಸ್:
ಚೊಚ್ಚಲ ಆವೃತ್ತಿಯ SA20 ಲೀಗ್ ಟೂರ್ನಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಆಡಿದ 9 ಪಂದ್ಯಗಳಲ್ಲಿ 6 ಗೆಲುವು ಹಾಗೂ 3 ಸೋಲುಗಳೊಂದಿಗೆ 27 ಅಂಕಗಳ ಸಹಿತ ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೆ ಮುಂದುವರೆದಿದೆ. ಇನ್ನು ಫಾಫ್ ಡು ಪ್ಲೆಸಿಸ್ ನೇತೃತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವು 9 ಪಂದ್ಯಗಳಲ್ಲಿ 5 ಗೆಲುವು ಹಾಗೂ 3 ಸೋಲು ಒಂದು ಪಂದ್ಯ ರದ್ದಾಗಿದ್ದರಿಂದ 22 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
SA20 ಟೂರ್ನಿಯ ರೋಚಕತೆ ಹೆಚ್ಚಿಸುತ್ತಿದ್ದಾರೆ ಅನುಭವಿ ಕ್ರಿಕೆಟಿಗರು..!
ಪಾರ್ಲ್ ರಾಯಲ್ಸ್ ತಂಡದ ನಾಯಕ ಜೋಸ್ ಬಟ್ಲರ್ ಸದ್ಯ 8 ಪಂದ್ಯಗಳನ್ನಾಡಿ 40.71ರ ಬ್ಯಾಟಿಂಗ್ ಸರಾಸರಿಯಲ್ಲಿ 285 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಫಾಫ್ ಡು ಪ್ಲೆಸಿಸ್(277), ವಿಲ್ ಜೇಕ್ಸ್(270), ಹೆನ್ರಿಚ್ ಕ್ಲಾಸೇನ್(259) ಹಾಗೂ ಏಯ್ಡನ್ ಮಾರ್ಕ್‌ರಮ್(200) ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ರೂಲೆಫ್ ವ್ಯಾನ್ ಡರ್ ಮೆರ್ವೆ 6 ಪಂದ್ಯಗಳಿಂದ 14 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದರೇ, ಏನ್ರಿಚ್ ನೋಕಿಯಾ, ಇಮಾದ್ ಪೋರ್ಟಿನ್ ತಲಾ 13 ವಿಕೆಟ್ ಪಡೆದರೆ, ಎವಾನ್ ಜೋನ್ಸ್ 12 ಹಾಗೂ ಗೆರಾರ್ಲ್ಡ್ ಕೋರ್ಜಿ 11 ವಿಕೆಟ್ ಕಬಳಿಸುವ ಮೂಲಕ ಟಾಪ್ 5 ಪಟ್ಟಿಯೊಳಗೆ ಸ್ಥಾನಪಡೆದಿದ್ದಾರೆ.