ಬೆಂಗಳೂರು(ಫೆ.20): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿ ಶನಿವಾರದಿಂದ ಆರಂಭಗೊಳ್ಳಲಿದ್ದು, ಎಲೈಟ್‌ ‘ಸಿ’ ಗುಂಪಿನಲ್ಲಿರುವ ಕರ್ನಾಟಕ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಸೆಣಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಕಳೆದ ತಿಂಗಳು ನಡೆದಿದ್ದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ತೋರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡಿದ್ದ ಕರ್ನಾಟಕ ಟ್ರೋಫಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇದೀಗ ವಿಜಯ್‌ ಹಜಾರೆಯಲ್ಲೂ ಹಾಲಿ ಚಾಂಪಿಯನ್‌ ಆಗಿರುವ ಕರ್ನಾಟಕ, ಮತ್ತೊಂದು ಪ್ರಶಸ್ತಿ ಕೈ ತಪ್ಪದಂತೆ ಎಚ್ಚರ ವಹಿಸಬೇಕಿದೆ. ಒಟ್ಟು 6 ನಗರಗಳಲ್ಲಿ ಗುಂಪು ಹಂತದ ಪಂದ್ಯಗಳು ನಡೆಯಲಿದ್ದು, ತಂಡಗಳನ್ನು 5 ಎಲೈಟ್‌ ಗುಂಪುಗಳು ಹಾಗೂ ಒಂದು ಪ್ಲೇಟ್‌ ಗುಂಪಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಲಿವೆ. ಉಳಿದ 2 ಸ್ಥಾನಗಳು ನೆಟ್‌ ರನ್‌ರೇಟ್‌ ಇಲ್ಲವೇ ಅಂಕಗಳ ಆಧಾರದಲ್ಲಿ ಮುಂದಿರುವ 2 ತಂಡಗಳಿಗೆ ಸಿಗಲಿವೆ.

ಸಮರ್ಥ್‌ಗೆ ಸವಾಲು: ಹೊಸದಾಗಿ ನಾಯಕತ್ವ ವಹಿಸಿಕೊಂಡಿರುವ ಆರ್‌.ಸಮರ್ಥ್ ಮೇಲೆ ಭಾರೀ ನಿರೀಕ್ಷೆ ಇದೆ. ಮುಷ್ತಾಕ್‌ ಅಲಿ ಟಿ20ಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸದ ಕರುಣ್‌ ನಾಯರ್‌ರನ್ನು ಕೆಳಗಿಳಿಸಿ ಸಮರ್ಥ್‌ಗೆ ನಾಯಕತ್ವದ ಹೊಣೆ ನೀಡಲಾಗಿದೆ. ಕರ್ನಾಟಕ ತಂಡ ತನ್ನ ತಾರಾ ಆಟಗಾರರಾದ ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ಮನೀಶ್‌ ಪಾಂಡೆ ಇಲ್ಲದೆ ಕಣಕ್ಕಿಳಿಯಲಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ದೇವದತ್‌ ಪಡಿಕ್ಕಲ್‌ ಮೇಲೆ ದೊಡ್ಡ ನಿರೀಕ್ಷೆ ಇದೆ. ಸಮರ್ಥ್‌‍, ಡಿ.ನಿಶ್ಚಲ್‌, ರೋಹನ್‌ ಕದಂ, ಅನಿರುದ್ಧ ಜೋಶಿ ಜವಾಬ್ದಾರಿಯುತ ಆಟವಾಡಬೇಕಿದೆ.

ವಿಜಯ್‌ ಹಜಾರೆ: ಆರ್‌ ಸಮರ್ಥ್‌ಗೆ ಒಲಿದ ಕರ್ನಾಟಕ ತಂಡದ ನಾಯಕ ಪಟ್ಟ

ಕರುಣ್‌ಗೆ ಮತ್ತೆ ಅವಕಾಶ: ಕಳೆದ ಒಂದೆರಡು ಋುತುಗಳಿಂದ ಲಯದ ಸಮಸ್ಯೆ ಎದುರಿಸುತ್ತಿದ್ದರೂ ಕರುಣ್‌ ನಾಯರ್‌ಗೆ ತಂಡದ ಆಡಳಿತ ಹೆಚ್ಚಿನ ಅವಕಾಶಗಳನ್ನು ನೀಡುತ್ತಲೇ ಇದೆ. ಈ ಟೂರ್ನಿಯಲ್ಲೂ ಅವರಿಗೆ ಅವಕಾಶ ಸಿಗಲಿದೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಅನುಭವಕ್ಕಿಲ್ಲ ಕೊರತೆ: ಕರ್ನಾಟಕ ತಂಡದಲ್ಲಿ ತಾರಾ ಆಟಗಾರರ ಕೊರತೆ ಇದ್ದರೂ ಅನುಭವಕ್ಕೆ ಕೊರತೆ ಇಲ್ಲ. ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌ ಅನುಭವಿ ಸ್ಪಿನ್ನರ್‌ಗಳಾಗಿದ್ದಾರೆ. ವೇಗಿಗಳಾದ ಅಭಿಮನ್ಯು ಮಿಥುನ್‌, ಪ್ರಸಿದ್ಧ್‌ ಕೃಷ್ಣ, ರೋನಿತ್‌ ಮೋರೆ ಹಲವು ವರ್ಷಗಳಿಂದ ರಾಜ್ಯ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ತಂಡಕ್ಕೆ ಆಲ್ರೌಂಡರ್‌ ಕೆ.ಗೌತಮ್‌ ಅನುಪಸ್ಥಿತಿ ಕಾಡಲಿದೆ. ಗೌತಮ್‌ ಭಾರತ ತಂಡದೊಂದಿಗೆ ನೆಟ್‌ ಬೌಲರ್‌ ಆಗಿ ತೆರಳಿರುವ ಕಾರಣ, ಅವರ ಸೇವೆ ಲಭ್ಯವಾಗುವುದಿಲ್ಲ.

ಉತ್ತರ ಪ್ರದೇಶ ತಂಡವನ್ನು ಭಾರತ ತಂಡದ ವೇಗಿ ಭುವನೇಶ್ವರ್‌ ಕುಮಾರ್‌ ಮುನ್ನಡೆಸಲಿದ್ದಾರೆ. ಯುವ ಆಟಗಾರರಾದ ಪ್ರಿಯಂ ಗರ್ಗ್‌, ಕಾರ್ತಿಕ್‌ ತ್ಯಾಗಿ, ಶಿವಂ ಮಾವಿ, ರಿಂಕು ಸಿಂಗ್‌, ಆರ್ಯನ್‌ ಜುಯಲ್‌ ತಂಡದಲ್ಲಿದ್ದು, ಕರ್ನಾಟಕಕ್ಕೆ ಭರ್ಜರಿ ಪೈಪೋಟಿ ಎದುರಾಗಲಿದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ

ಕರ್ನಾಟಕದ ವೇಳಾಪಟ್ಟಿ 

ದಿನಾಂಕ ಎದುರಾಳಿ

ಫೆ.20 ಉತ್ತರ ಪ್ರದೇಶ

ಫೆ.22 ಬಿಹಾರ

ಫೆ.24 ಒಡಿಶಾ

ಫೆ.26 ಕೇರಳ

ಫೆ.28 ರೈಲ್ವೇಸ್‌

ಇಂಗ್ಲೆಂಡ್‌ ಸರಣಿಗೆ ಆಯ್ಕೆಗೆ ವೇದಿಕೆ

ವಿಜಯ್‌ ಹಜಾರೆ ಟೂರ್ನಿಯಲ್ಲಿ ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಪೃಥ್ವಿ ಶಾ, ಭುವನೇಶ್ವರ್‌ ಕುಮಾರ್‌, ಸೂರ್ಯಕುಮಾರ್‌ ಯಾದವ್‌, ಕೃನಾಲ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌ ಸೇರಿದಂತೆ ಇನ್ನೂ ಕೆಲ ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸೀಮಿತ ಓವರ್‌ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಲು ಈ ಟೂರ್ನಿಯನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ.