Asianet Suvarna News Asianet Suvarna News

'ಜಸ್ಪ್ರೀತ್ ಬುಮ್ರಾ, ಶಾಹೀನ್‌ ಅಫ್ರಿದಿ ಹತ್ತಿರವೂ ಬರಲೂ ಸಾಧ್ಯವಿಲ್ಲ'

ಶಾಹೀನ್‌ ಅಫ್ರಿದಿ-ಜಸ್ಪ್ರೀತ್ ಬುಮ್ರಾ ನಡುವಿನ ಹೋಲಿಕೆ ಚರ್ಚೆ ಆರಂಭ
ಗಾಯದ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ, ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ
ಬುಮ್ರಾಗಿಂತ ಶಾಹೀನ್ ಅಫ್ರಿದಿ ಅತ್ಯುತ್ತಮ ಬೌಲರ್‌ ಎಂದು ಬಣ್ಣಿಸಿದ ಪಾಕ್ ಮಾಜಿ ಕ್ರಿಕೆಟಿಗ

Jasprit Bumrah Not Even Close To Shaheen Afridi Says Abdul Razzaq kvn
Author
First Published Jan 30, 2023, 2:30 PM IST

ಕರಾಚಿ(ಜ.30): ಆಧುನಿಕ ಕ್ರಿಕೆಟ್‌ನ ಉಪಖಂಡದಲ್ಲಿ ಮಾರಕ ವೇಗಿಗಳು ಯಾರೆಂದು ಕೇಳಿದರೇ, ತಕ್ಷಣ ನೆನಪಾಗುವ ಹೆಸರೆಂದರೇ ಜಸ್ಪ್ರೀತ್ ಬುಮ್ರಾ ಮತ್ತು ಶಾಹೀನ್ ಅಫ್ರಿದಿ. ಸದ್ಯ ಗಾಯದ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ, ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಹೀಗಿದ್ದೂ ಬುಮ್ರಾ, ಯಾವುದೇ ಕ್ಷಣದಲ್ಲಿ ಬೇಕಾದರೂ ಕಮ್‌ಬ್ಯಾಕ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. 

29 ವರ್ಷದ ಬುಮ್ರಾ,  ಭಾರತ ಪರ 30 ಟೆಸ್ಟ್ ಪಂದ್ಯಗಳನ್ನಾಡಿ 128 ವಿಕೆಟ್ ಕಬಳಿಸಿದ್ದಾರೆ. 78 ಏಕದಿನ ಪಂದ್ಯಗಳನ್ನಾಡಿ 121 ವಿಕೆಟ್ ಹಾಗೂ 60 ಟಿ20 ಪಂದ್ಯಗಳನ್ನಾಡಿ 70 ವಿಕೆಟ್ ಬಲಿ ಪಡೆದಿದ್ದಾರೆ. ಇನ್ನು ಮತ್ತೊಂದೆಡೆ ಪಾಕಿಸ್ತಾನದ 22 ವರ್ಷದ ಎಡಗೈ ವೇಗಿ ಶಾಹೀನ್ ಅಫ್ರಿದಿ (Shaheen Afridi), 25 ಟೆಸ್ಟ್ ಪಂದ್ಯಗಳನ್ನಾಡಿ 99 ವಿಕೆಟ್, 32 ಏಕದಿನ ಪಂದ್ಯಗಳನ್ನಾಡಿ 62 ವಿಕೆಟ್ ಹಾಗೂ 47 ಟಿ20 ಪಂದ್ಯಗಳನ್ನಾಡಿ 58 ವಿಕೆಟ್ ಕಬಳಿಸಿದ್ದಾರೆ.

ಈ ಅಂಕಿ-ಅಂಶಗಳನ್ನು ಗಮನಿಸಿದರೇ, ಈ ಇಬ್ಬರು ಆಟಗಾರರು ಬಹುತೇಕ ಸಮಾನವಾದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಿರುವಾಗ, ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ (Abdul Razzaq), ಈ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಶಾಹೀನ್ ಅಫ್ರಿದಿ ತುಂಬಾ ಅದ್ಭುತ ಬೌಲರ್‌, ಜಸ್ಪ್ರೀತ್ ಬುಮ್ರಾ (Jasprit Bumrah), ಅವರ ಬಳಿಯೂ ಸುಳಿಯಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಖಾಸಗಿ ಚಾನೆಲ್‌ವೊಂದರಲ್ಲಿ ಅಬ್ದುಲ್ ರಜಾಕ್‌ ಹೇಳಿದ್ದಾರೆ. ಪಾಕಿಸ್ತಾನದ ತ್ರಿವಳಿ ವೇಗಿಗಳಾದ ನಸೀಮ್ ಶಾ, ಹ್ಯಾರಿಸ್ ರೌಫ್ ಹಾಗೂ ಶಾಹೀನ್‌ ಅಫ್ರಿದಿ ಯಾರು ಬೆಸ್ಟ್ ಎಂದು ಕೇಳಿದ ಪ್ರಶ್ನೆಗೆ "ಮೂವರು ವೇಗಿಗಳು ಬೆಸ್ಟ್‌" ಎಂದು ರಜಾಕ್ ಹೇಳಿದ್ದಾರೆ.

ಫೆಬ್ರವರಿ 1ಕ್ಕೆ ಭಾರತಕ್ಕೆ ಬಂದಿಳಿಯಲಿದೆ ಆಸೀಸ್‌, ಬೆಂಗಳೂರಲ್ಲಿ ಅಭ್ಯಾಸ

ಜಸ್ಪ್ರೀತ್ ಬುಮ್ರಾ, 2022ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು. ಇದಾದ ಬಳಿಕ ಫಿಟ್ನೆಸ್ ಸಮಸ್ಯೆಯಿಂದಾಗಿ ಬುಮ್ರಾ, ಏಷ್ಯಾಕಪ್ ಟೂರ್ನಿ, ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು. ಕೆಲ ದಿನಗಳ ಹಿಂದಷ್ಟೇ ಜಸ್ಪ್ರೀತ್ ಬುಮ್ರಾ ಲಭ್ಯತೆಯ ಕುರಿತಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲ ಬಾರಿಗೆ ತುಟಿಬಿಚ್ಚಿದ್ದರು.

" ಸದ್ಯದ ಮಟ್ಟಿಗಂತೂ ಜಸ್ಪ್ರೀತ್ ಬುಮ್ರಾ, ಯಾವಾಗ ತಂಡ ಕೂಡಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border Gavaskar Trophy) ಮೊದಲೆರಡು ಪಂದ್ಯಗಳಿಗೆ ಬುಮ್ರಾ ಅಲಭ್ಯರಾಗಿದ್ದಾರೆ. ನನ್ನ ಪ್ರಕಾರ, ಕೊನೆಯ ಎರಡು ಪಂದ್ಯಗಳಿಗೆ ಬುಮ್ರಾ, ಟೀಂ ಇಂಡಿಯಾ (Team India) ಕೂಡಿಕೊಳ್ಳುವ ವಿಶ್ವಾಸವಿದೆ. ನಾವು ಅವರನ್ನೂ ಗಾಯದ ವಿಚಾರದಲ್ಲಿ ಆತಂಕಕ್ಕೆ ದೂಡುವುದಿಲ್ಲ. ಇದಾದ ಬಳಿಕವೂ ನಾವೆಲ್ಲ ಹಲವು ಮಹತ್ವದ ಕ್ರಿಕೆಟ್ ಸರಣಿಗಳನ್ನು ಆಡಬೇಕಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನಾವು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಫಿಸಿಯೋ ಹಾಗೂ ವೈದ್ಯರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಾವು ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದೇವೆ. ನಮ್ಮ ವೈದ್ಯಕೀಯ ಸಿಬ್ಬಂದಿಯು ಜಸ್ಪ್ರೀತ್ ಬುಮ್ರಾ ಅವರಿಗೆ ಎಷ್ಟು ವಿಶ್ರಾಂತಿ ಅಗತ್ಯವಿದೆಯೋ ಅಷ್ಟು ನೀಡಲು ಬಯಸಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

Follow Us:
Download App:
  • android
  • ios