ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಿಂದ ಗಾಯಾಳು ಇಶಾನ್ ಕಿಶನ್ ಹೊರಬಿದ್ದಿದ್ದಾರೆ. ಇವರ ಬದಲಿಗೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ಆರಂಭಿಕರಾಗಿ ಯಶಸ್ಸು ಕಂಡಿರುವ ವೈಭವ್ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಕ್ರೈಸ್ಟ್‌ಚರ್ಚ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಹೀಗಿರುವಾಗಲೇ ಭಾರತ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಗಾಯದ ಸಮಸ್ಯೆಯಿಂದ ಎರಡನೇ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ. ಎಡಗೈ ಸ್ಪೋಟಕ ಬ್ಯಾಟರ್ ಇಶಾನ್ ಕಿಶನ್, ತೊಡೆಸಂದು ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಇದೇ ಶನಿವಾರ ಕ್ರೈಸ್ಟ್‌ಚರ್ಚ್‌ನಲ್ಲಿಯೇ ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದೀಗ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ಇಶಾನ್ ಕಿಶನ್ ಅವರ ಗಾಯದ ಸಮಸ್ಯೆಯ ಮೇಲೆ ನಿಗಾಯಿಟ್ಟಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ಬಗ್ಗೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, "ಇಶಾನ್ ಕಿಶನ್, ತೊಡೆಸಂದು ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ನ್ಯೂಜಿಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ. ಮೊದಲ ಟಿ20 ಪಂದ್ಯ ಆಡುವಾಗ ಇಶಾನ್ ಕಿಶನ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಇಶಾನ್ ಕಿಶನ್ ಅವರ ಆರೋಗ್ಯದ ನಿಗಾವಹಿಸಿದೆ" ಎಂದು ತಿಳಿಸಿದೆ.

ಇಶಾನ್ ಕಿಶನ್ ಐದನೇ ಕ್ರಮಾಂಕದಲ್ಲಿ ಇಳಿದಿದ್ದಕ್ಕೆ ಬ್ಯಾಟಿಂಗ್ ಕೋಚ್ ಸ್ಪಷ್ಟನೆ:

ಇಶಾನ್ ಕಿಶನ್ ಸಾಮಾನ್ಯವಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯುತ್ತಿದ್ದರು. ಆದರೆ ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ಇಶಾನ್ ಕಿಶನ್ ಗಾಯಗೊಂಡಿದ್ದರಿಂದಲೇ ಅವರು ಮೂರನೇ ಕ್ರಮಾಂಕದ ಬದಲು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಬಗ್ಗೆಯೂ ಸುಳಿವು ನೀಡಿದ್ದಾರೆ.

Scroll to load tweet…

ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್?

ಇನ್ನು ಏಷ್ಯನ್ ಗೇಮ್ಸ್ ಬಳಿಕ ಭಾರತ ತಂಡದಲ್ಲಿ ಬೆಂಚ್ ಕಾಯಿಸುತ್ತಲೇ ಇರುವ 15 ವರ್ಷದ ವೈಭವ್ ಸೂರ್ಯವಂಶಿ, ಇದೀಗ ಕಿವೀಸ್ ಎದುರಿನ ಎರಡನೇ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಬಗ್ಗೆ ಸುಳಿವನ್ನು ಸೀತಾಂಶು ಕೋಟಕ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೋಟಕ್, 'ಇಶಾನ್ ಕಿಶನ್ ಸಂಪೂರ್ಣವಾಗಿ ಚೇತರಿಸಿಕೊಳ್ಳದೇ ಇದ್ದರೇ ಹಾಗೂ ಎರಡನೇ ಟಿ20 ಪಂದ್ಯದಿಂದ ಹೊರಗುಳಿದರೆ, ವೈಭವ್ ಸೂರ್ಯವಂಶಿಗೆ ಅವಕಾಶ ಸಿಗಬಹುದು. ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯಬಲ್ಲ ಬಲಿಷ್ಠ ಆಟಗಾರರಾಗಿದ್ದಾರೆ ಎಂದು ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.

ಯಾವ ಕ್ರಮಾಂಕದಲ್ಲಿ ಆಡ್ತಾರೆ ವೈಭವ್ ಸೂರ್ಯವಂಶಿ?

ಅಂದಹಾಗೆ ವೈಭವ್ ಸೂರ್ಯವಂಶಿ ಆರಂಭಿಕನಾಗಿ ಯಶಸ್ಸು ಗಳಿಸಿದ್ದಾರೆ. ಇನ್ನು ಈಗಾಗಲೇ ಭಾರತ ಟಿ20 ತಂಡದ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತಂಡ ಕೂಡಿಕೊಂಡರೇ ಆರಂಭಿಕರಾಗಿ ಕಣಕ್ಕಿಳಿಯುತ್ತಾರೋ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯುತ್ತಾರೋ ಕಾದು ನೋಡಬೇಕಿದೆ. ಯಾಕೆಂದರೆ ಟೀಮ್‌ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಆರಂಭಿಕರಾಗಿರುವ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾಗೆ ಪೂರ್ಣ ಬೆಂಬಲ ನೀಡುತ್ತಾ ಬಂದಿದ್ದಾರೆ. ಮೊದಲ ಪಂದ್ಯದಲ್ಲಿ ಈ ಜೋಡಿ ಕೇವಲ 5.5 ಓವರ್‌ಗಳಲ್ಲಿ 93 ರನ್‌ಗಳ ಜತೆಯಾಟವಾಡುವ ಮೂಲಕ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿತ್ತು.