ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಏಕದಿನ ಕ್ರಿಕೆಟ್ನಲ್ಲಿ ಅತಿವೇಗದ ದ್ವಿಶತಕ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇದರೊಂದಿಗೆ ಟೆಸ್ಟ್ನಲ್ಲಿ ತ್ರಿಶತಕ, ಏಕದಿನದಲ್ಲಿ ದ್ವಿಶತಕ ಹಾಗೂ ಟಿ20ಯಲ್ಲಿ ಶತಕ ಸಿಡಿಸಿದ ಕ್ರಿಸ್ ಗೇಲ್ ಅವರ ಎಲೈಟ್ ಕ್ಲಬ್ಗೆ ಬ್ರೂಕ್ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು: ಯಾವ ಕ್ರಿಕೆಟ್ ಮಾದರಿಯಲ್ಲಿ ಶತಕ ಸಿಡಿಸುವುದು ಬ್ಯಾಟರ್ಗಳ ಪಾಲಿಗೆ ದೊಡ್ಡ ಸಾಧನೆಯೇ ಸರಿ. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಮಾದರಿಯಲ್ಲೂ ಶತಕ ಸಿಡಿಸುವುದು ತುಂಬಾ ಅಪರೂಪದಲ್ಲೇ ಅಪರೂಪದ ಸಾಧನೆ. ಇದೀಗ ಶ್ರೀಲಂಕಾ ಎದುರಿನ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ದ್ವಿಶತಕ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಹ್ಯಾರಿ ಬ್ರೂಕ್ ಇದೀಗ ಏಕದಿನ ಕ್ರಿಕೆಟ್ನಲ್ಲಿ ಅತಿವೇಗದ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ, ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಹಾಗೂ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ್ದು ಕೇವಲ ಇಬ್ಬರು ಕ್ರಿಕೆಟಿಗರು ಮಾತ್ರ. ಈ ಎಲೈಟ್ ಕ್ಲಬ್ಗೆ ಇದೀಗ ಇಂಗ್ಲೆಂಡ್ನ ಹ್ಯಾರಿ ಬ್ರೂಕ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ಆರ್ಸಿಬಿ ಮಾಜಿ ಕ್ರಿಕೆಟಿಗ, ವಿಂಡೀಸ್ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಈ ಸಾಧನೆ ಮಾಡಿದ್ದರು.
ಎಲೈಟ್ ಗ್ರೂಪ್ಗೆ ಸೇರಿದ ಹ್ಯಾರಿ ಬ್ರೂಕ್:
ಇಂಗ್ಲೆಂಡ್ ಏಕದಿನ ತಂಡದ ನಾಯಕ ಹ್ಯಾರಿ ಬ್ರೂಕ್, ಅಕ್ಟೋಬರ್ 22, 2026ರಂದು ರಾವಲ್ಪಿಂಡಿಯಲ್ಲಿ ನಡೆದ ಶ್ರೀಲಂಕಾ ಎದುರಿನ ಏಕದಿನ ಪಂದ್ಯದಲ್ಲಿ ಕೇವಲ 116 ಎಸೆತಗಳನ್ನು ಎದುರಿಸಿ 21 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ ಆಕರ್ಷಕ 202 ರನ್ ಸಿಡಿಸಿದರು. ಬ್ರೂಕ್ ಕೇವಲ 114 ಎಸೆತಗಳಲ್ಲಿ 200 ರನ್ ಗಡಿದಾಟುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತಿವೇಗದ ದ್ವಿಶತಕದ ಸಾಧನೆ ಮಾಡಿದರು. ಈ ಮೊದಲು ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ 117 ಎಸೆತಗಳನ್ನು ಎದುರಿಸಿ ದ್ವಿಶತಕ ಸಿಡಿಸಿದ್ದರು. ಇದಷ್ಟೇ ಅಲ್ಲದೇ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೂ ಬ್ರೂಕ್ ಪಾತ್ರರಾಗಿದ್ದಾರೆ.
ಟೆಸ್ಟ್ನಲ್ಲಿ 317 ರನ್ ಬಾರಿಸಿರುವ ಬ್ರೂಕ್:
ಟೆಸ್ಟ್ ಕ್ರಿಕೆಟ್ನಲ್ಲೂ ಹ್ಯಾರಿ ಬ್ರೂಕ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2024ರ ಅಕ್ಟೋಬರ್ನಲ್ಲಿ ಮುಲ್ತಾನ್ನಲ್ಲಿ ಪಾಕಿಸ್ತಾನ ವಿರುದ್ದ ನಡೆದ ಟೆಸ್ಟ್ ಪಂದ್ಯದಲ್ಲಿ ಹ್ಯಾರಿ ಬ್ರೂಕ್ 322 ಎಸೆತಗಳನ್ನು ಎದುರಿಸಿ 317 ರನ್ ಸಿಡಿಸಿದ್ದರು. ಇನ್ನು ಹ್ಯಾರಿ ಬ್ರೂಕ್ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಶತಕ ಸಿಡಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವಿಶ್ವಕಪ್ನಲ್ಲಿ ಶತಕ ಸಿಡಿಸಿದ ಮೊದಲ ಕ್ಯಾಪ್ಟನ್ ಎನ್ನುವ ಹಿರಿಮೆಗೆ ಬ್ರೂಕ್ ಪಾತ್ರರಾಗಿದ್ದಾರೆ.
300,200,100 ಎಲೈಟ್ ಕ್ಲಬ್ ಸ್ಥಾಪಿಸಿದ ಕ್ರಿಸ್ ಗೇಲ್
ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್, ತಮ್ಮ ವಿಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಗೇಲ್ 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಕ್ರಿಕೆಟ್ನಲ್ಲಿ 317 ರನ್ ಸಿಡಿಸಿದ್ದರು. ಇದಾದ ಬಳಿಕ 2010ರಲ್ಲಿ ಶ್ರೀಲಂಕಾ ಎದುರು ಗೇಲ್ 333 ರನ್ ಸಿಡಿಸಿದ್ದರು. 2007ರ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ನಲ್ಲಿ ಕ್ರಿಸ್ ಗೇಲ್ ದಕ್ಷಿಣ ಆಫ್ರಿಕಾ ವಿರುದ್ದ ಕೇವಲ 57 ಎಸೆತಗಳಲ್ಲಿ 117 ರನ್ ಸಿಡಿಸಿದ್ದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಮೊದಲ ಶತಕ ಎನಿಸಿಕೊಂಡಿತ್ತು. ಇನ್ನು 2015ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಗೇಲ್ ಜಿಂಬಾಬ್ವೆ ವಿರುದ್ದ 215 ರನ್ ಸಿಡಿಸಿದ್ದರು.
ವಿರೇಂದ್ರ ಸೆಹ್ವಾಗ್ ಟೆಸ್ಟ್ನಲ್ಲಿ ತ್ರಿಶತಕ, ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದರಾದರೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿಲ್ಲ. ಇನ್ನು ರೋಹಿತ್ ಶರ್ಮಾ, ಇಶಾನ್ ಕಿಶನ್, ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ, ಟಿ20ಯಲ್ಲಿ ಶತಕ ಸಿಡಿಸಿದ್ದಾರೆ, ಆದರೆ ಟೆಸ್ಟ್ನಲ್ಲಿ ತ್ರಿಶತಕ ಬಾರಿಸಿಲ್ಲ


