ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ತಕ್ಷಣವೇ ಅವಕಾಶ ಸಿಗುವುದಿಲ್ಲ ಎಂದು ನಾಯಕ ಶ್ರೇಯಸ್ ಅಯ್ಯರ್ ಸ್ಪಷ್ಟಪಡಿಸಿದ್ದಾರೆ. ತಂಡದ ಓಪನರ್ಗಳು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ವೈಭವ್ ತಮ್ಮ ಅವಕಾಶಕ್ಕಾಗಿ ಕಾಯಬೇಕಿದೆ. ಅಲ್ಲದೆ, ಆಟಗಾರರು ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಲು ಸಿದ್ಧರಿರಬೇಕು ಎಂದು ಅವರು ತಿಳಿಸಿದ್ದಾರೆ.
ಕ್ರೈಸ್ಟ್ಚರ್ಚ್: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಯುವ ಆಟಗಾರ ವೈಭವ್ ಸೂರ್ಯವಂಶಿಯನ್ನು ಪ್ಲೇಯಿಂಗ್ 11ನಲ್ಲಿ ಆಡಿಸುವ ಬಗ್ಗೆ ಟೀಂ ಇಂಡಿಯಾ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ. ತಂಡಕ್ಕೆ ಬಂದ ತಕ್ಷಣವೇ ಪ್ಲೇಯಿಂಗ್ 11ನಲ್ಲಿ ಜಾಗ ಪಡೆಯುವುದು ವೈಭವ್ಗೆ ಸುಲಭವಲ್ಲ. ತನ್ನ ಅವಕಾಶಕ್ಕಾಗಿ ಆತ ಕಾಯಲೇಬೇಕು ಎಂದು ಮೊದಲ ಟಿ20 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೇಯಸ್ ಹೇಳಿದ್ದಾರೆ.
ವೈಭವ್ ಸೂರ್ಯವಂಶಿಗೆ ಭವಿಷ್ಯವಿದೆ
ವೈಭವ್ ಇನ್ನೂ ಚಿಕ್ಕ ಹುಡುಗ. ಆತನಿಗೆ ಸಾಕಷ್ಟು ಭವಿಷ್ಯವಿದೆ. ಇಂಥ ಪ್ರತಿಭೆ ಡ್ರೆಸ್ಸಿಂಗ್ ರೂಮ್ನಲ್ಲಿ ಖುಷಿಯಾಗಿರೋದು ಮುಖ್ಯ. ಸದ್ಯಕ್ಕೆ ಆತ ಬಂದ ತಕ್ಷಣ ನೇರವಾಗಿ ತಂಡದಲ್ಲಿ ಆಡೋಕೆ ಆಗಲ್ಲ. ಯಾಕಂದ್ರೆ ನಮ್ಮ ಓಪನರ್ಗಳು ಸತತವಾಗಿ ಉತ್ತಮ ಪ್ರದರ್ಶನ ನೀಡ್ತಿದ್ದಾರೆ, ಜೊತೆಗೆ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. ವಿದೇಶಿ ಪ್ರವಾಸಗಳಲ್ಲಿ ತಂಡದ ಜೊತೆಗಿದ್ದರೆ ಇಲ್ಲಿನ ವಾತಾವರಣದ ಬಗ್ಗೆ ವೈಭವ್ಗೆ ಒಳ್ಳೆ ಐಡಿಯಾ ಸಿಗುತ್ತೆ. ಮುಂದೊಂದು ದಿನ ಈ ಪಿಚ್ಗಳಲ್ಲಿ ಆಡೋಕೆ ಇಳಿದಾಗ ಆತ ಸಂಪೂರ್ಣವಾಗಿ ರೆಡಿಯಾಗಿರ್ತಾನೆ ಎಂದು ಶ್ರೇಯಸ್ ವಿವರಿಸಿದರು. ಇದರೊಂದಿಗೆ ಸದ್ಯಕ್ಕಂತೂ ವೈಭವ್ ಸೂರ್ಯವಂಶಿಗೆ ಭಾರತ ಟಿ20 ತಂಡದ ಬಾಗಿಲು ತಾತ್ಕಾಲಿಕವಾಗಿ ಬಂದ್ ಆಗಿದೆ ಎನ್ನುವುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
ಓಪನಿಂಗ್ ಜೋಡಿಯಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾಗೆ ಮ್ಯಾನೇಜ್ಮೆಂಟ್ ಸಂಪೂರ್ಣ ಬೆಂಬಲ ನೀಡಲಿದೆ. ವೈಭವ್ನನ್ನು ಹಂತ ಹಂತವಾಗಿ ಮಾತ್ರ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಶ್ರೇಯಸ್ ಸುಳಿವು ನೀಡಿದರು. ಬ್ಯಾಟಿಂಗ್ ಆರ್ಡರ್ ಬದಲಾವಣೆ ಬಗ್ಗೆಯೂ ಅಯ್ಯರ್ ಮನಸ್ಸು ಬಿಚ್ಚಿ ಮಾತನಾಡಿದರು. ತಂಡದ ಪರಿಸ್ಥಿತಿಗೆ ತಕ್ಕಂತೆ ಆಟಗಾರರು ಹೊಂದಿಕೊಳ್ಳಬೇಕು ಎಂದು ಅವರು ಹೇಳಿದರು.
ತಂಡದ ಮತ್ತು ಪರಿಸ್ಥಿತಿಯ ಬೇಡಿಕೆಗೆ ತಕ್ಕಂತೆ ಬ್ಯಾಟ್ ಮಾಡಲು ಆಟಗಾರರು ರೆಡಿ ಇರಬೇಕು. ಯಾವುದೇ ಬ್ಯಾಟಿಂಗ್ ಕ್ರಮಾಂಕ ಸಿಕ್ರೂ ಅದರಲ್ಲಿ ಖುಷಿ ಪಡಬೇಕು. ಒಬ್ಬ ಆಟಗಾರ ನಿರ್ದಿಷ್ಟ ಸ್ಥಾನದಲ್ಲೇ ಬ್ಯಾಟ್ ಮಾಡ್ತೀನಿ ಅಂತ ಹಠ ಹಿಡಿಯೋಕಾಗಲ್ಲ. ಕಳೆದ ವಿಶ್ವಕಪ್ನಲ್ಲಿ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ರು, ಈಗ ನಂಬರ್ 1 ಬ್ಯಾಟರ್ ಆಗಿದ್ದಾರೆ. ನಾನು ಕೂಡ ಮೇಲಿನ ಕ್ರಮಾಂಕದಲ್ಲೇ ಬ್ಯಾಟ್ ಮಾಡ್ತೀನಿ ಅಂತ ಹಠ ಮಾಡಲ್ಲ, ಯಾವುದೇ ಸ್ಥಾನದಲ್ಲೂ ಆಡೋಕೆ ನಾನು ರೆಡಿ ಎಂದು ಶ್ರೇಯಸ್ ಸ್ಪಷ್ಟಪಡಿಸಿದರು.
ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ಭಾರತ ಸಂಭಾವ್ಯ ತಂಡ ಹೀಗಿದೆ:
ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಪ್ರಿನ್ಸ್ ಯಾದವ್.


