Breaking: ಸ್ಪಿನ್ನರ್‌ಗಳ ದಾಳಿಗೆ ಇಸ್ಪೀಟ್ ಎಲೆಗಳಂತೆ ಉದುರಿದ ವೆಸ್ಟ್ ಇಂಡೀಸ್, ಭಾರತಕ್ಕೆ ಭರ್ಜರಿ ಜಯ!
ಕುಲದೀಪ್ ಯಾದವ್ ನೇತೃತ್ವದಲ್ಲಿ ಭರ್ಜರಿ ದಾಳಿ ಸಂಘಟಿಸಿದ ಟೀಮ್ ಇಂಡಿಯಾ, ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಮಣಿಸಿದೆ.
ಬ್ರಿಜ್‌ಟೌನ್ (ಜು.27): ಸ್ಪಿನ್ನರ್ ಕುಲದೀಪ್ ಯಾದವ್ ಅವರ ನಾಲ್ಕು ವಿಕೆಟ್ ಸಾಧನೆ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಮೂರು ವಿಕೆಟ್ ನಿರ್ವಹಣೆಯ ನೆರವಿನಿಂದ ಭಾರತ ತಂಡ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ. ಅದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಕಂಡಿದೆ. ಬಾರ್ಬಡೋಸ್‌ನ ಕೆನ್ಸಿಂಗ್‌ಟನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ತನ್ನ ಕೊನೆಯ 7 ವಿಕೆಟ್‌ಗಳನ್ನು ಕೇವಲ 26 ರನ್‌ಗಳ ಅಂತರದಲ್ಲಿ ಕಳೆದುಕೊಂಡಿದ್ದರಿಂದ 23 ಓವರ್‌ಗಳಲ್ಲಿ ಕೇವ 114 ರನ್‌ಗೆ ಆಲೌಟ್ ಆಯಿತು. ಇದು ಭಾರತ ತಂಡದ ವಿರುದ್ಧ ವೆಸ್ಟ್ ಇಂಡೀಸ್ ತಂಡದ 2ನೇ ಕನಿಷ್ಠ ಸ್ಕೋರ್ ಆಗಿರುವುದು ಮಾತ್ರವಲ್ಲದೆ, ತವರಿನಲ್ಲಿ ಟೀಮ್ ಇಂಡಿಯಾ ವಿರುದ್ಧ ತಂಡದ ಅತ್ಯಂತ ಕನಿಷ್ಠ ಸ್ಕೋರ್ ಆಗಿದೆ. ಅಲ್ಪ ಮೊತ್ತವನ್ನು ಚೇಸ್ ಮಾಡಿದ ಟೀಮ್ ಇಂಡಿಯಾ 22.5 ಓವರ್‌ಗಳಲ್ಲಿ 5 ವಿಕೆಟ್‌ಗೆ 118 ರನ್ ಬಾರಿಸಿ ಗೆಲುವು ಕಂಡಿತು.
ಮೊತ್ತ ಬೆನ್ನಟ್ಟಿದ್ದ ಭಾರತ ತಂಡಕ್ಕೆ ಆಸರೆಯಾದ ಇಶಾನ್ ಕಿಶನ್ 46 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ ಸಿಡಿಸಿದ 52 ರನ್‌ಗಳ ಸಹಾಯದಿಂದ ಗೆಲುವು ಕಂಡಿತು. ತೀರಾ ಅಪರೂಪ ಎನ್ನುವಂತೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರೋಹಿತ್ಶ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಚೇಸಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಶುಭ್‌ಮಾನ್ ಗಿಲ್ ಹಾಗೂ ಇಶಾನ್ ಕಿಶನ್ ಜೋಡಿ 18 ರನ್ ಸೇರಿಸಿ ಬೇರ್ಪಟ್ಟಿತು. ನಂತರ ಕ್ರೀಸ್‌ಗಿಳಿದ ಸೂರ್ಯ ಕುಮಾರ್ ಯಾದವ್ ಎದುರಿಸಿದ 25 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ 19 ರನ್ ಬಾರಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಪಾದಾರ್ಪಣಾ ಪಂದ್ಯವಾಡಿದ ಮುಖೇಶ್ ಕುಮಾರ್ ವಿಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಆತಂಕ ನೀಡಿದರು. ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಕೈಲ್ ಮೇಯರ್ಸ್ ಕೇವಲ 2 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ನೀಡಿದರು. ನಂತರದ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್‌ಗೆ (17) ಜೊತೆಯಾದ ಅಲಿಕ್ ಅಥಾನಾಜೆ (22) 2ನೇ ವಿಕೆಟ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ್ದರು. ಆದರೆ, ಒಂದೇ ಮೊತ್ತಕ್ಕೆ ಬ್ರಾಂಡನ್ ಕಿಂಗ್ ಹಾಗೂ ಅಥಾನಾಜೆ ಇಬ್ಬರೂ ಪೆವಿಲಿಯನ್ ಸೇರಿದಾಗ ವಿಂಡೀಸ್ ಆತಕ್ಕೆ ಒಳಗಾಯಿತು. ನಾಯಕ ಹಾಗೂ ವಿಕೆಟ್ ಕೀಪರ್ ಶೈ ಹೋಪ್ (43ರನ್, 45 ಎಸೆತ, 4 ಬೌಂಡರಿ, 1 ಸಿಕ್ಸರ್) ಹೋರಾಟ ಮಾಡಿದರಾದರೂ ಅವರಿಗೆ ಇತರ ಬ್ಯಾಟ್ಸ್‌ಮನ್‌ಗಳಿಂದ ಸಾಥ್ ಸಿಗಲಿಲ್ಲ. ತಂಡದ ಮೊತ್ತ 88 ರನ್ ಆಗುವವರೆಗೆ ಹೆಟ್ಮೆಯರ್ (11) ಕ್ರೀಸ್‌ನಲ್ಲಿದ್ದರೆ, ನಂತರದ ಬಂದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತ ದಾಖಲಿಸಿದರು.
ತಾನೇ ತೋಡಿಕೊಂಡ ಹಳ್ಳಕ್ಕೆ ತಾವೇ ಬಿದ್ದರಾ ಶುಭ್‌ಮನ್ ಗಿಲ್..?
ಘಾತಕ ದಾಳಿ ಸಂಘಟಿಸಿದ ಕುಲದೀಪ್ ಯಾದವ್ ತಮ್ಮ ಮೂರು ಓವರ್‌ನಲ್ಲಿ 2 ಮೇಡನ್ ಎಸೆದು 6 ರನ್‌ಗೆ 4 ವಿಕೆಟ್ ಉರುಳಿಸಿದರು.ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ 37 ರನ್‌ಗೆ 3 ವಿಕೆಟ್ ಉರುಳಿಸಿ ಮಿಂಚಿದರು.
ಈ ವರ್ಷ ವಿರಾಟ್ ಕೊಹ್ಲಿ ಸ್ಟ್ರಾಂಗ್ ಕಮ್ಬ್ಯಾಕ್..! ವಿಶ್ವಕಪ್‌ಗೂ ಮುನ್ನ ಗುಡ್‌ನ್ಯೂಸ್