ಐಪಿಎಲ್ 2027ರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೇಕಬ್ ಬೆಥೆಲ್ ಸೇರಿದಂತೆ ಆರು ಆಟಗಾರರನ್ನು ಬಿಡುಗಡೆ ಮಾಡಿದೆ. ಗಾಯದ ಸಮಸ್ಯೆ ಮತ್ತು ಲಭ್ಯತೆಯ ಅನಿಶ್ಚಿತತೆಯಿಂದಾಗಿ ಬೆಥೆಲ್ ಅವರನ್ನು ಕೈಬಿಡಲಾಗಿದೆ ಎಂದು ಇರ್ಫಾನ್ ಪಠಾಣ್ ಮತ್ತು ಮೊ ಬೊಬಾಟ್ ತಿಳಿಸಿದ್ದಾರೆ. ಆರ್‌ಸಿಬಿ ಬಳಿ ₹14.15 ಕೋಟಿ ಹರಾಜು ಪರ್ಸ್ ಉಳಿದಿದೆ.

ಬೆಂಗಳೂರು(ನ.18): ಐಪಿಎಲ್ 2027ರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಆಟಗಾರರ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಒಟ್ಟು 20 ಆಟಗಾರರನ್ನು ಉಳಿಸಿಕೊಂಡಿದ್ದು, ಆರು ಆಟಗಾರರನ್ನು ಬಿಡುಗಡೆ ಮಾಡಿದೆ. ಈ ಪೈಕಿ ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಕೂಡ ಒಬ್ಬರು. ಇದೀಗ ಬೆಥೆಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದರ ಕುರಿತಂತೆ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಥೆಲ್ ಉತ್ತಮ ಪ್ರತಿಭೆ ಹೊಂದಿರುವ ಆಟಗಾರ. ಆರ್‌ಸಿಬಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಆರ್‌ಸಿಬಿಯ ಒಳನೋಟದ ಕುರಿತಂತೆ ಮಾತನಾಡಿದ್ದಾರೆ. ಬೆಥೆಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನ ಸೀಸನ್‌ಗೆ ಅವರ ಲಭ್ಯತೆಯ ಕುರಿತಂತೆಯೂ ಅನಿಶ್ಚಿತತೆ ವ್ಯಕ್ತವಾಗಿದೆ. ಈ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಬೆಥೆಲ್ ಅವರನ್ನು ರಿಲೀಸ್ ಮಾಡಿರಬಹುದು ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಗಾಯದ ಸಮಸ್ಯೆಯಿಂದ ಬೆಥೆಲ್ ಬಿಡುಗಡೆ

ಜೇಕಬ್ ಬೆಥೆಲ್ ಅವರನ್ನು ಆರ್‌ಸಿಬಿ 2025ರ ಮೆಗಾ ಹರಾಜಿನಲ್ಲಿ ₹2.60 ಕೋಟಿ ನೀಡಿ ಖರೀದಿಸಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ತಂಡಕ್ಕೆ ನಿರೀಕ್ಷಿತ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಅವರ ಮೊಣಕಾಲಿನ ಗಾಯ ಮತ್ತೆ ಉಲ್ಬಣಗೊಂಡಿದ್ದು, ಮುಂದಿನ ಐಪಿಎಲ್ ಆವೃತ್ತಿಗೆ ಲಭ್ಯರಾಗುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಕೂಡ ಬೆಥೆಲ್ ಬಿಡುಗಡೆಗೆ ಗಾಯದ ಸಮಸ್ಯೆಯನ್ನೇ ಕಾರಣವಾಗಿ ಉಲ್ಲೇಖಿಸಿದ್ದರು. ಗಾಯದಿಂದ ಚೇತರಿಸಿಕೊಳ್ಳುವ ಅವಧಿಯ ಬಗ್ಗೆ ಅನಿಶ್ಚಿತತೆ ಇದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.

20 ಆಟಗಾರರನ್ನು ಉಳಿಸಿಕೊಂಡಿರುವ ಆರ್‌ಸಿಬಿ

ಐಪಿಎಲ್ 2027ರ ಹರಾಜಿಗೂ ಮುನ್ನ ಆರ್‌ಸಿಬಿ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜೋಶ್ ಹೇಜಲ್‌ವುಡ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ ಸೇರಿದಂತೆ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.

ಆರ್‌ಸಿಬಿ ಬಿಡುಗಡೆ ಮಾಡಿದ ಆರು ಆಟಗಾರರ ಪಟ್ಟಿ ಹೀಗಿದೆ:

ಜೇಕಬ್ ಬೆಥೆಲ್

ರಿಚರ್ಡ್ ಗ್ಲೀಸನ್

ಮಂಗೇಶ್ ಯಾದವ್

ಸ್ವಪ್ನಿಲ್ ಸಿಂಗ್

ಸಾತ್ವಿಕ್ ದೇಸ್ವಾಲ್

ವಿಹಾನ್ ಮಲ್ಹೋತ್ರಾ

ಹರಾಜಿಗೆ ₹14.15 ಕೋಟಿ ಬಾಕಿ

ಆರ್‌ಸಿಬಿ 20 ಆಟಗಾರರನ್ನು ಉಳಿಸಿಕೊಂಡಿದ್ದು, ಐಪಿಎಲ್ 2027ರ ಹರಾಜಿನಲ್ಲಿ ಐದು ಸ್ಥಾನಗಳನ್ನು ತುಂಬಬೇಕಿದೆ. ಇದರಲ್ಲಿ ಎರಡು ವಿದೇಶಿ ಆಟಗಾರನ ಸ್ಥಾನವೂ ಸೇರಿದೆ. ತಂಡದ ಬಳಿ ₹14.15 ಕೋಟಿ ಮೊತ್ತದ ಹರಾಜು ಪರ್ಸ್ ಉಳಿದಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ಐಪಿಎಲ್ 2027ರ ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಆರ್‌ಸಿಬಿ ಯಾವ ಆಟಗಾರರನ್ನು ಖರೀದಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಜೇಕಬ್ ಬೆಥೆಲ್ ಅವರ ಪ್ರತಿಭೆ ಬಗ್ಗೆ ಮೆಚ್ಚುಗೆ ಇದ್ದರೂ, ಗಾಯದ ಸಮಸ್ಯೆ ಮತ್ತು ಲಭ್ಯತೆಯ ಅನಿಶ್ಚಿತತೆಯಿಂದಾಗಿ ಅವರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಆರ್‌ಸಿಬಿ ಕೈಗೊಂಡಿದೆ. ಬೆಥೆಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ರಿಲೀಸ್ ಮಾಡಿದ ನಿರ್ಧಾರ ಸರಿಯೇ ಅಥವಾ ತಪ್ಪೇ ಎನ್ನುವುದನ್ನು ಕಮೆಂಟ್ ಮೂಲಕ ತಿಳಿಸಿ.