* ನಾಯಕ ಮಯಾಂಕ್ ಅಗರ್‌ವಾಲ್ ಬೆಂಬಲಕ್ಕೆ ನಿಂತ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ* ನಾಯಕತ್ವ ಬದಲಾವಣೆ ಬಗ್ಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಯಾವುದೇ ಮಾಹಿತಿ ನೀಡಿಲ್ಲ* ಟ್ವೀಟ್ ಮೂಲಕ ಗಾಳಿ ಸುದ್ದಿಗಳಿಗೆ ತೆರೆ ಎಳೆದ ಮಯಾಂಕ್ ಅಗರ್‌ವಾಲ್
ನವದೆಹಲಿ(ಆ.24): ಮುಂಬರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮಯಾಂಕ್ ಅಗರ್‌ವಾಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಿದೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿತ್ತು. ಇದೀಗ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಈ ಗಾಳಿ ಸುದ್ದಿಗೆ ತೆರೆ ಎಳೆದಿದ್ದು, ಕರ್ನಾಟಕದ ಬ್ಯಾಟರ್ ಮಯಾಂಕ್ ಅಗರ್‌ವಾಲ್ ಬೆಂಬಲಕ್ಕೆ ನಿಂತಿದೆ. ಟ್ವೀಟ್ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಗಾಳಿ ಸುದ್ದಿಗೆ ತೆರೆ ಎಳೆದಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪಂಜಾಬ್ ಕಿಂಗ್ಸ್, ಕೆಲವೊಂದು ಕ್ರೀಡಾ ವೆಬ್‌ಸೈಟ್‌ಗಳು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಸುದ್ದಿಗಳನ್ನು ಪ್ರಕಟಿಸಿವೆ. ಆದರೆ ಫ್ರಾಂಚೈಸಿ ಕಡೆಯಿಂದ ಈ ಕುರಿತಂತೆ ತಂಡದ ಯಾವೊಬ್ಬ ಅಧಿಕಾರಿಯು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ಟ್ವೀಟ್ ಮಾಡಿದೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ಮಯಾಂಕ್ ಅಗರ್‌ವಾಲ್‌ಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿತ್ತು. ಬಲಿಷ್ಠ ತಂಡವನ್ನು ಹೊಂದಿದ್ದರೂ ಸಹಾ ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಪ್ಲೇ ಆಫ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು. ಇನ್ನು ಮಯಾಂಕ್ ಅಗರ್‌ವಾಲ್ ನಾಯಕನಾಗಿ ಮಾತ್ರವಲ್ಲದೇ ಬ್ಯಾಟರ್ ಆಗಿ ಕೂಡಾ ವೈಫಲ್ಯ ಅನುಭವಿಸಿದ್ದರು. ಕಳೆದ ಆವೃತ್ತಿಯಲ್ಲಿ ಮಯಾಂಕ್ ಅಗರ್‌ವಾಲ್ ಕೇವಲ 196 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಪಂಜಾಬ್ ನಾಯಕತ್ವದಿಂದ ಮಯಾಂಕ್‌ಗೆ ಕೊಕ್..? ಇಂಗ್ಲೆಂಡ್ ಕ್ರಿಕೆಟಿಗನಿಗೆ ನಾಯಕ ಪಟ್ಟ..?
ಇನ್ನು ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಅವರನ್ನು ಕೈಬಿಡುವ ಸಾಧ್ಯತೆ ಇದ್ದು, ಈ ಸ್ಥಾನಕ್ಕೆ ಇಯಾನ್ ಮೊರ್ಗನ್ ಅಥವಾ ಆಸ್ಪ್ರೇಲಿಯಾದ ಟ್ರೆವರ್ ಬೇಲಿಸ್‌ರನ್ನು ಫ್ರಾಂಚೈಸಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ. ಅನಿಲ್ ಕುಂಬ್ಳೆ ಅವರ 3 ವರ್ಷದ ಗುತ್ತಿಗೆ 2022ರ ಆವೃತ್ತಿಯ ಬಳಿಕ ಮುಕ್ತಾಯಗೊಂಡಿದ್ದು, ತಂಡದ ಮಾಲಿಕರು ಅವರ ಗುತ್ತಿಗೆಯನ್ನು ನವೀಕರಿಸುವ ಸಾಧ್ಯತೆ ಇಲ್ಲ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. ಕುಂಬ್ಳೆ ಕೋಚ್ ಆದ ಬಳಿಕ ಪಂಜಾಬ್ 42 ಪಂದ್ಯಗಳನ್ನು ಆಡಿದ್ದು ಕೇವಲ 19ರಲ್ಲಿ ಗೆದ್ದಿದೆ.
ಚೊಚ್ಚಲ ಆವೃತ್ತಿಯಿಂದಲೂ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಫ್ರಾಂಚೈಸಿಗಳ ಪೈಕಿ ಪ್ರಶಸ್ತಿ ಗೆಲ್ಲದ ಮೂರು ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡಾ ಒಂದು ಎನಿಸಿದೆ. ಪಂಜಾಬ್ ಕಿಂಗ್ಸ್ ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೂಡಾ ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ.
