* ಐಪಿಎಲ್ ಮಾಧ್ಯಮ ಹಕ್ಕು ಪಡೆಯಲು ಹಲವು ಸಂಸ್ಥೆಗಳ ನಡುವೆ ಪೈಪೋಟಿ* ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರುಪಾಯಿ ದಾಟುವ ನಿರೀಕ್ಷೆ* ಜಗತ್ತಿನ ಎರಡನೇ ದುಬಾರಿ ಲೀಗ್ ಆಗುವತ್ತ ಐಪಿಎಲ್ ಹೆಜ್ಜೆ

ನವದೆಹಲಿ(ಜೂ.03): 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ (IPL Media Rights Auction) ಕೆಲವೇ ದಿನಗಳು ಬಾಕಿ ಇದ್ದು, ಟೂರ್ನಿಯು ವಿಶ್ವದ 2ನೇ ಅತಿ ದುಬಾರಿ ಕ್ರೀಡಾ ಲೀಗ್‌ ಆಗುವತ್ತ ಸಾಗಿದೆ. ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರುಪಾಯಿ ದಾಟುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ.

2018-2022ರ ಅವಧಿಗೆ 16,348 ಕೋಟಿ ರು.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ (Star India), ಪ್ರತಿ ಪಂದ್ಯಕ್ಕೆ 54.5 ಕೋಟಿ ರು. ಪಾವತಿಸಿತ್ತು. ಮುಂದಿನ 5 ವರ್ಷಗಳಿಗೆ ಬಿಸಿಸಿಐ (BCCI) 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿದ್ದು, ಇದರ ಪ್ರಕಾರ ಪ್ರತಿ ಪಂದ್ಯದ ಟೀವಿ ಹಕ್ಕು 49 ಕೋಟಿ ರುಪಾಯಿ, ಮತ್ತು ಪ್ರತಿ ಪಂದ್ಯದ ಡಿಜಿಟೆಲ್‌ ಹಕ್ಕು 33 ಕೋಟಿ ರುಪಾಯಿ ಇದೆ. ಟೀವಿ ಹಕ್ಕು ಮೂಲಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿಗೆ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿಗೆ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115ರಿಂದ 120 ಕೋಟಿ ರು. ಆಗಬಹುದು ಎನ್ನಲಾಗುತ್ತಿದೆ.

ಸದ್ಯ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರುಪಾಯಿ. ಆ ಬಳಿಕ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯಕ್ಕೆ 81 ಕೋಟಿ ರು. ದೊರೆಯಲಿದೆ. ಸದ್ಯ ಬಿಸಿಸಿಐ ನಿಗದಿಪಡಿಸಿರುವ ಮೂಲಬೆಲೆಯೇ ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಲಿದೆ.

2022ರ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್‌ಗಳಿವರು..!

ಇನ್ನು ಕೆಲ ದಿನಗಳ ಹಿಂದಷ್ಟೇ ರವಿಶಾಸ್ತ್ರಿ ವರ್ಷದಲ್ಲಿ ಎರಡು ಬಾರಿ ಐಪಿಎಲ್ ಟೂರ್ನಿ ಆಯೋಜಿಸುವ ಬಗ್ಗೆ ಮಾತುಗಳನ್ನಾಡಿದ್ದರು. ದ್ವಿಪಕ್ಷೀಯ ಟಿ20 ಸರಣಿಗಳಿಗೆ ಮಹತ್ವವಿಲ್ಲ. ಟಿ20 ಮಾದರಿಯನ್ನು ಕೇವಲ ವಿಶ್ವಕಪ್‌ಗೆ ಸೀಮಿತಗೊಳಿಸಬೇಕು ಎಂದಿರುವ ಭಾರತದ ಮಾಜಿ ಕೋಚ್‌ ರವಿಶಾಸ್ತ್ರಿ ‘ಅತಿಶೀಘ್ರದಲ್ಲಿ ವರ್ಷಕ್ಕೆ 2 ಬಾರಿ ಐಪಿಎಲ್‌ ನಡೆಯಬಹುದು. ಭವಿಷ್ಯದಲ್ಲಿ ಅದೇ ಸೂಕ್ತ’ ಎಂದು ಹೇಳಿದ್ದರು. 

ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದಕ್ಕೆ ಮಾತನಾಡಿರುವ ಅವರು, ‘ಈಗ ತುಂಬಾ ದ್ವಿಪಕ್ಷೀಯ ಟಿ20 ಸರಣಿಗಳು ನಡೆಯುತ್ತಿವೆ. ಆದರೆ ಈ ಪಂದ್ಯಗಳನ್ನು ಯಾರೂ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾನು 6-7 ವರ್ಷ ಕೋಚ್‌ ಆಗಿದ್ದಾಗ ನಡೆದ ಟಿ20 ಪಂದ್ಯಗಳೂ ನನಗೆ ನೆನಪಿಲ್ಲ. ಕೇವಲ ವಿಶ್ವಕಪ್‌ ಮಾತ್ರ ನೆನೆಪಿದೆ. ಜಾಗತಿಕ ಮಟ್ಟದಲ್ಲಿ ಫ್ರಾಂಚೈಸಿ ಲೀಗ್‌ಗಳು ನಡೆಯುತ್ತಿವೆ. ಬಳಿಕ 2 ವರ್ಷಕ್ಕೊಮ್ಮೆ ವಿಶ್ವಕಪ್‌ ಮಾತ್ರ ನಡೆಯಲಿ’ ಎಂದು ಸಲಹೆ ನೀಡಿದ್ದಾರೆ.