ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳ ಸಂಬಳವು ಪ್ರತಿ ಫ್ರಾಂಚೈಸಿಗೆ ಭಿನ್ನವಾಗಿರುತ್ತದೆ, ಇದರಲ್ಲಿ ಕೆಕೆಆರ್ ಅತಿ ಹೆಚ್ಚು ಪಾವತಿಸುತ್ತದೆ. ಪಂದ್ಯದ ಸಂಬಳದ ಜೊತೆಗೆ, ಇವರು ಬೋನಸ್‌ಗಳು, ಪಾರ್ಟಿಗಳು ಮತ್ತು ಫೋಟೋಶೂಟ್‌ಗಳಿಂದ ಹೆಚ್ಚುವರಿ ಆದಾಯ ಗಳಿಸುತ್ತಾರೆ ಹಾಗೂ ಫ್ರಾಂಚೈಸಿಗಳು ಇವರ ಪ್ರಯಾಣ ಮತ್ತು ವಸತಿ ವೆಚ್ಚವನ್ನೂ ಭರಿಸುತ್ತವೆ.

ಮುಂಬೈ: ಐಪಿಎಲ್ ಅಂದ್ರೆ ಬರೀ ಕೋಟಿ ಕೋಟಿ ದುಡ್ಡು ಬಾಚೋ ಕ್ರಿಕೆಟಿಗರ ಆಟ ಮಾತ್ರವಲ್ಲ, ಸ್ಟೇಡಿಯಂಗೆ ಗ್ಲಾಮರ್ ತುಂಬೋ ಚಿಯರ್‌ಲೀಡರ್‌ಗಳೂ ಇರ್ತಾರೆ. ಸಿಕ್ಸರ್‌, ಫೋರ್‌ ಬಾರಿಸಿದಾಗ, ವಿಕೆಟ್‌ ಬಿದ್ದಾಗ ಡ್ಯಾನ್ಸ್‌ ಮಾಡಿ ಹುರಿದುಂಬಿಸುವ ಈ ಚಿಯರ್‌ಲೀಡರ್‌ಗಳಿಗೆ ಪ್ರತಿ ಮ್ಯಾಚ್‌ಗೆ ಎಷ್ಟು ಸಂಬಳ ಸಿಗುತ್ತೆ ಅಂತಾ ಹಲವರಿಗೆ ಕುತೂಹಲ ಇರುತ್ತೆ. ಆದರೆ, ಎಲ್ಲಾ ಚಿಯರ್‌ಲೀಡರ್‌ಗಳಿಗೂ ಒಂದೇ ರೀತಿ ಸಂಬಳ ಸಿಗಲ್ಲ. ಪ್ರತಿ ಫ್ರಾಂಚೈಸಿಯೂ ಬೇರೆ ಬೇರೆ ಸಂಬಳ ಕೊಡುತ್ತೆ.

ಕೆಕೆಆರ್ ಫ್ರಾಂಚೈಸಿಯಿಂದ ಅತಿಹೆಚ್ಚು ಸಂಬಳ

ಐಪಿಎಲ್ ತಂಡಗಳಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಮ್ಮ ಚಿಯರ್‌ಲೀಡರ್‌ಗಳಿಗೆ ಅತಿ ಹೆಚ್ಚು ಸಂಬಳ ನೀಡುತ್ತೆ. ವರದಿಗಳ ಪ್ರಕಾರ, ಕೆಕೆಆರ್ ಪ್ರತಿ ಪಂದ್ಯಕ್ಕೆ ಸುಮಾರು 24,000 ದಿಂದ 25,000 ರೂಪಾಯಿ ಕೊಡುತ್ತದೆ. ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ಸುಮಾರು 20,000 ರೂಪಾಯಿ ನೀಡಿದರೆ, ಚೆನ್ನೈ ಸೂಪರ್ ಕಿಂಗ್ಸ್ ಸುಮಾರು 17,000 ರೂಪಾಯಿ ನೀಡುತ್ತದೆ. ಪಂಜಾಬ್ ಕಿಂಗ್ಸ್, ಹೈದರಾಬಾದ್ ಮತ್ತು ದೆಹಲಿ ತಂಡಗಳು 12,000 ದಿಂದ 15,000 ರೂಪಾಯಿವರೆಗೆ ಸಂಬಳ ನೀಡುತ್ತವೆ.

ಈ ಸಂಬಳ ಅಷ್ಟೇ ಅಲ್ಲ, ಬೇರೆ ಮೂಲಗಳಿಂದಲೂ ಇವರಿಗೆ ದುಡ್ಡು ಬರುತ್ತೆ. ತಮ್ಮ ತಂಡ ಗೆದ್ದರೆ, ಹೆಚ್ಚಿನ ಫ್ರಾಂಚೈಸಿಗಳು 3,000 ರೂಪಾಯಿ ಬೋನಸ್ ಕೊಡುತ್ತವೆ. ಇದಲ್ಲದೆ, ಸ್ಪಾನ್ಸರ್‌ಗಳ ಪಾರ್ಟಿ, ಕಾರ್ಪೊರೇಟ್ ಕಾರ್ಯಕ್ರಮಗಳು, ಪ್ರೊಮೋಷನಲ್ ಫೋಟೋಶೂಟ್‌ಗಳಲ್ಲಿ ಭಾಗವಹಿಸಿದರೆ, ಪ್ರತಿ ಸೆಷನ್‌ಗೆ 5,000 ದಿಂದ 12,000 ರೂಪಾಯಿವರೆಗೆ ಸಿಗುತ್ತದೆ. ವಿದೇಶಗಳಿಂದ ಬರುವ ಈ ಚಿಯರ್‌ಲೀಡರ್‌ಗಳಿಗೆ ವಿಮಾನ ಟಿಕೆಟ್, ಪಂಚತಾರಾ ಹೋಟೆಲ್‌ಗಳಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಫ್ರಾಂಚೈಸಿಗಳೇ ನೋಡಿಕೊಳ್ಳುತ್ತವೆ. ಕೋಟಿಗಟ್ಟಲೆ ಹಣ ಹರಿಯುವ ಐಪಿಎಲ್‌ನಲ್ಲಿ ಆಟಗಾರರಿಗೆ ಹೋಲಿಸಿದರೆ ಇದು ಕಡಿಮೆ ಅನಿಸಬಹುದು. ಆದರೆ, ಕಠಿಣ ತರಬೇತಿ ಮತ್ತು ನಿರಂತರ ಪ್ರಯಾಣ ಈ ವೃತ್ತಿಗೆ ಅನಿವಾರ್ಯ.

ಕೆಕೆಆರ್‌ಗೆ ಹರ್ಷಿತ್‌ ರಾಣಾ ಬದಲಿಗೆ ನವ್‌ದೀಪ್ ಸೈನಿ

ನವದೆಹಲಿ: ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್‌ಗೂ ಮುನ್ನ ಗಾಯಕ್ಕೆ ತುತ್ತಾಗಿದ್ದ ಕ್ರಿಕೆಟಿಗ ಹರ್ಷಿತ್‌ ರಾಣಾ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಅವರ ಜಾಗಕ್ಕೆ ಕೆಕೆಆರ್‌ ನವದೀಪ್‌ ಸೈನಿ ಅವರನ್ನು ಆಯ್ಕೆ ಮಾಡಿಕೊಂಡಿದೆ. ಈ ಬಗ್ಗೆ ಐಪಿಎಲ್‌ ಅಧಿಕೃತ ಮಾಹಿತಿ ನೀಡಿದೆ. ಮತ್ತೊಂದೆಡೆ ಗುಜರಾತ್‌ ಟೈಟಾನ್ಸ್‌ನಲ್ಲಿ ಪೃಥ್ವಿರಾಜ್‌ ಯರ್ರಾ ಅವರ ಜಾಗಕ್ಕೆ ಕುಲ್ವಂತ್ ಖೇಜ್ರೋಲಿಯಾ ಅವರನ್ನು ಆಯ್ಕೆ ಮಾಡಲಾಗಿದೆ.

ಆರ್‌ಸಿಬಿಗೆ ಮತ್ತೆ ಶಾಕ್, ವೇಗಿ ತುಷಾರ ಔಟ್‌

ಫಿಟ್ನೆಸ್ ವಿಚಾರದಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ತಾರಾ ವೇಗಿ ನುಷಾನ್‌ ತುಷಾರಗೆ ಎನ್‌ಒಸಿ ನಿರಾಕರಿಸಿದೆ. ಹೀಗಾಗಿ ಅವರು ಈ ಬಾರಿ ಐಪಿಎಲ್‌ನಲ್ಲಿ ಅವರು ಆರ್‌ಸಿಬಿ ಪರ ಆಡುವುದಿಲ್ಲ ಎಂದು ವರದಿಯಾಗಿದೆ. ಈಗಾಗಲೇ ಜೋಶ್‌ ಹೇಜಲ್‌ವುಡ್‌ ಗಾಯಗೊಂಡಿದ್ದು, ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಈಗ ತಂಡಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.