ಐಪಿಎಲ್ 2027ರ ಅತೀ ದೊಡ್ಡ ಟ್ರೇಡ್ ಡೀಲ್‌ಗೆ ಸಾಕ್ಷಿಯಾಗಲಿದೆ. ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರಹೋಗುತ್ತಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಸೇರಲು ಸಜ್ಜಾಗಿದ್ದಾರೆ. ಇದಕ್ಕೆ ಬದಲಾಗಿ ಟೀಂ ಇಂಡಿಯಾ ವೇಗಿ ಮುಂಬೈ ಸೇರಿಕೊಳ್ಳಲಿದ್ದಾರೆ, ಏನಿದು ಸ್ಫೋಟಕ ವರದಿ

ಮುಂಬೈ (ನ.07) ಐಪಿಎಲ್ 2027ರ ಟೂರ್ನಿ ಹರಾಜಿಗೂ ಮೊದಲೇ ಅತೀ ದೊಡ್ಡ ಟ್ರೇಡ್ ಡೀಲ್ ಅಂತಿಮ ಹಂತದಲ್ಲಿದೆ. ಮಾತುಕತೆ ಮುಗಿದಿದ್ದು ಅಂತಮ ಘೋಷಣೆ ಮಾತ್ರ ಹೊರಬೀಳಬೇಕಿದೆ. ವರದಿ ಪ್ರಕಾರ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆದು ಪಂಜಾಬ್ ಕಿಂಗ್ಸ್ ತಂಡ ಸೇರಿಕೊಳ್ಳಲಿದ್ದಾರೆ. ಈ ಕುರಿತು ಅತೀ ದೊಡ್ಡ ಟ್ರೇಡ್ ಡೀಲ್ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ. ಮುಂಬೈ ಹಾರ್ದಿಕ್ ಪಾಂಡ್ಯನ ಪಂಜಾಬ್ ಕಿಂಗ್ಸ್‌ಗೆ ಬಿಟ್ಟುಕೊಟ್ಟರೆ, ಬದಲಾಗಿ ಪಂಜಾಬ್ ತನ್ನ ಪ್ರಮುಖ ವೇಗಿ ಅರ್ಶದೀಪ್ ಸಿಂಗ್‌ರನ್ನು ಮುಂಬೈ ಇಂಡಿಯನ್ಸ್‌ಗೆ ನೀಡುತ್ತಿದೆ ಎಂದು ವರದಿಯಾಗಿದೆ.

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಹಾರ್ದಿಕ್

ಮುಂಬೈ ಇಂಡಿಯನ್ಸ್ ತಂಡದಿಂದ ಕಳೆದ ಐಪಿಎಲ್ ಟೂರ್ನಿ ವೇಳೆಯೇ ಒಂದು ಕಾಲು ಹೊರಗಿಟ್ಟಿದ್ದ ಹಾರ್ದಿಕ್ ಪಾಂಡ್ಯ, 2027ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಸೇರಿಕೊಳ್ಳುತ್ತಿದ್ದಾರೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ಸೇರಿಕೊಂಡರೆ, ಪಂಜಾಬ್ ತಂಡದಲ್ಲೂ ನಾಯಕತ್ವ ಘರ್ಷಣೆ ಶುರುವಾಗುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ. ಟ್ರೇಡ್ ಡೀಲ್ ಬಹುತೇಕ ಅಂತಿಮಗೊಂಡಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಬಾಕಿ ಇದೆ.

ಇಬ್ಬರಿಗೂ ಲಾಭ, ಬಿಗ್ ಟ್ರೇಡ್

ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಳೆದೆರಡು ವರ್ಷದಿಂದ ಹಾರ್ದಿಕ್ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇತ್ತ ಮುಂಬೈ ತಂಡದೊಳಗಿನ ಮನಸ್ತಾಪ, ಜಟಾಪಟಿಗಳು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ತೀವ್ರವಾಗಿ ಟೀಕೆ ಎದುರಿಸಿದ ಹಾರ್ದಿಕ್ ಪಾಂಡ್ಯ ಮುಂಬೈ ತೊರೆಯಲು ಮನಸ್ಸು ಮಾಡಿದ್ದರು. ಇತ್ತ ಪಂಜಾಬ್ ಕಿಂಗ್ಸ್ ಸಮರ್ಥ ಆಲ್‌ರೌಂಡರ್ ಅವಶ್ಯಕತೆ ಇದೆ. ಇತ್ತ ಮುಂಬೈ ಇಂಡಿಯನ್ಸ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಜೊತೆ ಮತ್ತೊಬ್ಬ ಡೆತ್ ಓವರ್ ಬೌಲಿಂಗ್ ಸ್ಪೆಷಲಿಸ್ಟ್ ಅವಶ್ಯಕತೆ ಇದೆ. ಹೀಗಾಗಿ ಈ ಟ್ರೇಡ್ ಡೀಲ್‌ಗೆ ಎರಡು ತಂಡಗಳು ಒಪ್ಪಿಗೆ ಸೂಚಿಸಿವೆ ಎಂದು ವರದಿಯಾಗಿದೆ.

ರೋಹಿತ್ ಅಥವಾ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ

ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರನಡೆದರೆ ನಾಯಕನಾಗಿ ಮತ್ತೆ ರೋಹಿತ್ ಶರ್ಮಾ ಮರಳುವ ಸಾಧ್ಯತೆ ಇದೆ. ಇದರ ನಡುವೆ ಸೂರ್ಯಕುಮಾರ್ ಯಾದವ್‌ಗೆ ಮುಂಬೈ ಇಂಡಿಯನ್ಸ್ ನಾಯಕತ್ವ ನೀಡುವ ಕುರಿತು ಚರ್ಚೆ ನಡೆದಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಅಂತಿಮಗೊಂಡಿಲ್ಲ. ಆದರೆ ಟ್ರೇಡ್ ಇದೀಗ ಐಪಿಎಲ್ ಟೂರ್ನಿಯ ಅತೀ ದೊಡ್ಡ ಡೀಲ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮುಂಬೈ ಇಂಡಿಯನ್ಸ್ ಸೇರಿಕೊಂಡ ಬೆನ್ನಲ್ಲೇ ನಾಯಕನಾಗಿದ್ದ ರೋಹಿತ್ ಶರ್ಮಾ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿತ್ತು. ಇದು ತಂಡದ ಬಹುತೇಕ ಕ್ರಿಕೆಟಿಗರು, ಅಭಿಮಾನಿಗಳ ಆಸಕ್ತಿಕೆ ವಿರುದ್ಧವಾಗಿತ್ತು. ಇತ್ತ ತಂಡದೊಳಗೆ ಘರ್ಷಣೆ ಹೆಚ್ಚಾಗಿತ್ತು. ಇದೀಗ ಪಂಜಾಬ್ ಕಿಂಗ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಸೇರಿಕೊಂಡರೆ ಶ್ರೇಯಸ್ ಅಯ್ಯರ್ ಹಾಗೂ ಪಾಂಡ್ಯ ನಡುವೆ ನಾಯಕತ್ವ ವಿಚಾರದಲ್ಲಿ ಮನಸ್ತಾಪ ಬರುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.