2027ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿದ್ದು, ನವೆಂಬರ್ 15ರೊಳಗೆ ಆಟಗಾರರ ರೀಟೈನ್ ಪಟ್ಟಿ ನೀಡಲು ಬಿಸಿಸಿಐ ಗಡುವು ನೀಡಿದೆ. ಡೆಲ್ಲಿ ಹಾಗೂ ಲಖನೌ ನಡುವೆ ಪ್ರಮುಖ ಆಟಗಾರರ ಟ್ರೇಡ್ ನಡೆದಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಬೆಂಗಳೂರು: 2027ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕೊನೆಗೂ ಡೇಟ್ ಫಿಕ್ಸ್ ಆಗಿದೆ. ಐಪಿಎಲ್ ಮಿನಿ ಹರಾಜು ಮುಂಬರುವ ಡಿಸೆಂಬರ್ 16ರಂದು ನಡೆಯಲಿದೆ. ಇನ್ನು ಅದೇ ದಿನ ಬೆಂಗಳೂರಿನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿ ಕೂಡಾ ನಿಗದಿಯಾಗಿದೆ. ಇನ್ನು ಇದೇ ವೇಳೆ ಆಟಗಾರರ ರೀಟೈನ್ ಹಾಗೂ ರಿಲೀಸ್‌ಗೂ ಬಿಸಿಸಿಐ ಕೊನೆಯ ಗಡುವು ನಿಗಧಿ ಪಡಿಸಿದೆ.

ಹೌದು, 2027ರ ಐಪಿಎಲ್ ಮಿನಿ ಹರಾಜು ಈ ಬಾರಿ ಭಾರತದಲ್ಲಿಯೇ ನಡೆಯಲಿದ್ದು, ಮಿನಿ ಹರಾಜಿಗೆ ಈ ಬಾರಿ ಗೋವಾ ಆತಿಥ್ಯ ವಹಿಸಿದೆ. ಕಳೆದ ಕೆಲ ವರ್ಷಗಳಿಂದಲೂ ಐಪಿಎಲ್ ಹರಾಜನ್ನು ಭಾರತದಾಚೆ ಆಯೋಜಿಸಲಾಗುತ್ತಿತ್ತು. ಇನ್ನು ಮಿನಿ ಹರಾಜಿಗೆ ಒಂದು ತಿಂಗಳು ಮುಂಚಿತವಾಗಿ ಆಟಗಾರರ ರೀಟೈನ್‌ ಅಥವಾ ರಿಲೀಸ್‌ ಮಾಡುವ ಮಾಹಿತಿಯನ್ನು ಫ್ರಾಂಚೈಸಿಗಳು ನೀಡಬೇಕಿದೆ. ಹೀಗಾಗಿ ಮುಂಬರುವ ನವೆಂಬರ್ 15ರೊಳಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ರೀಟೈನ್ ಹಾಗೂ ರಿಲೀಸ್ ಮಾಡಬೇಕಾದ ಆಟಗಾರರ ಹೆಸರನ್ನು ಅಂತಿಮಗೊಳಿಸಬೇಕಿದೆ.

ಇದುವರೆಗೂ ಕೇವಲ ಎರಡು ಟ್ರೇಡಿಂಗ್ ಅಂತಿಮ

ಇನ್ನು ಐಪಿಎಲ್ ಮಿನಿ ಹರಾಜಿಗೂ ಮುನ್ನ 2026ರ ಐಪಿಎಲ್ ಸೀಸನ್ ಬಳಿಕ ಇದುವರೆಗೂ ಕೇವಲ ಎರಡು ಟ್ರೇಡ್‌ಗಳು ಮಾತ್ರ ನಡೆದಿವೆ. ಲಖನೌ ಸೂಪರ್ ಜೈಂಟ್ಸ್‌ ಫ್ರಾಂಚೈಸಿಯು ರಿಷಭ್ ಪಂತ್ ಅವರನ್ನು ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಕರೆ ತಂದಿದೆ. ಇನ್ನು ಇತ್ತೀಚೆಗಷ್ಟೇ ಡೆಲ್ಲಿ ಫ್ರಾಂಚೈಸಿಯು ಟಿ ನಟರಾಜನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್‌ಗೆ ನೀಡಿ ಅನ್‌ಕ್ಯಾಪ್ಡ್‌ ಲೆಗ್‌ಸ್ಪಿನ್ನರ್ ಝೀಸನ್ ಅನ್ಸಾರಿಯನ್ನು ಡೆಲ್ಲಿ ತನ್ನ ತಂಡಕ್ಕೆ ಬರಮಾಡಿಸಿಕೊಂಡಿದೆ.

ಇನ್ನು ಐಪಿಎಲ್ ನಿಯಮಾವಳಿಗಳ ಪ್ರಕಾರ ಐಪಿಎಲ್‌ ಸೀಸನ್‌ ಮುಗಿದಾಗಿನಿಂದಲೇ ಐಪಿಎಲ್ ಆಟಗಾರರ ಟ್ರೇಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದು ಮುಂದಿನ ಐಪಿಎಲ್ ಹರಾಜಿಗೂ ಒಂದು ವಾರ ಬಾಕಿ ಇರುವವರೆಗೂ ಟ್ರೇಡ್‌ಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಅಂದಹಾಗೆ 2027ರ ಐಪಿಎಲ್ ಟೂರ್ನಿ ಯಾವಾಗಿನಿಂದ ಆರಂಭವಾಗಲಿದೆ ಎನ್ನುವುದನ್ನು ಇನ್ನೂ ಖಚಿತಪಡಿಸಿಲ್ಲ.

ಆರ್‌ಸಿಬಿ ಮೇಲೆ ಎಲ್ಲರ ಕಣ್ಣು:

ಇನ್ನು ಸತತ ಎರಡು ಸೀಸನ್‌ನಲ್ಲಿ ಎರಡು ಐಪಿಎಲ್ ಟ್ರೋಫಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಮಿನಿ ಹರಾಜಿಗೂ ಮುನ್ನ ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಎನ್ನುವುದರ ಕುತೂಹಲ ಜೋರಾಗಿದೆ. ಇದೇ ವೇಳೆ ಆರ್‌ಸಿಬಿ ಫ್ರಾಂಚೈಸಿಯು ಯಾವ ಆಟಗಾರರನ್ನು ರಿಲೀಸ್‌ ಮಾಡಲಿದೆ ಎನ್ನುವುದನ್ನು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಮೇಲ್ನೋಟಕ್ಕೆ ಆರ್‌ಸಿಬಿ ತಂಡವು ಬಹುತೇಕ ಎಲ್ಲಾ ಆಟಗಾರರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದ್ದು, ಮಂಗೇಶ್ ಯಾದವ್, ನುವಾನ್ ತುಷಾರಾ ಅವರನ್ನು ರಿಲೀಸ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ರಿಲೀಸ್ ಮಾಡಲಿದೆಯೇ ಅಥವಾ ರೀಟೈನ್ ಮಾಡಿಕೊಳ್ಳಲಿದೆಯೇ ಎನ್ನುವ ಕುತೂಹಲ ಮತ್ತೆ ಮುಂದುವರೆದಿದೆ. ಯಾಕೆಂದರೆ ಇದೀಗ ಕೀರನ್ ಪೊಲ್ಲಾರ್ಡ್ ಮುಂಬೈ ಇಂಡಿಯನ್ಸ್ ತಂಡದ ಹೆಡ್‌ ಕೋಚ್ ಆಗಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಮನವೊಲಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.