19ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರುಪಾಯಿಗೆ ಯಶಸ್ವಿಯಾಗಿ ಖರೀದಿಸಿದೆ. ಕಳೆದ ಬಾರಿ ಕೆಕೆಆರ್ ತಂಡದಲ್ಲಿದ್ದ ಅಯ್ಯರ್, ಈ ಬಾರಿ ಕಡಿಮೆ ಮೊತ್ತಕ್ಕೆ ಆರ್‌ಸಿಬಿ ಸೇರಿದ್ದಾರೆ.

ಅಬುಧಾಬಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಭಾರತದ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಡಿಮೆ ಮೊತ್ತಕ್ಕೆ ಒಳ್ಳೆಯ ಆಲ್ರೌಂಡರ್ ಖರೀದಿಸುವಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಯಶಸ್ವಿಯಾಗಿದೆ.

ಕಳೆದ ಆವೃತ್ತಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 23.75 ಕೋಟಿ ರುಪಾಯಿ ನೀಡಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಿತ್ತು. ಇದೀಗ ಮತ್ತೊಮ್ಮೆ ವೆಂಕಟೇಶ್ ಅಯ್ಯರ್ ಖರೀದಿಸಲು ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಪೈಪೋಟಿ ಏರ್ಪಟ್ಟಿತ್ತಾದರೂ, ಅಂತಿಮವಾಗಿ 7 ಕೋಟಿ ರುಪಾಯಿಗೆ ವೆಂಕಟೇಶ್ ಅಯ್ಯರ್‌, ಆರ್‌ಸಿಬಿ ಪಾಲಾದರು. ಅಂದಹಾಗೆ ಇಂದು ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯ ಪ್ರದೇಶ ಪರ ವೆಂಕಟೇಶ್ ಅಯ್ಯರ್ 43 ಎಸೆತಗಳಲ್ಲಿ 70 ರನ್ ಸಿಡಿಸಿ ಮಿಂಚಿದ್ದರು.

Scroll to load tweet…

ಮೂಲ ಬೆಲೆಗೆ ಹಸರಂಗ ಲಖನೌ ಪಾಲು

ಶ್ರೀಲಂಕಾ ಮೂಲದ ಲೆಗ್‌ ಸ್ಪಿನ್ನರ್ ವನಿಂದು ಹಸರಂಗ ಅವರನ್ನು 2 ಕೋಟಿ ರುಪಾಯಿಗೆ ಲಖನೌ ಸೂಪರ್ ಜೈಂಟ್ಸ್ ಪಾಲಾದರು. ದಕ್ಷಿಣ ಆಫ್ರಿಕಾ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ 1 ಕೋಟಿ ರುಪಾಯಿಗೆ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದರು. ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಬೆನ್ ಡಕೆಟ್ ಮೂಲ ಬೆಲೆ 2 ಕೋಟಿಗೆ ಡೆಲ್ಲಿ ಹಾಗೂ ನ್ಯೂಜಿಲೆಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಫಿನ್ ಅಲೆನ್ ಮೂಲ ಬೆಲೆ ಎರಡು ಕೋಟಿ ರುಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾದರು.

ಲಿವಿಂಗ್‌ಸ್ಟೋನ್, ರಚಿನ್ ರವೀಂದ್ರ ಅನ್‌ಸೋಲ್ಡ್

ಲಿವಿಂಗ್‌ಸ್ಟೋನ್, ಗಸ್ ಅಟ್ಕಿನ್‌ಸನ್, ರಚಿನ್ ರವೀಂದ್ರ, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೇರ್‌ಸ್ಟೋವ್, ಜೇಮಿ ಸ್ಮಿತ್ ಅನ್‌ಸೋಲ್ಡ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.