ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜಿಗೆ 1355 ಆಟಗಾರರು ಹೆಸರು ನೋಂದಾಯಿಸಿದ್ದಾರೆ. ಆಸೀಸ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದ್ದು, 2 ಕೋಟಿ ರುಪಾಯಿ ಮೂಲ ಬೆಲೆಯ ಪಟ್ಟಿಯಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ.
ಬೆಂಗಳೂರು: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 16ರಂದು ಯುಎಇನ ಅಬುದಾಬಿಯಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿಗೆ ಒಟ್ಟು 1355 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರ ಲಿಸ್ಟ್ ಅನ್ನು ಈಗಾಗಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ರವಾನಿಸಿದೆ.
ಇದು ಐಪಿಎಲ್ ಮಿನಿ ಹರಾಜು ಆಗಿರುವುದರಿಂದ ಎಲ್ಲಾ 10 ಫ್ರಾಂಚೈಸಿಗಳು ಸೇರಿ ಗರಿಷ್ಠ 77 ಆಟಗಾರರನ್ನಷ್ಟೇ ಖರೀದಿಸಬಹುದಾಗಿದೆ. ಒಂದು ತಂಡವು ತನ್ನ ರೀಟೈನ್ ಆಟಗಾರರನ್ನು ಸೇರಿದಂತೆ ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಲಷ್ಟೇ ಅವಕಾಶವಿದೆ. ಇದೀಗ ಎರಡು ಕೋಟಿ ರುಪಾಯಿ ಮೂಲ ಬೆಲೆಗೆ ತಮ್ಮ ಹೆಸರು ನೋಂದಾಯಿಸಿಕೊಂಡ ಆಟಗಾರರ ಪಟ್ಟಿ ಬಹಿರಂಗವಾಗಿದ್ದು, ಈ ಪೈಕಿ ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಗಾಯದ ಸಮಸ್ಯೆಯಿಂದಾಗಿ ಕ್ಯಾಮರೋನ್ ಗ್ರೀನ್ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಪಾಲ್ಗೊಂಡಿರಲಿಲ್ಲ.
ಐಪಿಎಲ್ ಮಿನಿ ಹರಾಜಿಗೂ ಮುನ್ನ ಪ್ರಮುಖ ಆಟಗಾರರನ್ನು ಕೈಬಿಟ್ಟಿರುವ ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಬಳಿ ಅತಿಹೆಚ್ಚು(64.3 ಕೋಟಿ) ಪರ್ಸ್ ಇದೆ. ಇನ್ನು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಎರಡನೇ ಹೆಚ್ಚು(43.4 ಕೋಟಿ ರುಪಾಯಿ) ಪರ್ಸ್ ಹೊಂದಿದೆ. ಹೀಗಾಗಿ ಈ ಎರಡು ಫ್ರಾಂಚೈಸಿಗಳು ಆಸೀಸ್ ಮೂಲದ ಸ್ಟಾರ್ ಆಲ್ರೌಂಡರ್ ಮೇಲೆ ದೊಡ್ಡ ಮೊತ್ತಕ್ಕೆ ಬಿಡ್ ಮಾಡುವ ಸಾಧ್ಯತಯಿದೆ ಎನ್ನಲಾಗುತ್ತಿದೆ.
ಇನ್ನು ಎರಡು ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಆಟಗಾರರ ಪೈಕಿ ಲಂಕಾ ಮೂಲದ ಪತಿರಾಣ ಕೂಡಾ ಇದ್ದಾರೆ. 2025ರ ಮೆಗಾ ಹರಾಜಿನಲ್ಲಿ 13 ಕೋಟಿ ರುಪಾಯಿಗೆ ಚೆನ್ನೈ ಚೆನ್ನೈ ತಂಡದಲ್ಲಿದ್ದ ವೇಗಿಯನ್ನು ಈ ಬಾರಿಯ ಮಿನಿ ಹರಾಜಿಗೂ ಮುನ್ನ ರಿಲೀಸ್ ಮಾಡಿತ್ತು. ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಸ್ಟೀವ್ ಸ್ಮಿತ್, ಕೈಲ್ ಜೇಮಿಸನ್ ಸೇರಿದಂತೆ ಹಲವು ಆಟಗಾರರು ಮಿನಿ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿದ್ದಾರೆ.
ಎರಡು ಕೋಟಿ ಮೂಲ ಬೆಲೆ ಹೊಂದಿರುವವರ ಪಟ್ಟಿಯಲ್ಲಿ ಕೇವಲ ಇಬ್ಬರು ಭಾರತೀಯರಿಗೆ ಸ್ಥಾನ!
ಇನ್ನು ಅಚ್ಚರಿಯ ಸಂಗತಿಯೆಂದರೇ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ ಆಟಗಾರರ ಲಿಸ್ಟ್‌ನಲ್ಲಿ ಭಾರತದ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಕೆಕೆಆರ್ ತಂಡದಿಂದ ರಿಲೀಸ್ ಆಗಿರುವ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ನಿಂದ ರಿಲೀಸ್ ಆಗಿರುವ ಸ್ಟಾರ್ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಮಾತ್ರ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಭಾರತೀಯ ಆಟಗಾರರಾಗಿದ್ದಾರೆ.
2 ಕೋಟಿ ರುಪಾಯಿ ಮೂಲ ಬೆಲೆಗೆ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿರುವ ಆಟಗಾರರಿವರು:
ರವಿ ಬಿಷ್ಣೋಯಿ, ವೆಂಕಟೇಶ್ ಅಯ್ಯರ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಶಾನ್ ಅಬ್ಬೋಟ್, ಆಸ್ಟನ್ ಏಗಾರ್, ಕೂಪರ್ ಕಾನ್ಲಿ, ಜೇಕ್ ಫ್ರೇಸರ್ ಮೆಕ್‌ಗುರ್ಕ್, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಶ್, ಸ್ಟೀವ್ ಸ್ಮಿತ್, ಮುಸ್ತಫಿಜುರ್ ರೆಹಮಾನ್, ಗಸ್ ಅಟ್ಕಿನ್‌ಸನ್, ಟಾಮ್ ಬಾಂಟನ್, ಟಾಮ್ ಕರ್ರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ಡ್ಯಾನ್ ಲೌರೆನ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಟೈಮಲ್ ಮಿಲ್ಸ್, ಜೇಮಿ ಸ್ಮಿತ್, ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೆವೊನ್ ಕಾನ್‌ವೇ, ಜೆಕೊಬ್ ಡಫ್ಪಿ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಆಡಂ ಮಿಲ್ನೆ, ಡೇರೆಲ್ ಮಿಚೆಲ್, ವಿಲಿಯಂ ಓರೂರ್ಕೆ, ರಚಿನ್ ರವೀಂದ್ರ, ಗೆರಾಲ್ಡ್ ಕೋಟ್ಜೀ, ಡೇವಿಡ್ ಮಿಲ್ಲರ್, ಲುಂಗಿ ಎಂಗಿಡಿ, ಏನ್ರಿಚ್ ನೋಕಿಯಾ, ರಿಲೇ ರೂಸೌ, ತಬ್ರೀಝ್ ಶಮ್ಸಿ, ಡೇವಿಡ್ ವೀಸಾ, ವನಿಂದು ಹಸರಂಗ, ಮಥೀಶ್ ಪತಿರಾಣ, ಮಹೀಶ್ ತೀಕ್ಷಣ, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್.


