ರಾಹುಲ್ ದ್ರಾವಿಡ್ ಅವರಿಂದ ತೆರವಾದ ರಾಜಸ್ಥಾನ ರಾಯಲ್ಸ್ ಕೋಚ್ ಸ್ಥಾನಕ್ಕೆ ಕುಮಾರ್ ಸಂಗಕ್ಕಾರ ಮರಳುವ ಸಾಧ್ಯತೆಯಿದೆ. ಕಳೆದ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ತಂಡದಲ್ಲಿ ಸಮಸ್ಯೆ ಬಿಕ್ಕಟ್ಟನ್ನು ಬಗೆಹರಿಸುವುದು ಸಂಗಕ್ಕಾರ ಮುಂದಿರುವ ಮೊದಲ ಸವಾಲಾಗಿದೆ.
ಜೈಪುರ: ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಶ್ರೀಲಂಕಾದ ದಿಗ್ಗಜ ಕುಮಾರ್ ಸಂಗಕ್ಕಾರ ಮರಳಲಿದ್ದಾರೆ. ರಾಹುಲ್ ದ್ರಾವಿಡ್ ಅವರಿಂದ ತೆರವಾದ ಸ್ಥಾನಕ್ಕೆ ಸಂಗಕ್ಕಾರ ಹಿಂತಿರುಗುತ್ತಿದ್ದಾರೆ. 2021 ರಿಂದ ರಾಜಸ್ಥಾನ ರಾಯಲ್ಸ್ ತಂಡದ ನಿರ್ದೇಶಕರಾಗಿದ್ದ ಸಂಗಕ್ಕಾರ, 2024 ರವರೆಗೆ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಕಳೆದ ವರ್ಷ ರಾಹುಲ್ ದ್ರಾವಿಡ್ ಬಂದಾಗ ಅವರು ಹುದ್ದೆ ತೊರೆದಿದ್ದರು. 2022ರಲ್ಲಿ ಸಂಗಕ್ಕಾರ ಕೋಚ್ ಆಗಿದ್ದಾಗ ರಾಜಸ್ಥಾನ ರಾಯಲ್ಸ್ ಐಪಿಎಲ್ ಫೈನಲ್ ತಲುಪಿತ್ತು.
ರಾಹುಲ್ ದ್ರಾವಿಡ್ 2012ರಿಂದ 2013ರ ವರೆಗೆ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿದ್ದರು. ಇದಾದ ಬಳಿಕ 2014 ಹಾಗೂ 2015ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿದ್ದರು. ಇನ್ನು 2024ರಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದಂತೆಯೇ, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ದ್ರಾವಿಡ್ ಅವರನ್ನು ಮತ್ತೊಮ್ಮೆ ತಮ್ಮ ತಂಡದ ಹೆಡ್‌ಕೋಚ್ ಆಗಿ ನೇಮಿಸಿತ್ತು.
ಸಂಗಕ್ಕಾರ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ
2021ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ಆಗಿದ್ದ ಕುಮಾರ ಸಂಗಕ್ಕಾರ ಅವರ ಮಾರ್ಗದರ್ಶನದಲ್ಲಿ ಆಡಿದ ನಾಲ್ಕು ಸೀಸನ್ ಪೈಕಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಎರಡು ಬಾರಿ ಪ್ಲೇ ಆಫ್ ಪ್ರವೇಶಿಸಿದೆ. 2008ರಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ರಾಜಸ್ಥಾನ ರಾಯಲ್ಸ್ ಇದಾದ ಬಳಿಕ ಇನ್ನೊಂದು ಕಪ್ ಗೆಲ್ಲಲು ಸಾಧ್ಯವಾಗಿಲ್ಲ.
ಕಳೆದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಕಳಪೆ ಪ್ರದರ್ಶನ ನೀಡಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದ ರಾಜಸ್ಥಾನ ರಾಯಲ್ಸ್ ಒಂಬತ್ತನೇ ಸ್ಥಾನದೊಂದಿಗೆ ತನ್ನ ಅಭಿಯಾನ ಮುಗಿಸಿತ್ತು. ಒಂದು ವೇಳೆ ಅಧಿಕೃತವಾಗಿ ಕೋಚ್ ಆಗಿ ಮರಳಿದರೆ, ರಾಜಸ್ಥಾನ ರಾಯಲ್ಸ್ ಎದುರಿಸುತ್ತಿರುವ ನಾಯಕತ್ವದ ಬಿಕ್ಕಟ್ಟನ್ನು ಪರಿಹರಿಸುವುದು ಸಂಗಕ್ಕಾರ ಅವರ ಮೊದಲ ಸವಾಲಾಗಿರುತ್ತದೆ. ಕಳೆದ ಐಪಿಎಲ್ ಸೀಸನ್ ನಂತರ ನಾಯಕ ಸಂಜು ಸ್ಯಾಮ್ಸನ್ ತಂಡವನ್ನು ತೊರೆಯುವ ಇಚ್ಛೆ ವ್ಯಕ್ತಪಡಿಸಿದ್ದರು. ಟ್ರೇಡ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹೋಗುವ ಸಂಜು ಪ್ರಯತ್ನ ರಾಜಸ್ಥಾನ ಫ್ರಾಂಚೈಸಿ ಹಠದಿಂದ ವಿಫಲವಾದರೂ, ಮುಂದಿನ ಸೀಸನ್‌ನಲ್ಲಿ ಸಂಜು ತಂಡದಲ್ಲಿರುತ್ತಾರೆಯೇ ಎಂಬ ಬಗ್ಗೆ ತಂಡದ ಆಡಳಿತ ಮಂಡಳಿ ಇನ್ನೂ ಯಾವುದೇ ಭರವಸೆ ನೀಡಿಲ್ಲ.
ಸಂಜುಗೆ ಗಾಳ ಹಾಕಿರುವ ಸಿಎಸ್‌ಕೆ-ಕೆಕೆಆರ್
ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಸಂಜುಗಾಗಿ ಆಸಕ್ತಿ ತೋರಿಸಿದೆ ಎಂದು ವರದಿಯಾಗಿತ್ತು. ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ಸಂಜು ಅವರನ್ನು 18 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ ಕಳೆದ ಸೀಸನ್‌ನಲ್ಲಿ ಬೆರಳಿನ ಗಾಯದಿಂದಾಗಿ ಸಂಜು ಕೇವಲ 9 ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು. ಇದರಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದರು. ಸಂಜು ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಸಂಜು ತಂಡವನ್ನು ತೊರೆದರೆ, ರಿಯಾನ್ ಪರಾಗ್ ರಾಜಸ್ಥಾನ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
