- Home
- Sports
- Cricket
- ಈ ಫ್ರಾಂಚೈಸಿ ಅವಮಾನ ಮಾಡಿತು, ನಾನು ಕಣ್ಣೀರಿಟ್ಟಿದ್ದೆ: ಐಪಿಎಲ್ ಮಾಜಿ ತಂಡದ ಬಗ್ಗೆ ಕ್ರಿಸ್ ಗೇಲ್ ಗಂಭೀರ ಆರೋಪ!
ಈ ಫ್ರಾಂಚೈಸಿ ಅವಮಾನ ಮಾಡಿತು, ನಾನು ಕಣ್ಣೀರಿಟ್ಟಿದ್ದೆ: ಐಪಿಎಲ್ ಮಾಜಿ ತಂಡದ ಬಗ್ಗೆ ಕ್ರಿಸ್ ಗೇಲ್ ಗಂಭೀರ ಆರೋಪ!
ಚಂಡೀಗಢ: ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಐಪಿಎಲ್‌ನಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಇದೀಗ ಪಾಡ್‌ಕಾಸ್ಟ್‌ವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಐಪಿಎಲ್ ವೃತ್ತಿಜೀವನ ಅಪೂರ್ಣವಾಗಿ ಅಂತ್ಯಗೊಂಡಿದೆ ಎಂದು ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಹೇಳಿದ್ದಾರೆ.
ಐಪಿಎಲ್‌ನ ಕೊನೆಯ ಸೀಸನ್‌ಗಳಲ್ಲಿ ಪಂಜಾಬ್ ತಂಡದಲ್ಲಿ ಆಡುವಾಗ ಅವಮಾನಿತನಾಗಿ ಐಪಿಎಲ್ ಬಿಟ್ಟು ಹೋದೆ ಎಂದು ಶುಭಾಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಗೇಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
2018 ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್ ತಂಡದ ಆಟಗಾರರಾಗಿದ್ದರು ಕ್ರಿಸ್ ಗೇಲ್. ಪಂಜಾಬ್ ಕಿಂಗ್ಸ್ ಪರ 41 ಪಂದ್ಯಗಳಲ್ಲಿ 40.75ರ ಸರಾಸರಿಯಲ್ಲಿ 1304 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು 11 ಅರ್ಧಶತಕಗಳನ್ನು ಗೇಲ್ ಪಂಜಾಬ್ ಪರ ಬಾರಿಸಿದ್ದಾರೆ.
ನನ್ನ ಐಪಿಎಲ್ ವೃತ್ತಿಜೀವನ ಅಪೂರ್ಣವಾಗಿ ಅಂತ್ಯಗೊಂಡಿದೆ. 2021 ರಲ್ಲಿ ಪಂಜಾಬ್ ಕಿಂಗ್ಸ್‌ನಲ್ಲಿ ಆಡುವಾಗ ಅವಮಾನಿತನಾಗಿ ಹೊರಬಂದೆ. ಹಿರಿಯ ಆಟಗಾರನೆಂಬ ಗೌರವವೂ ಕೂಡಾ ಸಿಗಲಿಲ್ಲ ಎಂದು ಯೂನಿವರ್ಸೆಲ್ ಬಾಸ್ ಖ್ಯಾತಿಯ ಗೇಲ್ ಅಸಮಾಧಾನ ಹೊರಹಾಕಿದ್ದಾರೆ.
ಒಂದು ಮಗುವಿನಂತೆ ನನ್ನನ್ನು ನೋಡುತ್ತಿದ್ದರು. ನನ್ನ ಜೀವನದಲ್ಲಿ ಇದು ಮೊದಲ ಅನುಭವ. ಆ ಸಮಯದಲ್ಲಿ ನಾನು ಖಿನ್ನತೆಗೆ ಒಳಗಾಗುತ್ತೇನೋ ಎಂದು ಭಯಪಟ್ಟಿದ್ದೆ. ಮೊದಲು ಜನರು ಖಿನ್ನತೆಯ ಬಗ್ಗೆ ಮಾತನಾಡುವಾಗ ಅದೇನೆಂದು ನನಗೆ ಅರ್ಥವಾಗುತ್ತಿರಲಿಲ್ಲ ಎಂದು ಗೇಲ್ ಹೇಳಿದ್ದಾರೆ.
ಆಗಿನ ಪಂಜಾಬ್ ತರಬೇತುದಾರರಾಗಿದ್ದ ಅನಿಲ್ ಕುಂಬ್ಳೆ ಜೊತೆ ಈ ಬಗ್ಗೆ ಮಾತನಾಡುವಾಗ ನಾನು ಅತ್ತಿದ್ದೆ. ತಂಡ ಮುಂದುವರೆದ ರೀತಿಯ ಬಗ್ಗೆ ನಾನು ತುಂಬಾ ನಿರಾಶೆಗೊಂಡಿದ್ದೆ. ಯಾವುದೇ ಕಾರಣವಿಲ್ಲದೆ ನನ್ನನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟಿದ್ದು ತೀವ್ರ ನೋವುಂಟು ಮಾಡಿತ್ತು.
ಆಗಿನ ನಾಯಕ ಕೆ.ಎಲ್. ರಾಹುಲ್ ನನಗೆ ಫೋನ್ ಮಾಡಿ ಮುಂದಿನ ಪಂದ್ಯದಲ್ಲಿ ನೀವು ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರುತ್ತೀರಿ ಎಂದು ಹೇಳಿದ್ದರು. ಆದರೆ ನಾನು ರಾಹುಲ್‌ಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟೆ ಎಂದು ಗೇಲ್ ಹೇಳಿದ್ದಾರೆ.
ರಾಹುಲ್ ಒಮ್ಮೆ ನನಗೆ ಫೋನ್ ಮಾಡಿ, 'ಕ್ರಿಸ್, ನೀವು ಹೋಗಬೇಡಿ, ತಂಡದ ಜೊತೆ ಇರಿ, ಮುಂದಿನ ಪಂದ್ಯದಲ್ಲಿ ನೀವು ಇರುತ್ತೀರಿ' ಎಂದಿದ್ದರು. ಆದರೆ ನಾನು ರಾಹುಲ್‌ಗೆ ಗುಡ್ ಲಕ್ ಎಂದು ಶುಭ ಹಾರೈಸಿ, ಬ್ಯಾಗ್ ಪ್ಯಾಕ್ ಮಾಡಿ ಹೊರಟೆ ಎಂದು ಗೇಲ್ ಹೇಳಿದ್ದಾರೆ.
ಮೊದಲ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಲು ಆರಂಭಿಸಿದ ಗೇಲ್, ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಐಪಿಎಲ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ 175 ರನ್‌ಗಳು ದಾಖಲೆ ಇಂದಿಗೂ ಗೇಲ್ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ.
2021 ರಲ್ಲಿ ಕೋವಿಡ್ ಸಮಯದಲ್ಲಿ ಆಟಗಾರರೆಲ್ಲರೂ ಹೋಟೆಲ್‌ಗಳಲ್ಲಿ ಬಯೋ ಬಬಲ್‌ನಲ್ಲಿದ್ದಾಗ ಗೇಲ್ ಐಪಿಎಲ್ ಬಿಟ್ಟು ಹೋದರು. ಐಪಿಎಲ್‌ನಲ್ಲಿ 142 ಪಂದ್ಯಗಳನ್ನು ಆಡಿರುವ ಗೇಲ್ 4965 ರನ್ ಗಳಿಸಿದ್ದಾರೆ.