2026ರ ಐಪಿಎಲ್ ಫೈನಲ್‌ನಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕಾಗಿ ಆರ್‌ಸಿಬಿ ರಣತಂತ್ರ ರೂಪಿಸಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಫಿಲ್ ಸಾಲ್ಟ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಸಾಲ್ಟ್ ಆಡಿದರೆ ತಂಡದಿಂದ ಯಾರು ಹೊರಗುಳಿಯುತ್ತಾರೆ ಎಂಬ ಚರ್ಚೆ ಜೋರಾಗಿದೆ.
ಅಹಮದಾಬಾದ್:2026ರ ಐಪಿಎಲ್ ಫೈನಲ್‌ನಲ್ಲಿಂದು ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಎರಡೂ ತಂಡಗಳು ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಇನ್ನು ಪಂದ್ಯದಲ್ಲಿ ಆರ್‌ಸಿಬಿ ತಂಡವು ಕಪ್ ಗೆಲ್ಲಲು ಈಗಾಗಲೇ ದಿನೇಶ್ ಕಾರ್ತಿಕ್, ಆಂಡಿ ಫ್ಲವರ್ ಅವರನ್ನೊಳಗೊಂಡ ಕೋಚಿಂಗ್ ಸ್ಟಾಫ್ ಭರ್ಜರಿ ರಣತಂತ್ರ ಹೆಣೆದಿದೆ. ಇನ್ನು ಈ ಮಹತ್ವದ ಪಂದ್ಯದಲ್ಲಿ ಫಿಲ್ ಸಾಲ್ಟ್ ಆರಂಭಿಕನಾಗಿ ಆರ್‌ಸಿಬಿ ತಂಡ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಒಂದು ವೇಳೆ ಫಿಲ್ ಸಾಲ್ಟ್ ಆರ್‌ಸಿಬಿ ತಂಡ ಕೂಡಿಕೊಂಡರೇ, ತಂಡದಿಂದ ಹೊರಗುಳಿಯುವವರು ಯಾರು ಎನ್ನುವ ಚರ್ಚೆ ಕೂಡಾ ಜೋರಾಗಿದೆ.
ಕೈಬೆರಳಿನ ಗಾಯದಿಂದ ಕಳೆದ ಒಂದು ತಿಂಗಳಿನಿಂದ ಆರ್‌ಸಿಬಿ ತಂಡದಿಂದ ಹೊರಗುಳಿದಿದ್ದ ಫಿಲ್ ಸಾಲ್ಟ್ ಪ್ಲೇ ಆಫ್‌ಗೂ ಮುನ್ನವೇ ಆರ್‌ಸಿಬಿ ತಂಡವನ್ನು ಕೂಡಿಕೊಂಡಿದ್ದರು. ಆದರೆ ಕ್ವಾಲಿಫೈಯರ್-1 ಪಂದ್ಯದಲ್ಲಿ ಫಿಲ್ ಸಾಲ್ಟ್ ಸಂಪೂರ್ಣ ಫಿಟ್ ಆಗದ ಹಿನ್ನೆಲೆಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಸಾಲ್ಟ್ ಅನುಪಸ್ಥಿತಿಯಲ್ಲಿ ವೆಂಕಟೇಶ್ ಅಯ್ಯರ್ ಕಳೆದ ಕೆಲ ಪಂದ್ಯಗಳಲ್ಲಿ ಆರ್‌ಸಿಬಿ ತಂಡಕ್ಕೆ ಮಿಂಚಿನ ಆರಂಭ ಒದಗಿಸಿಕೊಟ್ಟಿದ್ದರು. ಆದರೆ ಐಪಿಎಲ್‌ನಂತಹ ಫೈನಲ್ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರಂತಹ ವಿಶ್ವದರ್ಜೆಯ ಆರಂಭಿಕ ಆಟಗಾರನನ್ನು ಹೊರಗಿಡುವುದು ಸುಲಭದ ಮಾತಲ್ಲ. ಹೀಗಾಗಿ ಇಂದು ಫಿಲ್ ಸಾಲ್ಟ್ ಆಡುವುದು ಬಹುತೇಕ ಪಕ್ಕ.
ಫಿಲ್ ಸಾಲ್ಟ್ ತಂಡ ಕೂಡಿಕೊಂಡರೇ ಹೊರಗೆ ಉಳಿಯೋದು ಯಾರು?
ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಹೇಳಿ-ಕೇಳಿ ಬ್ಯಾಟಿಂಗ್ ಸ್ನೇಹಿ ಪಿಚ್. ಹೀಗಾಗಿ ಈ ಮೈದಾನದಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿಯೇ ಇರುತ್ತದೆ. ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ನೀಡಿದ್ದ 200+ ರನ್‌ಗಳನ್ನು ಅನಾಯಾಸವಾಗಿ ಬೆನ್ನತ್ತುವಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಶಸ್ವಿಯಾಗಿತ್ತು. ಹೀಗಾಗಿ ಆರ್‌ಸಿಬಿ ತಂಡ ಎಚ್ಚರಿಕೆಯ ಹೆಜ್ಜೆಯಿಡಬೇಕಿದೆ. ಜೇಕಬ್ ಡಫಿ ಹಾಗೂ ಜೋಶ್ ಹೇಜಲ್‌ವುಡ್ ಇಬ್ಬರೂ ಪರಿಣಾಮಕಾರಿ ದಾಳಿ ನಡೆಸುತ್ತಾ ಬಂದಿದ್ದಾರೆ. ಹೀಗಿದ್ದೂ ಫಿಲ್ ಸಾಲ್ಟ್ ಅವರನ್ನು ಆಡಿಸಬೇಕಿದ್ದರೇ, ರೊಮ್ಯಾರಿಯೋ ಶೆಫರ್ಡ್ ಅವರನ್ನು ಹೊರಗಿಡಬೇಕಾಗುತ್ತದೆ. ಇನ್ನು ಶೆಫರ್ಡ್ ಪಾತ್ರವನ್ನು ವೆಂಕಟೇಶ್ ಅಯ್ಯರ್ ನಿಭಾಯಿಸಬೇಕಾಗುತ್ತದೆ.
ಇಲ್ಲವೇ ಫಿಲ್ ಸಾಲ್ಟ್ ಅವರನ್ನು ತಂಡದೊಳಗೆ ಆಡಿಸಿದರೆ, ಅನಿವಾರ್ಯವಾಗಿ ಜೇಕಬ್ ಡಫಿ ಅವರನ್ನು ಹೊರಗಿಡಬೇಕಾದ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಗುಜರಾತ್ ಟೈಟಾನ್ಸ್ ಎದುರಿನ ಐಪಿಎಲ್ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ:
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್(ನಾಯಕ), ವೆಂಕಟೇಶ್ ಅಯ್ಯರ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ, ರೊಮ್ಯಾರಿಯೋ ಶೆಫರ್ಡ್/ಜೇಕಬ್ ಡಫಿ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ರಸಿಕ್ ಸಲಂ ಧರ್.


