19ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಅಹಮದಾಬಾದ್‌ನಲ್ಲಿ ಸೆಣಸಲಿವೆ. ಈ ಹಿಂದೆ ತವರಿನಲ್ಲಿ ಗೆದ್ದಿರುವ ಗುಜರಾತ್ ಆತ್ಮವಿಶ್ವಾಸದಲ್ಲಿದ್ದರೆ, ಸತತ ಎರಡನೇ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿ ಆರ್‌ಸಿಬಿ ಇದೆ.

ಅಹಮದಾಬಾದ್‌: 19ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದ. ಈ ಪಂದ್ಯವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕ್ರೀಡಾಂಗಣದಲ್ಲೇ ಲೀಗ್‌ ಹಂತದಲ್ಲಿ ಜಿಟಿಗೆ ಶರಣಾಗಿತ್ತು ಆರ್‌ಸಿಬಿ!

ಈ ಬಾರಿ ಆರ್‌ಸಿಬಿ-ಗುಜರಾತ್‌ ತಂಡಗಳು 3 ಬಾರಿ ಮುಖಾಮುಖಿಯಾಗಿದೆ. ಕ್ವಾಲಿಫೈಯರ್‌-1 ಪಂದ್ಯಕ್ಕೂ ಮುನ್ನ ಲೀಗ್‌ ಹಂತದಲ್ಲಿ ಈ ತಂಡಗಳು 2 ಬಾರಿ ಸೆಣಸಾಡಿದ್ದವು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಗೆದ್ದಿದ್ದರೆ, ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಗುಜರಾತ್‌ ಸುಲಭದಲ್ಲಿ ಮಣಿಸಿತ್ತು. ಹೀಗಾಗಿ ಗುಜರಾತ್‌ ತಂಡ ತನ್ನ ತವರಿನಲ್ಲಿ ಮತ್ತೊಮ್ಮೆ ಆರ್‌ಸಿಬಿಯನ್ನು ಮಣಿಸುವ ವಿಶ್ವಾಸದಲ್ಲಿದೆ.

ಇದು ಆರ್‌ಸಿಬಿಗೆ 5ನೇ, ಜಿಟಿಗೆ 3ನೇ ಫೈನಲ್‌

ಈ ಪಂದ್ಯ ಆರ್‌ಸಿಬಿಯ 5ನೇ ಫೈನಲ್‌ ಆಗಿರಲಿದೆ. ಈ ಹಿಂದೆ 2009, 2011, 2016ರ ಫೈನಲ್‌ನಲ್ಲಿ ಸೋತಿದ್ದ ಆರ್‌ಸಿಬಿ 2025ರಲ್ಲಿ ಪಂಜಾಬ್‌ ವಿರುದ್ಧ ಗೆದ್ದು ಚಾಂಪಿಯನ್‌ ಆಗಿತ್ತು. 2022ರಿಂದ ಐಪಿಎಲ್‌ ಆಡುತ್ತಿರುವ ಗುಜರಾತ್‌ಗೆ ಇದು 3ನೇ ಫೈನಲ್‌. 2022ರ ತನ್ನ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ ವಿರುದ್ಧ ಗೆದ್ದು ಚಾಂಪಿಯನ್‌ ಆಗಿದ್ದ ತಂಡ, 2023ರ ಫೈನಲ್‌ನಲ್ಲಿ ಚೆನ್ನೈ ವಿರುದ್ಧ ಸೋತಿತ್ತು.

2+ ಟ್ರೋಫಿ ಗೆದ್ದ 4ನೇ ತಂಡ ಎಂಬ ಹೆಗ್ಗಳಿಕೆ

ಭಾನುವಾರದ ಫೈನಲ್‌ನಲ್ಲಿ ಯಾರೇ ಗೆದ್ದರೂ 2 ಅಥವಾ ಅದಕ್ಕಿಂತ ಹೆಚ್ಚು ಟ್ರೋಫಿ ಪಡೆದ 4ನೇ ತಂಡ ಎಂಬ ಖ್ಯಾತಿ ಗಳಿಸಲಿದೆ. ಈ ಹಿಂದೆ ಚೆನ್ನೈ ಸೂಪರ್‌ ಕಿಂಗ್ಸ್‌ 5, ಮುಂಬೈ ಇಂಡಿಯನ್ಸ್‌ 5, ಕೋಲ್ಕತಾ ನೈಟ್ ರೈಡರ್ಸ್‌ 3 ಬಾರಿ ಚಾಂಪಿಯನ್‌ ಆಗಿವೆ.

ಚೆನ್ನೈ, ಮುಂಬೈ ಪಟ್ಟಿ ಸೇರುತ್ತಾ ಆರ್‌ಸಿಬಿ?

ಐಪಿಎಲ್‌ನಲ್ಲಿ ಈವರೆಗೂ ಸತತವಾಗಿ 2 ಟ್ರೋಫಿ ಗೆದ್ದ ತಂಡಗಳು ಚೆನ್ನೈ ಹಾಗೂ ಮುಂಬೈ ಮಾತ್ರ. ಚೆನ್ನೈ 2010, 2011, ಮುಂಬೈ 2019, 2020ರಲ್ಲಿ ಸತತವಾಗಿ 2 ಬಾರಿ ಚಾಂಪಿಯನ್‌ ಆಗಿದ್ದವು. ಆರ್‌ಸಿಬಿಗೆ ಈ ದಾಖಲೆ ಬರೆಯುವ ಅವಕಾಶವಿದೆ.

ಮಳೆ ಬಂದರೆ ಪಂದ್ಯ ನಾಳೆಗೆ ಮುಂದೂಡಿಕೆ

ಭಾನುವಾರದ ಫೈನಲ್‌ಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಮಳೆ ಅಡ್ಡಿಪಡಿಸಿದರೆ ಹೆಚ್ಚುವರಿ 2 ಗಂಟೆಗಳಲ್ಲಿ ಪಂದ್ಯ ಮುಗಿಸಲು ಪ್ರಯತ್ನಿಸಲಾಗುತ್ತದೆ. ಅದರಲ್ಲೂ ಪಂದ್ಯ ನಡೆಯದಿದ್ದರೆ ಸೋಮವಾರಕ್ಕೆ ಮುಂದೂಡಿಕೆಯಾಗಲಿದೆ. 2023ರಲ್ಲಿ ಗುಜರಾತ್‌-ಚೆನ್ನೈ ನಡುವೆ ಅಹಮದಾಬಾದ್‌ನಲ್ಲೇ ನಡೆದಿದ್ದ ಫೈನಲ್‌ ಪಂದ್ಯ ಮೀಸಲು ದಿನದಂದು ನಡೆದು, ಚೆನ್ನೈ ಚಾಂಪಿಯನ್ ಆಗಿತ್ತು.