ಐಪಿಎಲ್ ಫೈನಲ್ ಚಾಂಪಿಯನ್ಸ್ ಯಾರು? ವಿರೇಂದ್ರ ಸೆಹ್ವಾಗ್ ಆಯ್ಕೆ ಮಾಡಿದ ತಂಡ ಇದೇ!
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿರುವಾಗಲೇ ಈ ಬಾರಿಯ ಚಾಂಪಿಯನ್ ಯಾರಾಗಬಹುದು ಎನ್ನುವ ಪ್ರಶ್ನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಾರಣ ನೀಡಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ವೀರೂ ಏನಂದ್ರು? ನೀವೇ ನೋಡಿ.

ಐಪಿಎಲ್ ಫೈನಲ್‌ಗೆ ಕ್ಷಣಗಣನೆ
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತು ತುದಿಗಾಲಿನಲ್ಲಿ ನಿಂತಿದೆ.
ಬಲಿಷ್ಠ ಆರ್‌ಸಿಬಿ-ಗುಜರಾತ್ ಟೈಟಾನ್ಸ್ ಕಾದಾಟ
ಆರ್‌ಸಿಬಿ ತಂಡವು ಲೀಗ್ ಹಂತದ ಅಂತ್ಯದ ವೇಳೆಗೆ ಅಗ್ರಸ್ಥಾನಿಯಾಗಿ ಕ್ವಾಲಿಫೈಯರ್-1ಗೆ ಅರ್ಹತೆ ಪಡೆದಿತ್ತು. ಇದಾದ ಬಳಿಕ ಕ್ವಾಲಿಫೈಯರ್-1 ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಇನ್ನು ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಕ್ವಾಲಿಫೈಯರ್-1 ಪಂದ್ಯದಲ್ಲಿ ಸೋತರೂ, ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಫೈನಲ್‌ಗೂ ಮುನ್ನ ಸೆಹ್ವಾಗ್ ಅಚ್ಚರಿ ಭವಿಷ್ಯ
ಇದೀಗ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಇಂದು ಸಂಜೆ 7.30ರಿಂದ ಆರಂಭವಾಗಲಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಹೀಗಿರುವಾಗಲೇ ಇಂದಿನ ಪಂದ್ಯ ಗೆಲ್ಲೋರು ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಗುಜರಾತ್ ಈ ಸಲ ಕಪ್ ಗೆಲ್ಲುವ ಫೇವರೇಟ್ ತಂಡ
ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ತವರಿನಲ್ಲಿ ಆಡುತ್ತಿರುವುದರಿಂದ ಗುಜರಾತ್ ಟೈಟಾನ್ಸ್ ತಂಡವೇ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇದರ ಜತೆಗೆ ತವರಿನ ಅಭಿಮಾನಿಗಳ ಹೆಚ್ಚಿನ ಬೆಂಬಲ ಗುಜರಾತ್ ತಂಡಕ್ಕೆ ಸಿಗಲಿದೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ನಾಯಕನಾಗಿ ಗಿಲ್ ಮೊದಲ ಸಲ ಕಪ್ ಗೆಲ್ಲಲಿದ್ದಾರೆ
ಗುಜರಾತ್ ಟೈಟಾನ್ಸ್ ತಂಡವು ತವರಿನ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಲು ಹೆಚ್ಚಿನ ಅವಕಾಶವಿದೆ ಎಂದು ನನಗನಿಸುತ್ತಿಲ್ಲ. ನನ್ನ ಪ್ರಕಾರ ಈ ಫೈನಲ್ ಪಂದ್ಯವನ್ನು ಗುಜರಾತ್ ಟೈಟಾನ್ಸ್ ಸುಲಭವಾಗಿ ಗೆಲ್ಲಲಿದೆ ಹಾಗೆಯೇ ಶುಭ್‌ಮನ್ ಗಿಲ್ ನಾಯಕನಾಗಿ ಮೊದಲ ಸಲ ಐಪಿಎಲ್ ಕಪ್ ಎತ್ತಿ ಹಿಡಿಯಲಿದ್ದಾರೆ ಎಂದು ವೀರೂ ಭವಿಷ್ಯ ನುಡಿದಿದ್ದಾರೆ.
ಶುಭ್‌ಮನ್ ಗಿಲ್ 2022ರಲ್ಲಿ ಆಟಗಾರನಾಗಿ ಗುಜರಾತ್ ಟೈಟಾನ್ಸ್ ಪರ ಐಪಿಎಲ್ ಟ್ರೋಫಿ ಜಯಿಸಿದ್ದಾರೆ. ಆದರೆ ನಾಯಕನಾಗಿ ಕಳೆದೆರಡು ವರ್ಷಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ತವರಿನಲ್ಲಿ ಕಪ್ ಗೆಲ್ಲಲು ಗಿಲ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಕ್ರಿಕೆಟ್ ಪಂಡಿತರ ಐಪಿಎಲ್ ಭವಿಷ್ಯ
ಇನ್ನುಳಿದಂತೆ ಆಕಾಶ್ ಚೋಪ್ರಾ, ಪೀಯೂಸ್ ಚಾವ್ಲಾ, ಅಂಬಟಿ ರಾಯುಡು ಕೂಡಾ ಈ ಸಲ ಗುಜರಾತ್ ಟೈಟಾನ್ಸ್ ತಂಡವೇ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಇರ್ಫಾನ್ ಪಠಾಣ್, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಎಬಿ ಡಿವಿಲಿಯರ್ಸ್, ಮೊಹಮ್ಮದ್ ಕೈಫ್ ಹಾಗೂ ಸುರೇಶ್ ರೈನಾ ಈ ಸಲ ಆರ್‌ಸಿಬಿ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

