ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್, ಟೀಂ ಇಂಡಿಯಾಗೆ ಮರಳಲು ಮನೆಯಲ್ಲಿ ಹೋಮ ಹವನ ಮಾಡಿಸಿದ್ದಾರೆ. ಆದರೆ, ಚೇರ್ ಮೇಲೆ ಕುಳಿತು ಪೂಜೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಅವರ ಕಮ್‌ಬ್ಯಾಕ್ ಯಾವಾಗ ಎಂಬ ಕುತೂಹಲ ಹೆಚ್ಚಿಸಿದೆ.

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲ ತಿಂಗಳಿನಿಂದ ಮೈದಾನದಿಂದ ಹೊರಗುಳಿದಿದ್ದಾರೆ. 30 ವರ್ಷದ ಶ್ರೇಯಸ್ ಅಯ್ಯರ್, ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ಬಾರಿಸಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಮೈದಾನ ತೊರೆದ ಶ್ರೇಯಸ್ ಅಯ್ಯರ್ ಅವರಿಗೆ ಡ್ರೆಸ್ಸಿಂಗ್‌ ರೂಂನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತುರ್ತು ಚಿಕಿತ್ಸೆಗಾಗಿ ಸಿಡ್ನಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಂಚ ನಿರ್ಲಕ್ಷ್ಯ ಮಾಡಿದ್ದರೂ ಗಾಯದ ತೀವ್ರತೆ ಮಾರಣಾಂತಿಕವಾಗಿತ್ತು ಎಂದೆಲ್ಲಾ ವರದಿಯಾಗಿತ್ತುಯ.

ಸದ್ಯ ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ತಮ್ಮ ಮನೆಯಲ್ಲಿ ಹೋಮ ಹವನ ಮಾಡಿಸುವ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ತಮ್ಮ ತಾಯಿಯ ಜತೆಗೂಡಿ ಶ್ರೇಯಸ್ ಅಯ್ಯರ್, ಪುರೋಹಿತರ ಮಾರ್ಗದರ್ಶನದಲ್ಲಿ ಮನೆಯಲ್ಲಿ ಪೂಜಾ ಕಾರ್ಯ ನಡೆಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಅಯ್ಯರ್; ಶುರುವಾಯ್ತು ಹೊಸ ಚರ್ಚೆ!

ಗಾಯದ ಬಳಿಕ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ ಅವರ ಪೂಜೆಯ ಕುರಿತಂತೆ ನೆಟ್ಟಿಗರು ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ. ಹಲವರು ಶ್ರೇಯಸ್ ಅವರ ಈ ಪೂಜಾ ಪದ್ದತಿಯನ್ನು ಮೆಚ್ಚಿಕೊಂಡಿದ್ದು, ಆದಷ್ಟು ಬೇಗ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿ ಎಂದು ಶುಭಹಾರೈಸಿದ್ದಾರೆ. ಇನ್ನು ಕೆಲವರು ಚೇರ್ ಮೇಲೆ ಕೂತು ಪೂಜೆ ಮಾಡಿಸಿದ ಶ್ರೇಯಸ್ ಅಯ್ಯರ್ ನಿಜವಾದ ಸನಾತನಿಯಲ್ಲ. ಸನಾತನಿಯಾದವರು ನೆಲದ ಮೇಲೆ ಕೂತು ಪೂಜೆ ಮಾಡಿಸುತ್ತಾರೆ. ಶ್ರೇಯಸ್ ಅಯ್ಯರ್ ಅವರು ಮಾಡಿದ ಕ್ರಮ ಸರಿಯಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಆರಂಭಿಸಿದ್ದಾರೆ.

View post on Instagram

ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಯಾವಾಗ?

ಭಾರತ ಏಕದಿನ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಇನ್ನು ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲೂ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯುವುದು ಅನುಮಾನ ಎನಿಸಿದೆ. ಹೀಗಾದಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವುದು ಕೂಡಾ ಅನುಮಾನ ಎನಿಸಿದೆ. ಇನ್ನು 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆಗೆ ಶ್ರೇಯಸ್ ಅಯ್ಯರ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ.

ಐಪಿಎಲ್‌ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶ್ರೇಯಸ್ ಅಯ್ಯರ್:

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೇರಿಸಿದ್ದ ನಾಯಕ ಶ್ರೇಯಸ್ ಅಯ್ಯರ್, ಇದೇ ಡಿಸೆಂಬರ್ 16ರಂದು ಅಬುದಾಬಿಯಲ್ಲಿ ನಡೆಯಲಿರುವ 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿಯ ಜತೆ ಹರಾಜಿನ ಟೇಬಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಫ್ರಾಂಚೈಸಿ ಪರ ಆಕ್ಷನ್ ಟೇಬಲ್‌ನಲ್ಲಿ ಗರಿಷ್ಠ 8 ಮಂದಿ ಕಾಣಿಸಿಕೊಳ್ಳಲು ಅವಕಾಶವಿದೆ. ಈಗಾಗಲೇ ಶ್ರೇಯಸ್ ಅಯ್ಯರ್ ಹರಾಜಿನ ಟೇಬಲ್‌ನಲ್ಲಿ ಪಂಜಾಬ್ ಪರ ಇರಲಿದ್ದಾರೆ ಎಂದು ಫ್ರಾಂಚೈಸಿಯು ಈಗಾಗಲೇ ಖಚಿತಪಡಿಸಿದೆ.