ಜೈಪುರದಲ್ಲಿ ನಡೆದ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯವು ಗುರು-ಶಿಷ್ಯರ ಭೇಟಿಗೆ ಸಾಕ್ಷಿಯಾಯಿತು. ಪಂದ್ಯದ ವೇಳೆ ಕೊಹ್ಲಿ, ದ್ರಾವಿಡ್ ಅವರ ಯೋಗಕ್ಷೇಮ ವಿಚಾರಿಸಿದರು. ಈ ಪಂದ್ಯದಲ್ಲಿ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನು ಪೂರೈಸಿದ ಏಷ್ಯಾದ ಮೊದಲ ಆಟಗಾರ ಎನಿಸಿಕೊಂಡರು. ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್‌ಗಳಿಂದ ಜಯಗಳಿಸಿತು, ರಾಜಸ್ಥಾನ ರಾಯಲ್ಸ್ ತಂಡವು 8ನೇ ಸ್ಥಾನಕ್ಕೆ ಕುಸಿಯಿತು.
ಜೈಪುರ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹಲವು ರೋಚಕ ಪಂದ್ಯಾಟಗಳಿಗೆ ಸಾಕ್ಷಿಯಾಗಿದೆ. ಇದರ ಜತೆಗೆ ಹಲವು ಹೃದಯಸ್ಪರ್ಶಿ ಘಟನೆಗಳಿಗೂ ಸಾಕ್ಷಿಯಾಗಿದೆ. ಇನ್ನು ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವು ಗುರು ಶಿಷ್ಯರ ಸಮಾಗಮಕ್ಕೆ ಸಾಕ್ಷಿಯಾಯಿತು.
ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲು ಆರ್‌ಸಿಬಿ ತಂಡವು ಭಾನುವಾರ ಜೈಪುರಕ್ಕೆ ಬಂದಿತ್ತು. ಪಂದ್ಯ ಆರಂಭಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಹೆಡ್‌ಕೋಚ್ ರಾಹುಲ್ ದ್ರಾವಿಡ್ ಅವರನ್ನು ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜಸ್ಥಾನ ರಾಯಲ್ಸ್ ತಂಡವು ತಾನಾಡಿದ ಮೊದಲ ತವರಿನ ಪಂದ್ಯದಲ್ಲೇ ಸೋಲು ಅನುಭವಿಸಿದೆ. ಆರ್‌ಸಿಬಿ ತಂಡವು ಟೂರ್ನಿಯಲ್ಲಿ 4ನೇ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡವು ಟೂರ್ನಿಯಲ್ಲಿ 4ನೇ ಸೋಲು ಅನುಭವಿಸಿ 8ನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್ ಆಟಗಾರರ ಸ್ಯಾಲರಿಗೂ IPL ಪ್ಲೇಯರ್ಸ್ ಸಂಬಳಕ್ಕೂ ಭೂಮಿ-ಆಕಾಶದಷ್ಟು ಅಂತರ!
ಇನ್ನು ಆರ್‌ಸಿಬಿ-ರಾಜಸ್ಥಾನ ನಡುವಿನ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ವೀಲ್‌ಚೇರ್‌ನಲ್ಲಿ ಕುಳಿತು ರಾಜಸ್ಥಾನ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್, ತಮ್ಮ ತಂಡದ ಆಟಗಾರರ ಅಭ್ಯಾಸವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ರಾಹುಲ್ ದ್ರಾವಿಡ್ ಇರುವುದನ್ನು ಗಮನಿಸಿದ ವಿರಾಟ್ ಕೊಹ್ಲಿ, ದ್ರಾವಿಡ್ ಬಳಿ ಬಂದು ತಮಾಷೆ ಮಾಡುತ್ತಾ ಮಂಡಿಯೂರಿ ಅವರ ಯೋಗಕ್ಷೇಮ ವಿಚಾರಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೀಗಿತ್ತೂ ನೋಡಿ ಆ ಕ್ಷಣ:
ಕೊಹ್ಲಿ 100 ಅರ್ಧಶತಕ!
ರನ್ ಮೆಷಿನ್, ಕಿಂಗ್ ಎಂದೆಲ್ಲಾ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 100 ಬಾರಿ ಅರ್ಧಶತಕ(50 ರನ್) ಬಾರಿಸಿದ ವಿಶ್ವದ 2ನೇ, ಏಷ್ಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾನುವಾರ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಅವರು 62 ರನ್ ಸಿಡಿಸಿದರು. ಇದು ಟಿ20ಯಲ್ಲಿ ಅವರ 100ನೇ ಅರ್ಧಶತಕ. ಒಟ್ಟು 405 ಪಂದ್ಯಗಳನ್ನಾಡಿರುವ ಕೊಹ್ಲಿ, 388 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು 9 ಶತಕಗಳನ್ನೂ ಬಾರಿಸಿದ್ದು, ಒಟ್ಟಾರೆ 13134 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: ಕರುಣ್ ನಾಯರ್ ಜತೆ ಕಿತ್ತಾಡಿಕೊಂಡ ಬುಮ್ರಾ; ಮಜಾ ತೆಗೆದುಕೊಂಡ್ರಾ ರೋಹಿತ್ ಶರ್ಮಾ?
ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿಗಿಂ ಹೆಚ್ಚು ಅರ್ಧಶತಕ ಬಾರಿಸಿದ್ದು ಆಸ್ಟ್ರೇಲಿಯಾ ಡೇವಿಡ್ ವಾರ್ನರ್. ಅವರು 108 ಬಾರಿ ಈ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ಬಾಬರ್ ಆಜಂ 90, ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ 88, ಇಂಗ್ಲೆಂಡ್‌ನ ಜೋಸ್ ಬಟ್ಲರ್ 86 ಅರ್ಧಶತಕ ಬಾರಿಸಿದ್ದಾರೆ.
ಇನ್ನು ಆರ್‌ಸಿಬಿ ಎದುರು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 4 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಫಿಲ್ ಸಾಲ್ಟ್(65), ವಿರಾಟ್ ಕೊಹ್ಲಿ(62) ಹಾಗೂ ರಜತ್ ಪಾಟೀದಾರ್(40*) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಇನ್ನೂ 15 ಎಸೆತ ಬಾಕಿ ಇರುವಂತೆಯೇ 9 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಪಂದ್ಯ ಮುಗಿಸಿ ಪೆವಿಲಿಯನ್‌ಗೆ ವಾಪಾಸಾಗುತ್ತಿದ್ದಾಗ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ವಾಕರ್ ಹಿಡಿದು ಮೈದಾನಕ್ಕೆ ಬಂದರು. ಆಗ ವಿರಾಟ್, ದ್ರಾವಿಡ್ ಅವರನ್ನು ಉದ್ದೇಶಿಸಿ ನೀವು ಅಲ್ಲೇ ಇರಿ, ನಾನೇ ಬರ್ತಿನಿ ಎಂದು ಹೇಳುವ ಮೂಲಕ ಗಮನ ಸೆಳೆದರು. ಈ ವಿಡಿಯೋ ಕೂಡಾ ವೈರಲ್ ಆಗಿದೆ.
