ಮಾರ್ಚ್ 22, 2025 ರಂದು ಐಪಿಎಲ್ 18ನೇ ಆವೃತ್ತಿ ಆರಂಭವಾಗಲಿದ್ದು, ಕೋಲ್ಕತ್ತಾ ಮತ್ತು ಬೆಂಗಳೂರು ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಲಿವೆ. ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಅವಕಾಶವಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಕೊಹ್ಲಿ ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸುವುದು ಅವರ ವೃತ್ತಿಜೀವನಕ್ಕೆ ಉತ್ತಮ ಫಿನಿಶಿಂಗ್ ಟಚ್ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದು ಕೊಹ್ಲಿಯ ನಿವೃತ್ತಿಯ ಸುಳಿವೂ ಆಗಿರಬಹುದು ಎಂದು ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರು: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಮಾರ್ಚ್ 22ರಿಂದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುವುದರೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ.

ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತನ್ನ ಗೆಳೆಯ ಹಾಗೂ ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ. ಇನ್ನು ಇದೇ ವೇಳೆ ಕೊಹ್ಲಿ ಸದ್ಯದಲ್ಲಿಯೇ ಐಪಿಎಲ್‌ಗೆ ಗುಡ್ ಬೈ ಹೇಳುತ್ತಾರಾ ಎನ್ನುವಂತಹ ಸುಳಿವನ್ನು ಎಬಿಡಿ ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತಕ್ಕೆ ವರ, ಕಿವೀಸ್‌ಗೆ ಶಾಪವಾದ ಹೈಬ್ರಿಡ್ ಮಾದರಿ ಟೂರ್ನಿ!

2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ. ಇತ್ತೀಚೆಗಷ್ಟೇ ಬೆಂಗಳೂರು ಫ್ರಾಂಚೈಸಿಯು ಪ್ರತಿಭಾನ್ವಿತ ಕ್ರಿಕೆಟಿಗ ರಜತ್ ಪಾಟೀದಾರ್ ಅವರನ್ನು ಆರ್‌ಸಿಬಿ ತಂಡದ ನಾಯಕರನ್ನಾಗಿ ನೇಮಿಸಿತ್ತು. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಇರುವುದು ತಂಡದ ಆತ್ಮವಿಶ್ವಾಸ ಹಾಗೂ ಜೋಶ್ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ವಿರಾಟ್ ಕೊಹ್ಲಿ ಐಪಿಎಲ್‌ನ ಸ್ಟಾರ್ ಆಟಗಾರ, ಏಕಾಂಗಿಯಾಗಿ ಹಲವಾರು ಪಂದ್ಯಗಳಲ್ಲಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟಿದ್ದಾರೆ. ಆದರೆ ದುರಾದೃಷ್ಟವಶಾತ್ ಇದುವರೆಗೂ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ 18 ಆವೃತ್ತಿಗಳಿಂದಲೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಕೊಹ್ಲಿಗೆ ಐಪಿಎಲ್ ಟ್ರೋಫಿ ಗಗನ ಕುಸುಮವಾಗಿಯೇ ಉಳಿದಿದೆ.

ಇನ್ನು ಕುರಿತಂತೆ ವಿರಾಟ್ ಕೊಹ್ಲಿ ಬಗ್ಗೆ ಆತ್ಮೀಯ ಗೆಳೆಯ ಎಬಿ ಡಿವಿಲಿಯರ್ಸ್ ಮನಬಿಚ್ಚಿ ಮಾತನಾಡಿದ್ದಾರೆ. 'ಈಗಾಗಲೇ ಅಸಾಧಾರಣ ವೃತ್ತಿಜೀವನವನ್ನು ಹೊಂದಿರುವ ವಿರಾಟ್ ಕೊಹ್ಲಿಗೆ ಆರ್‌ಸಿಬಿಗಾಗಿ ಐಪಿಎಲ್ ಟ್ರೋಫಿ ಗೆಲ್ಲುವುದು ಅತ್ಯುತ್ತಮ ಫಿನಿಶಿಂಗ್ ಟಚ್ ಎನಿಸಲಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರ ಸ್ಟ್ರೈಕ್‌ರೇಟ್ ಒಂದು ಸಮಸ್ಯೆಯೇ ಅಲ್ಲ. ಅವರು ತಂಡಕ್ಕೆ ಏನು ಅಗತ್ಯವಿದೆಯೋ ಅದಕ್ಕೆ ತಕ್ಕಂತೆ ಆಡುತ್ತಾರೆ' ಎಂದು ಎಬಿಡಿ ಹೇಳಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿ ಅನ್‌ಬಾಕ್ಸ್‌ ಟಿಕೆಟ್‌ 1 ಗಂಟೆಯಲ್ಲೇ ಸೋಲ್ಡೌಟ್‌!

ಆರ್‌ಸಿಬಿಗಾಗಿ ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿ ಗೆಲ್ಲುವುದು ಸರಿಯಾದ ಫಿನಿಶಿಂಗ್ ಟಚ್ ಎಂದು ಹೇಳುವ ಮೂಲಕ ಕಿಂಗ್ ಕೊಹ್ಲಿ ಐಪಿಎಲ್‌ ನಿವೃತ್ತಿಯ ಹೊಸ್ತಿಲಲ್ಲಿದ್ದಾರೆ ಎನ್ನುವ ಸುಳಿವನ್ನು ಎಬಿಡಿ ಬಿಚ್ಚಿಟ್ಟಿದ್ದಾರೆ ಎನ್ನುವಂತಹ ಚರ್ಚೆ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ.