ಮಾರ್ಚ್ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದ ಟಿಕೆಟ್‌ಗಳು ಒಂದು ಗಂಟೆಯಲ್ಲೇ ಮಾರಾಟವಾಗಿವೆ. ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಈ ಕಾರ್ಯಕ್ರಮ ಆಯೋಜಿಸುತ್ತದೆ. ಮತ್ತೊಂದೆಡೆ, ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಯುಪಿ ವಾರಿಯರ್ಸ್ ವಿರುದ್ಧ ಗೆದ್ದು ಪ್ಲೇ-ಆಫ್ ರೇಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಮುಂಬೈ 6 ವಿಕೆಟ್‌ಗಳಿಂದ ಜಯಗಳಿಸಿತು.
ಬೆಂಗಳೂರು: ಮಾ.17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಆರ್‌ಸಿಬಿ ಅನ್‌ಬಾಕ್ಸ್’ ಕಾರ್ಯಕ್ರಮದ ಟಿಕೆಟ್‌ಗಳು ಕೇವಲ ಒಂದು ಗಂಟೆಯಲ್ಲೇ ಮಾರಾಟವಾಗಿದೆ. ಕೆಲ ವರ್ಷಗಳಿಂದ ಆರ್‌ಸಿಬಿ ಐಪಿಎಲ್‌ಗೂ ಮುನ್ನ ಅನ್‌ಬಾಕ್ಸ್ ಕಾರ್ಯಕ್ರಮ ಆಯೋಜಿಸುತ್ತಿದೆ. ಆಟಗಾರರ ಅಭ್ಯಾಸ, ಜೆರ್ಸಿ ಬಿಡುಗಡೆ, ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ಈ ಬಾರಿ ಅನ್‌ಬಾಕ್ಸ್ ಕಾರ್ಯಕ್ರಮದ ಟಿಕೆಟ್‌ಗಳನ್ನು ಮಂಗಳವಾರ ಸಂಜೆ 5 ಗಂಟೆಗೆ ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಕನಿಷ್ಠ ₹800ರಿಂದ ಗರಿಷ್ಠ ₹5000 ವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಆದರೆ ಸಂಜೆ 6 ಗಂಟೆ ವೇಳೆ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದಾಗಿ ವೆಬ್‌ಸೈಟ್‌ನಲ್ಲಿ ತೋರಿಸುತ್ತಿತ್ತು. ಆರ್‌ಸಿಬಿ 18ನೇ ಆವೃತ್ತಿ ಐಪಿಎಲ್‌ನಲ್ಲಿ ಮಾ.22ರಂದು ಕೋಲ್ಕತಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಟಾಪ್ 5 ಏಕದಿನ ಬ್ಯಾಟರ್ ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್!
ಪ್ಲೇ-ಆಫ್‌ನತ್ತ ಮುಂಬೈ ಇಂಡಿಯನ್ಸ್
ಲಖನೌ: 3ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ 4ನೇ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್ ಪ್ಲೇ-ಆಫ್‌ನತ್ತ ಲಗ್ಗೆ ಇಟ್ಟಿದೆ. ಗುರುವಾರ ಯುಪಿ ವಾರಿಯರ್ಸ್ ವಿರುದ್ಧ ಮುಂಬೈ 06 ವಿಕೆಟ್ ಜಯಭೇರಿ ಬಾರಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ 4ನೇ ಗೆಲುವು ದಾಖಲಿಸಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. 7 ಪಂದ್ಯಗಳಲ್ಲಿ 5ನೇ ಸೋಲು ಕಂಡ ಯುಪಿ ಪ್ಲೇ-ಆಫ್ ರೇಸ್‌ನಿಂದ ಹೊರಬಿತ್ತು.
ಮೊದಲು ಬ್ಯಾಟ್ ಮಾಡಿದ ಯುಪಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 150 ರನ್ ಕಲೆಹಾಕಿತು. ಆರಂಭಿಕ ಆಟಗಾರ್ತಿ ಜಾರ್ಜಿಯಾ ವೊಲ್ 33 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 55 ರನ್ ಸಿಡಿಸಿದರೂ, ಅಮೇಲಿ ಕೇರ್ ಮಾರಕ ದಾಳಿಯಿಂದಾಗಿ ಯುಪಿಗೆ ದೊಡ್ಡ ಮೊತ್ತ ಕಲೆಹಾಕಲಾಗಲಿಲ್ಲ. ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ 27 ಹೊರತುಪಡಿಸಿ ಇತರರು ವಿಫಲರಾದರು. ಅಮೇಲಿ 4 ಓವರ್‌ಗಳಲ್ಲಿ 38 ರನ್ ನೀಡಿ 5 ವಿಕೆಟ್ ಪಡೆದರು.
ಇದನ್ನೂ ಓದಿ: 'ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಗಢಾಫಿ ಸ್ಟೇಡಿಯಂ': ಪಾಕ್ ಕಾಲೆಳೆದ ನೆಟ್ಟಿಗರು!
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ 18.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಸ್ಫೋಟಕ ಆಟ ಮುಂಬೈಗೆ ದೊಡ್ಡ ಗೆಲುವಿನ ಉಡುಗೊರೆ ನೀಡಿತು. 46 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 68 ರನ್ ಸಿಡಿಸಿದ ಮ್ಯಾಥ್ಯೂಸ್ 14ನೇ ಓವರ್‌ನಲ್ಲಿ ಔಟಾದರೂ, ತಂಡ ಅದಾಗಲೇ ಗೆಲುವಿನ ಸನಿಹ ತಲುಪಿತ್ತು. ನ್ಯಾಟ್ ಶೀವರ್ ಬ್ರಂಟ್ 37 ರನ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಯಸ್ತಿಕಾ ಭಾಟಿಯಾ ಹಾಗೂ ಅಮನ್‌ಜೋತ್ ಕೌರ್ ತಂಡವನ್ನು ಗೆಲ್ಲಿಸಿದರು.
ಸ್ಕೋರ್:
ಯುಪಿ 20 ಓವರಲ್ಲಿ 150/9 (ಜಾರ್ಜಿಯಾ 55, ಗ್ರೇಸ್ 28, ದೀಪ್ತಿ 27, ಅಮೇಲಿ 5-38),
ಮುಂಬೈ 18.3 ಓವರಲ್ಲಿ 153/4 (ಹೇಲಿ ಮ್ಯಾಥ್ಯೂಸ್ 68, ಶೀವರ್ ಬ್ರಂಟ್ 37, ಗ್ರೇಸ್ 1-9)
