2025ರ ಐಪಿಎಲ್ ಟೂರ್ನಿಯು ಮೇ 16 ರಿಂದ ಪುನರಾರಂಭವಾಗುವ ಸಾಧ್ಯತೆಯಿದ್ದು, ಮೊದಲ ಪಂದ್ಯ ಆರ್‌ಸಿಬಿ ಮತ್ತು ಲಖನೌ ನಡುವೆ ನಡೆಯಲಿದೆ ಎನ್ನಲಾಗಿದೆ. ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಹೊಸ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ನ ರೋಚಕ ಕಾದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ದದ ಭೀತಿಯಿಂದಾಗಿ ಒಂದು ವಾರದ ಮಟ್ಟಿಗೆ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. 18ನೇ ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ 12 ಪಂದ್ಯಗಳು ಸೇರಿದಂತೆ ಒಟ್ಟು 16 ಪಂದ್ಯಗಳು ನಡೆಯುವುದು ಬಾಕಿ ಉಳಿದಿದೆ. ಈ ಪಂದ್ಯಗಳಿಗೆ ಇಂದು ಹೊಸದಾಗಿ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.
ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳು ಇದೇ ಮೇ 16ರಿಂದ ಆರಂಭವಾಗಲಿದೆ ಎನ್ನಲಾಗುತ್ತಿವೆ. ಆಟಗಾರರು ಹಾಗೂ ಪ್ರೇಕ್ಷಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಇನ್ನುಳಿದ ಪಂದ್ಯಗಳನ್ನು ದಕ್ಷಿಣ ಭಾರತದ ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಪಂದ್ಯಾಟಗಳನ್ನು ಆಯೋಜಿಸಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದೆಲ್ಲದರ ನಡುವೆ ಹೊಸ ವೇಳಾಪಟ್ಟಿಯ ಪ್ರಕಾರ ಮೊದಲ ಪಂದ್ಯ ಆಡೋರು ಯಾರು ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಯಾಕೆಂದರೆ ಕಳೆದ ಗುರುವಾರ ಧರ್ಮಶಾಲಾದಲ್ಲಿ ಆಯೋಜನೆಗೊಂಡಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಅರ್ಧಕ್ಕೆ ದಿಢೀರ್ ಸ್ಥಗಿತಗೊಂಡಿತ್ತು. ಈ ಮ್ಯಾಚ್ ಕುರಿತಂತೆ ಇದುವರೆಗೂ ಬಿಸಿಸಿಐ ಯಾವುದೇ ಅಪ್‌ಡೇಟ್ ನೀಡಿಲ್ಲ.
ಮೊದಲ ಮ್ಯಾಚ್ ಆಡೋರು ಯಾರು?
2025ರ ಐಪಿಎಲ್ 2.O ಟೂರ್ನಿಯು ಇದೇ ಮೇ 16ರಿಂದ ಆರಂಭವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆಯಾದರೂ, ಬಿಸಿಸಿಐ ಇದುವರೆಗೂ ಯಾವುದೇ ಅಧಿಕೃತ ಅಪ್‌ಡೇಟ್ ನೀಡಿಲ್ಲ. ಆದರೆ ಎಎನ್‌ಐ ವರದಿಯ ಪ್ರಕಾರ, ಪುನರಾರಂಭಗೊಳ್ಳಲ್ಲಿರುವ ಐಪಿಎಲ್‌ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ ಎನ್ನಲಾಗುತ್ತಿದೆ. ಈ ಪಂದ್ಯವು ಲಖನೌನ ಏಕನಾ ಸ್ಟೇಡಿಯಂನಲ್ಲಿ ನಿಗದಿಯಾಗಿತ್ತು. ಆದರೆ ಈ ಪಂದ್ಯ ನಡೆಯುವ ಸ್ಥಳ ಬದಲಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದೀಗ ಈ ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜನೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪಂಜಾಬ್-ಡೆಲ್ಲಿ ಮ್ಯಾಚ್ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ:
ಪಹಲ್ಗಾಮ್ ದುರಂತಕ್ಕೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಗಳನ್ನು ಗುರಿಯಾಗಿಟ್ಟುಕೊಂಡು 'ಆಪರೇಷನ್ ಸಿಂದೂರ್' ಹೆಸರಿನಲ್ಲಿ ಸೇನಾ ಕಾರ್ಯಚರಣೆ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡಾ ಗಡಿ ಭಾಗದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದೇ ಕಾರಣಕ್ಕಾಗಿ ಧರ್ಮಶಾಲಾದಲ್ಲಿ ಆಯೋಜನೆಗೊಂಡಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧದಲ್ಲಿಯೇ ದಿಢೀರ್ ಸ್ಥಗಿತಗೊಳಿಸಿತ್ತು. ಈ ಪಂದ್ಯವನ್ನು ಪುನರಾರಂಭ ಗೊಳಿಸುತ್ತಾರೋ, ಹೊಸದಾಗಿ ಮತ್ತೊಮ್ಮೆ ಈ ಮ್ಯಾಚ್ ಆಯೋಜಿಸುತ್ತಾರೋ ಅಥವಾ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗುತ್ತದೆಯೋ ಎನ್ನುವ ಪ್ರಶ್ನೆಗೆ ಇದುವರೆಗೂ ಬಿಸಿಸಿಐ ಯಾವುದೇ ಉತ್ತರ ನೀಡಿಲ್ಲ.


