ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ತುಂತುರ ಮಳೆಯಿಂದ ಟಾಸ್ ವಿಳಂಬಗೊಂಡಿದೆ. ಕಳೆದೆರಡು ತವರಿನ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿಗೆ ಇದು ಮಹತ್ವದ ಪಂದ್ಯವಾಗಿದೆ.
ಬೆಂಗಳೂರು(ಏ.18) ಐಪಿಎಲ್ 2025ರ ಟೂರ್ನಿಯಲ್ಲಿ ಆರ್‌ಸಿಬಿ ಅದ್ಭುತ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದೆ. ಆದರೆ ತವರಿನಲ್ಲಿ ಆಡಿದ 2 ಪಂದ್ಯಗಳನ್ನ ಕೈಚೆಲ್ಲುವ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಅಭಿಮಾನಿಗಳಿಗೆ ಪದೇ ಪದೇ ಟೆನ್ಶನ್ ಕೊಡುತ್ತಿದೆ. ಇದೀಗ ತವರಿನ ಸೋಲು ಮರೆತು ಪಂಜಾಬ್ ಕಿಂಗ್ಸ್ ವಿರುದ್ದ ಗೆಲುವಿನ ಲಯಕ್ಕೆ ಮರಳಲು ಆರ್‌ಸಿಬಿ ಸಜ್ಜಾಗಿದೆ. ಆದರೆ ಬೆಂಗಳೂರಿನಲ್ಲಿ ಸಂಜೆಯಿಂದ ತುಂತುರು ಮಳೆ ಆರಂಭಗೊಂಡಿದೆ. ಇದರ ಪರಿಣಾಮ ಆರ್‌ಸಿಬಿ ಪಂಜಾಬ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ.
ಬೆಂಗಳೂರು ಮಳೆ
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇದೀಗ ತುಂತುರು ಮಳೆ ಆರಂಭಗೊಂಡಿದೆ. ಹೀಗಾಗಿ ಪಿಚ್ ಮುಚ್ಚಲಾಗಿದೆ. ಮಳೆ ನಿಂತ ಕೂಡಲೇ ಪಂದ್ಯ ಆರಂಭಗೊಳ್ಳಲಿದೆ. ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವದ ಅತ್ಯಾಧುನಿಕ ಸಬ್ ಏರ್ ಸಿಸ್ಟಮ್ ಇದೆ. ಹೀಗಾಗಿ ಮಳೆ ನಿಂತ ತಕ್ಷಣೇ ನೀರು ಕ್ಷಣಾರ್ಥದಲ್ಲಿ ಹೀರಿ ಕೊಳ್ಳಲಿದೆ. ಹೀಗಾಗಿ ಪಂದ್ಯ ಹೆಚ್ಚಿನ ವಿಳಂಬವಿಲ್ಲದೆ ಆರಂಬಗೊಳ್ಳಲಿದೆ. ಸದ್ಯ ಮಳೆ ಕಡಿಮೆಯಾಗುತ್ತಿದೆ. ಮೈದಾನದ ಸಿಬ್ಬಂದಿಗಳು ಬೌಂಡರಿ ಗೆರೆ ಬಳಿ ಮಳೆ ನಿಲ್ಲಲು ಕಾಯುತ್ತಿದ್ದಾರೆ.
ಸತತ ಸೋಲುಗಳಿಂದ ಕಂಗೆಟ್ಟ ಚೆನ್ನೈ ಸೂಪರ್ ಕಿಂಗ್ಸ್‌ಗೆ ಡೆಡ್ಲಿ ಬ್ಯಾಟರ್ ಎಂಟ್ರಿ! ಖಡಕ್ ಸಂದೇಶ ರವಾನೆ
ತವರಿನ ಪಂದ್ಯ ಭೀತಿ
ಆರ್‌ಸಿಬಿ ಹಾೂ ಪಂಜಾಬ್ ಕಿಂಗ್ಸ್ ಉತ್ತಮ ಫಾರ್ಮ್‌ನಲ್ಲಿದೆ. ಉಭಯ ತಂಡಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ದಿಟ್ಟಹೋರಾಟ ನೀಡುತ್ತಿದೆ. ಹೀಗಾಗಿ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಪಂಜಾಬ್ ಕಿಂಗ್ಸ್ ಇದೀಗ ಆರ್‌ಸಿಬಿ ವಿರುದ್ದ ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಆರ್‌ಸಿಬಿ ಕೂಡ ತವರಿನಲ್ಲಿ ಮೊದಲ ಗೆಲುವಿಗೆ ಹೊಂಚು ಹಾಕಿದೆ. ಕಳೆದೆರಡು ತವರಿನ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣಾಗಿದೆ. ಈ ಬಾರಿ ಆರ್‌ಸಿಬಿ ತಂಡಕ್ಕೆ ತವರಿನ ಪಂದ್ಯಗಳು ವರವಾಗುತ್ತಿಲ್ಲ. ತವರಿನಿಂದ ಹೊರಗೆ ಆಡಿದ ಎಲ್ಲಾ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಕಂಡಿದೆ.
ಅಂಕಪಟ್ಟಿಯಲ್ಲಿ ಆರ್‌ಸಿಬಿ
ಆರ್‌ಸಿಬಿ ತವರಿನಲ್ಲಿ ಆಡಿದ 2 ಪಂದ್ಯದಲ್ಲಿ ಸೋಲು ಕಂಡಿದ್ದರೆ, ಹೊರಗಡೆ ಆಡಿದ 4 ಪಂದ್ಯದಲ್ಲಿ ಗೆಲುವು ದಾಖಲಿಸಿದೆ. 8 ಅಂಕಗಳೊಂದಿಗೆ ಆರ್‌ಸಿಬಿ ಐಪಿಎಲ್ 2025ರ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನು ಇಂದಿನ ಆರ್‌ಸಿಬಿ ಎದುರಾಳಿ ಪಂಜಾಬ್ ಕಿಂಗ್ಸ್ ನಾಲ್ಕು ಗೆಲುವು 2 ಸೋಲಿನೊಂದಿಗೆ 4ನೇ ಸ್ಥಾನದಲ್ಲಿದೆ. ಆಡಿದ 6 ಪಂದ್ಯದಲ್ಲಿ ಐದು ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನದಲ್ಲಿದೆ. ಇನ್ನು ಗುಜರಾತ್ ಟೈಟಾನ್ಸ್ 4 ಗೆಲುವಿನೊಂದಿಗೆ 2ನೇ ಸ್ಥಾನದಲ್ಲಿದೆ.ಇನ್ನು ಅಂಕಪಟ್ಟಿಯಲ್ಲಿ ಕೊನೆಯ ಹಾಗೂ 10ನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕುಸಿದಿದೆ. ಸಿಎಸ್‌ಕೆ 5 ಸೋಲು ಹಾಗೂ 2 ಗೆಲುವು ದಾಖಲಿಸಿದೆ.
