ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪಂದ್ಯ ಆರಂಭವಾಗುವುದು ತಡವಾಗಿದ್ದು, ಪೂರ್ಣ 20 ಓವರ್‌ಗಳ ಪಂದ್ಯ ನಡೆಯುವುದು ಅನುಮಾನ. ಕನಿಷ್ಠ 5 ಓವರ್‌ಗಳ ಪಂದ್ಯವಾಡಲು ರಾತ್ರಿ 10.54ರವರೆಗೆ ಕಾಲಾವಕಾಶವಿದೆ.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಆದರೆ ಈ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದು ಟಾಸ್ ಕೂಡಾ ತಡವಾಗಿದೆ. ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಹೈವೋಲ್ಟೇಜ್ ಪಂದ್ಯ ಆರಂಭಿಸಲು ಎಲ್ಲಿಯವರೆಗೆ ಕಾಲಾವಕಾಶ ಎನ್ನುವ ಕುತೂಹಲ ಕೂಡಾ ಅಭಿಮಾನಿಗಳಲ್ಲಿ ಜೋರಾಗಿದೆ.
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ 6 ಪಂದ್ಯಗಳನ್ನಾಡಿದ್ದು, 4 ಗೆಲುವು ಹಾಗೂ 2 ಸೋಲು ಸಹಿತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆರ್‌ಸಿಬಿ ತವರಿನಾಚೆಯೇ 4 ಪಂದ್ಯಗಳನ್ನು ಗೆದ್ದಿದೆ. ಆದರೆ ತವರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿದೆ.
ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಇಂದು ಸಂಜೆ 7 ಗಂಟೆಗೆ ನಡೆಯಬೇಕಿತ್ತು. ಅದೇ ರೀತಿ ಪೂರ್ವ ನಿಗದಿಯಂತೆ ಇಂದು ಸಂಜೆ 7.30ರಿಂದ ಅಧಿಕೃತವಾಗಿ ಪಂದ್ಯ ಆರಂಭವಾಗಬೇಕಿತ್ತು. ಆದರೆ ಇದೀಗ 8.30 ಆದರೂ ಇನ್ನೂ ಪಂದ್ಯಾಟ ಆರಂಭವಾಗಿಲ್ಲ. ಹೀಗಾಗಿ ಇಂದಿನ ಪಂದ್ಯ ನಡೆಯುತ್ತೋ ಇಲ್ಲವೋ ಎನ್ನುವ ಆತಂಕ ಅಭಿಮಾನಿಗಳಲ್ಲಿ ಜೋರಾಗಿದೆ.
ಪಂದ್ಯ ಆರಂಭ ತಡವಾಗಿರುವುದರಿಂದ ಇಂದು ಪೂರ್ಣ 20 ಓವರ್ ಇನ್ನಿಂಗ್ಸ್ ಆಟ ನಡೆಯುವುದಿಲ್ಲ. ಓವರ್‌ಗಳ ಸಂಖ್ಯೆ ಕಡಿತವಾಗಲಿದೆ. ಇನ್ನು ಕನಿಷ್ಠ ಪಕ್ಷ 5 ಓವರ್‌ಗಳ ಪಂದ್ಯ ಆರಂಭಿಸಲು ಇಂದು ರಾತ್ರಿ 10.54ರ ವರೆಗೂ ಕಾಲಾವಕಾಶವಿದೆ. ಅಲ್ಲಿಯವರೆಗೂ ಪಂದ್ಯಾಟವಾಡಿಸಲು ಸಾಧ್ಯವಾಗದಿದ್ದರೇ, ಈ ಪಂದ್ಯವನ್ನು ರದ್ದುಪಡಿಸಲಾಗುತ್ತದೆ. ಆಗ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಳ್ಳಲಿವೆ.
ಬೆಂಗಳೂರಿನ ಸ್ಟೇಡಿಯಂನಲ್ಲಿದೆ ಸಬ್-ಏರ್ ಸಿಸ್ಟಂ:
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್‌ಏರ್ ಸಿಸ್ಟಂ ಅಳವಡಿಸಲಾಗಿದೆ. ಒಂದು ವೇಳೆ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭಿಸಲು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಪಂದ್ಯ ಆರಂಭವಾಗುವ ಸಾಧ್ಯತೆಯಿದೆ.
