ಐಪಿಎಲ್ 2025ರ ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗೆಲುವಿನ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, ಸೋತ ತಂಡಕ್ಕೆ ಎಲಿಮಿನೇಟರ್‌ನಲ್ಲಿ ಮತ್ತೊಂದು ಅವಕಾಶ ಲಭ್ಯವಾಗಲಿದೆ. 

ಮುಲ್ಲಾನ್‌ಪುರ(ಚಂಡೀಗಢ): 18ನೇ ಆವೃತ್ತಿ ಐಪಿಎಲ್‌ನ ಲೀಗ್ ಹಂತದ ರಣರೋಚಕ ಪೈಪೋಟಿಗೆ ತೆರೆಬಿದ್ದಿದ್ದು, ಗುರುವಾರದಿಂದ ನಾಕೌಟ್ ಸಮರ ಆರಂಭಗೊಳ್ಳಲಿದೆ. ಕ್ವಾಲಿಫೈಯರ್ ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪರಸ್ಪರ ಸೆಣಸಾಡಲಿವೆ.

ಆರ್‌ಸಿಬಿ ಈ ಬಾರಿ ಐಪಿಎಲ್‌ ಲೀಗ್ ಹಂತದ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದಿದ್ದು, 1 ಪಂದ್ಯ ರದ್ದಾಗಿದ್ದರಿಂದ ಒಟ್ಟು 19 ಅಂಕ ಸಂಪಾದಿಸಿ 2ನೇ ಸ್ಥಾನಿಯಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕೂಡಾ ಸಮಾನ ಫಲಿತಾಂಶ, ಅಂಕ ಸಂಪಾದಿಸಿದ್ದರೂ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನಿಯಾಗಿದೆ.

ಗುರುವಾರದ ಪಂದ್ಯ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೇರಲಿದ್ದು, ಸೋಲುವ ತಂಡಕ್ಕೆ ಫೈನಲ್‌ಗೇರಲು ಇನ್ನೊಂದು ಅವಕಾಶ ಇರಲಿದೆ. ಮೇ 30ರಂದು ಮುಲ್ಲಾನ್‌ಪುರದಲ್ಲೇ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಗುಜರಾತ್ ಹಾಗೂ ಮುಂಬೈ ಮುಖಾಮುಖಿ ಯಾಗಲಿವೆ. ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಜೂ.1ರಂದು 2ನೇ ಕ್ವಾಲಿಫೈಯರ್‌ ನಡೆಯಲಿದ್ದು, ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಸೆಣಸಲಿವೆ.

ಆರ್‌ಸಿಬಿಗೆ ಗಾಯದ ಚಿಂತೆ: ಐಪಿಎಲ್ ಪುನಾರಂಭದ ಬಳಿಕ ಆರ್‌ಸಿಬಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಪ್ಲೇ ಆಫ್‌ನಲ್ಲಿ ಇದರ ಪರಿಣಾಮ ತಂಡದ ಮೇಲೆ ಬೀರದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ವೇಗಿ ಜೋಶ್ ಹೇಜಲ್‌ವುಡ್ ಫಿಟ್ ಆಗಿದ್ದು, ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಆದರೆ ಟಿಮ್ ಡೇವಿಡ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಗೈರಾಗುವ ಸಾಧ್ಯತೆ ಹೆಚ್ಚು. ನಾಯಕ ರಜತ್ ಪಾಟೀದಾರ್ ಗಾಯದ ಸಮಸ್ಯೆ ಜೊತೆಗೆ ಲಯದ ಸಮಸ್ಯೆ ಎದುರಿಸುತ್ತಿದ್ದು, ನಿರ್ಣಾಯಕ ಪಂದ್ಯದಲ್ಲಾದರೂ ತಂಡಕ್ಕೆ ದೊಡ್ಡ ಕೊಡುಗೆ ನೀಡಬೇಕಿದೆ. ಉಳಿದಂತೆ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಮಯಾಂಕ್‌ ಅಗರ್‌ವಾಲ್ ತುಂಬು ಆತ್ಮವಿಶ್ವಾಸದಿಂದ ಆಡುತ್ತಿದ್ದು, ತಂಡವನ್ನು ಫೈನಲ್‌ಗೇರಿಸುವ ಪಣ ತೊಟ್ಟಿದ್ದಾರೆ. ಆಲ್ರೌಂಡರ್ ಕೃನಾಲ್ ಪಾಂಡ್ಯ, ವೇಗಿ ಭುವನೇಶ್ವರ್ ಕುಮಾರ್, ಯಶ್ ದಯಾಳ್‌, ಸ್ಪಿನ್ನರ್ ಸುಯಶ್ ಶರ್ಮಾ ತಮ್ಮ ಶ್ರೇಷ್ಠ ಆಟವನ್ನು ಈ ಪಂದ್ಯದಲ್ಲಿ ಪ್ರದರ್ಶಿಸಬೇಕಿದೆ.

ಆತ್ಮವಿಶ್ವಾಸದಲ್ಲಿ ಶ್ರೇಯಸ್ ಪಡೆ: ಕಳೆದ ಬಾರಿ ಕೆಕೆಆರ್‌ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್‌ನ ನಾಕೌಟ್ ತಲುಪಿಸಿದ್ದಾರೆ. ತಂಡ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದು, ತವರಿನಲ್ಲಿ ಆರ್‌ಸಿಬಿಯನ್ನು ಮಣಿಸುವ ಲೆಕ್ಕಾಚಾರದಲ್ಲಿದೆ. ಪ್ರಿಯಾನ್ಸ್ ಆರ್ಯ, ಪ್ರಬ್‌ಸಿಮ್ರನ್, ಜೋಶ್ ಇಂಗ್ಲಿಸ್, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯಿಸ್ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದು, ಬೌಲಿಂಗ್ ನಲ್ಲಿ ಅರ್ಶದೀಪ್, ಹರ್‌ ಪ್ರೀತ್ ಬ್ರಾರ್, ಕನ್ನಡಿಗ ವೈಶಾಖ್, ಜೇಮಿಸನ್, ಹಜ್ಜತುಲ್ಲಾ ಓಮರ್‌ಜೈ ತಂಡಕ್ಕೆ ಬಲ ಒದಗಿಸಲಿದ್ದಾರೆ.

ಆರ್‌ಸಿಬಿಗೆ 4ನೇ, ಕಿಂಗ್ಸ್‌ಗೆ ಎರಡನೇ ಫೈನಲ್ ಕನಸು

ಆರ್‌ಸಿಬಿ ಹಾಗೂ ಪಂಜಾಬ್ ಈವರೆಗೂ ಟ್ರೋಫಿ ಗೆದ್ದಿಲ್ಲ. ಆದರೆ 2 ತಂಡಗಳೂ ಫೈನಲ್‌ಗೇರಿವೆ. ಆರ್ ಸಿಬಿ 2009, 2011 ಹಾಗೂ 2016ರಲ್ಲಿ ಫೈನಲ್ ಗೇರಿತ್ತು. ತಂಡ ಬರೋಬ್ಬರಿ 9 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್ ಪ್ರವೇಶಿಸುವ ಕಾತರದಲ್ಲಿದೆ. ಮತ್ತೊಂದೆಡೆ 2014ರಲ್ಲಿ ಪ್ರಶಸ್ತಿ ಸುತ್ತಿಗೇರಿದ್ದ ಪಂಜಾಬ್ 2ನೇ ಬಾರಿ ಫೈನಲ್ ಆಡುವ ಗುರಿ ಇಟ್ಟುಕೊಂಡಿದೆ.

2011, 2016ರಲ್ಲೂ ಕ್ವಾಲಿಫೈಯರ್-1ರಲ್ಲಿ ಆಡಿತ್ತು ಆರ್‌ಸಿಬಿ ತಂಡ

ತಂಡ ಐಪಿಎಲ್‌ನಲ್ಲಿ 3ನೇ ಬಾರಿ ಕ್ವಾಲಿಫೈಯರ್‌-1ರಲ್ಲಿ ಆಡಲಿದೆ. ಈ ಮೊದಲು ತಂಡ 2011, 2016ರಲ್ಲೂ ಅಗ್ರ-2 ಸ್ಥಾನ ಪಡೆದಿತ್ತು. 2011ರಲ್ಲಿ ಕ್ವಾಲಿಫೈ‌ -1ರಲ್ಲಿ ಸೋತು, ಬಳಿಕ ಎಲಿಮಿನೇಟರ್ ಗೆದ್ದು ಫೈನಲ್‌ಗೇರಿದ್ದ ತಂಡ, 2016ರಲ್ಲಿ ಕ್ವಾಲಿಫೈಯರ್-1ರಲ್ಲಿ ಜಯಗಳಿಸಿ ನೇರವಾಗಿ ಫೈನಲ್ ತಲುಪಿತ್ತು. ಅತ್ತ ಪಂಜಾಬ್ ತಂಡ ಕಳೆದ 11 ವರ್ಷಗಳಲ್ಲೇ ಮೊದಲ ಬಾರಿ ಕ್ವಾಲಿಫೈಯರ್ 1 ಆಡುತ್ತಿದೆ. ತಂಡ 2014ರಲ್ಲಿ ಕ್ವಾಲಿಫೈಯರ್-1ರಲ್ಲಿ ಆಡಿದ್ದು, ಅದರಲ್ಲಿ ಸೋತ ಬಳಿಕ ಎಲಿಮಿನೇಟ‌ ಗೆದ್ದು ಫೈನಲ್ ಪ್ರವೇಶಿಸಿತ್ತು.

ಪಿಚ್ ರಿಪೋರ್ಟ್:

2025ರ ಐಪಿಎಲ್‌ನ 4 ಪಂದ್ಯಗಳಿಗೆ ಮುಲ್ಲಾನ್‌ಪುರ ಆತಿಥ್ಯ ವಹಿಸಿದೆ. ಆರಂಭಿಕ 2 ಪಂದ್ಯಗಳಲ್ಲಿ 3 ಬಾರಿ 200+ ರನ್ ದಾಖಲಾಗಿದ್ದರೆ, ನಂತ ರದ 2 ಪಂದ್ಯಗಳಲ್ಲಿ 2 ಬಾರಿ ತಂಡ ಗಳು 120ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿವೆ. ಹೀಗಾಗಿ ಕ್ವಾಲಿಫೈ ಯರ್ ಪಂದ್ಯದಲ್ಲಿ ಪಿಚ್ ಹೇಗೆ

ವರ್ತಿಸಲಿದೆ ಎಂಬ ಕುತೂಹಲವಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ