IPL 2025 ಕೆ ಎಲ್ ರಾಹುಲ್ ಜತೆ ಈ ಮೂವರು ಕನ್ನಡಿಗರನ್ನು ಕರೆತರಲು ಆರ್‌ಸಿಬಿ ಮಾಸ್ಟರ್ ಪ್ಲಾನ್..!
ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗ ಆಟಗಾರರು ತುಂಬಿ ತುಳುಕುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಟೂರ್ನಿಗೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದೆ. ಹೀಗಿರುವಾಗಲೇ ಎಲ್ಲಾ ಫ್ರಾಂಚೈಸಿಗಳು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಈಗಾಗಲೇ ಭರದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. ಇದೆಲ್ಲದರ ನಡುವೆ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೆಸರಿಗೆ ತಕ್ಕಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗರನ್ನೊಳಗೊಂಡ ತಂಡವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹೌದು, ಐಪಿಎಲ್ ಟೂರ್ನಿಯ ಆರಂಭದಲ್ಲಿ ಆರ್‌ಸಿಬಿ ತಂಡದಲ್ಲಿ ಕನ್ನಡಿಗರದ್ದೇ ದರ್ಬಾರು ಎನಿಸಿಕೊಂಡಿತ್ತು. ಆರ್‌ಸಿಬಿ ತಂಡದಲ್ಲಿ ಅನಿಲ್ ಕುಂಬ್ಳೆ, ವಿನಯ್ ಕುಮಾರ್, ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ, ಎಸ್ ಅರವಿಂದ್ ಮುಂತಾದ ಆಟಗಾರರು ಮಿಂಚಿದ್ದರು. ಆದರೆ ಕ್ರಮೇಣ ಆರ್‌ಸಿಬಿ ತಂಡದಲ್ಲಿ ಕನ್ನಡಿಗರ ಅಂದರೆ ಕರ್ನಾಟಕದ ಆಟಗಾರರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿತ್ತು. ಇತ್ತೀಚೆಗಂತೂ ಆರ್‌ಸಿಬಿ ತಂಡದಲ್ಲಿ ಹೆಸರಿಗಷ್ಟೇ ಒಂದೆರಡು ಆಟಗಾರರನ್ನು ಕರೆದುಕೊಳ್ಳುವುದು ಆ ಬಳಿಕ ಟೂರ್ನಿಯುದ್ದಕ್ಕೂ ಅವರಿಗೆ ಅವಕಾಶ ನೀಡದೇ ಬೆಂಚ್ ಕಾಯಿಸುವಂತೆ ಮಾಡುವುದು ಸರ್ವೇ ಸಾಮಾನ್ಯ ಎನಿಸಿದೆ. ಆರ್‌ಸಿಬಿ ತಂಡದಲ್ಲಿ ರಾಜ್ಯದ ಆಟಗಾರರಿಗೆ ಅವಕಾಶ ನೀಡಬೇಕು ಎನ್ನುವ ಆಗ್ರಹ ಜೋರಾಗಿ ಕೇಳಿಬರುತ್ತಿದೆ. ಇದರ ಜತೆಗೆ ಆರ್‌ಸಿಬಿ ಫ್ರಾಂಚೈಸಿಯು ಕನ್ನಡಿಗರನ್ನು ಹಾಗೂ ಕನ್ನಡವನ್ನು ಕಡೆಗಣಿಸುತ್ತಿದೆ ಎನ್ನುವ ಟೀಕೆ ಸೋಷಿಯಲ್ ಮೀಡಿಯಾಗಳಲ್ಲೂ ಆಗಾಗ ಚರ್ಚೆ ಆಗುತ್ತಲೇ ಬಂದಿದೆ.
IPL 2025 ಟೂರ್ನಿಗೂ ಮುನ್ನ ಲಖನೌಗೆ ಗುಡ್‌ಬೈ ಹೇಳ್ತಾರಾ ಕನ್ನಡಿಗ ಕೆ ಎಲ್ ರಾಹುಲ್..? ಈ ತಂಡ ಸೇರೋದು ಪಕ್ಕಾ..?
ಇದೀಗ ಇದೆಲ್ಲದರ ನಡುವೆ ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ಕರೆತಂದು ಆರ್‌ಸಿಬಿ ತಂಡಕ್ಕೆ ನಾಯಕ ಪಟ್ಟ ಕಟ್ಟಲಾಗುತ್ತದೆ ಎನ್ನುವ ಚರ್ಚೆ ಜೋರಾಗಿ ಕೇಳಿ ಬರುತ್ತಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್, ಈಗಾಗಲೇ ಆ ತಂಡದಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಕೆ ಎಲ್ ರಾಹುಲ್ ಕೂಡಾ ತವರಿನ ತಂಡದಲ್ಲಿ ಅಡುವ ಇಂಗಿತವನ್ನು ಈ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್‌ಗೆ ಆರ್‌ಸಿಬಿ ತಂಡದ ನಾಯಕನಾಗುವ ಅದೃಷ್ಟ ಒಲಿದು ಬಂದರೂ ಅಚ್ಚರಿಯೇನಿಲ್ಲ..!
ಕನ್ನಡಿಗರಿಗೆ ಅವಕಾಶ:
ಎಲ್ಲವೂ ಅಂದುಕೊಂಡಂತೆ ಆಗಿ ಕೆ ಎಲ್ ರಾಹುಲ್, ಆರ್‌ಸಿಬಿ ತಂಡದ ನಾಯಕನಾಗಿ ನೇಮಕವಾದರೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮೂವರು ಕನ್ನಡಿಗರಿಗೂ ಅವಕಾಶ ಸಿಗುವ ಸಾಧ್ಯತೆಯಿದೆ.
IPL 2025 ಹರಾಜಿಗೂ ಮುನ್ನ 4 ಅಲ್ಲ ಈ ಮೂವರನ್ನು ರೀಟೈನ್ ಮಾಡಲು ತೀರ್ಮಾನಿಸಿದ RCB.! ಈತನಿಗೆ RTM ಬಳಸಲು ನಿರ್ಧಾರ?
1. ದೇವದತ್ ಪಡಿಕ್ಕಲ್:
ರಾಜ್ಯ ತಂಡದ ಆಟಗಾರರ ಜತೆ ರಾಹುಲ್‌ಗೆ ಉತ್ತಮ ಒಡನಾಟವಿದೆ. ಹೀಗಾಗಿ ಎಡಗೈ ಅಗ್ರಶ್ರೇಯಾಂಕಿತ ಬ್ಯಾಟರ್ ಆಗಿರುವ ದೇವದತ್ ಪಡಿಕ್ಕಲ್‌ಗೆ ರಾಹುಲ್ ಗಾಳ ಹಾಕುವ ಸಾಧ್ಯತೆಯಿದೆ. ರಾಹುಲ್ ಹಾಗೂ ಪಡಿಕ್ಕಲ್ ಈ ಹಿಂದೆ ರಾಜ್ಯ ತಂಡದ ಪರ ಇನಿಂಗ್ಸ್ ಆರಂಭಿಸಿ ಉತ್ತಮ ಜತೆಯಾಟವಾಡಿದ ನಿದರ್ಶನವಿದೆ. ಇನ್ನು ರಾಹುಲ್ ಲಖನೌ ತಂಡದ ನಾಯಕರಾಗಿದ್ದಾಗಲೇ ಕಳೆದ ಬಾರಿ ಪಡಿಕ್ಕಲ್ ಅವರನ್ನು ರಾಜಸ್ಥಾನ ರಾಯಲ್ಸ್‌ನಿಂದ ಲಖನೌ ತಂಡಕ್ಕೆ ಕರೆತಂದಿದ್ದರು. ಆದರೆ ಪಡಿಕ್ಕಲ್‌ಗೆ ಸಾಕಷ್ಟು ಅವಕಾಶ ನೀಡಿದರೂ ಸತತ ವೈಪಲ್ಯ ಅನುಭವಿಸಿದ್ದರು. ಆದರೆ ಪಡಿಕ್ಕಲ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ಆರ್‌ಸಿಬಿ ಕೂಡಿಕೊಳ್ಳುವ ಸಾಧ್ಯತೆಯಿದೆ.
2. ಮಯಾಂಕ್ ಅಗರ್‌ವಾಲ್:
ಮತ್ತೋರ್ವ ಅಗ್ರಶ್ರೇಯಾಂಕಿತ ಬ್ಯಾಟರ್ ಮಯಾಂಕ್ ಅಗರ್‌ವಾಲ್ ಕೂಡಾ ಆರ್‌ಸಿಬಿ ತೆಕ್ಕೆಗೆ ಜಾರುವ ಸಾಧ್ಯತೆಯಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅಗರ್‌ವಾಲ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರಾದರೂ, ಟ್ರ್ಯಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಅಬ್ಬರದ ನಡುವೆ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಹೀಗಾಗಿ ಮೆಗಾ ಹರಾಜಿಗೂ ಮುನ್ನ ಮಯಾಂಕ್ ಅವರನ್ನು ಆರೆಂಜ್ ಆರ್ಮಿ ಕೈಬಿಡಲಿದೆ. ಹೀಗಾದಲ್ಲಿ ಮಯಾಂಕ್ ಅವರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಸಾಧ್ಯತೆಯಿದೆ.
3. ಅಭಿನವ್ ಮನೋಹರ್:
ದಿನೇಶ್ ಕಾರ್ತಿಕ್ ನಿವೃತ್ತಿಯಿಂದಾಗಿ ಆರ್‌ಸಿಬಿ ತಂಡವು ದೇಶಿ ಮ್ಯಾಚ್ ಫಿನಿಶರ್ ಎದುರು ನೋಡುತ್ತಿದೆ. ಅದಕ್ಕೆ ಕನ್ನಡಿಗ ಅಭಿನವ್ ಮನೋಹರ್ ಉತ್ತಮ ಆಯ್ಕೆಯಾಗಬಲ್ಲರು. ಸದ್ಯ ಅಭಿನವ್ ಮನೋಹರ್ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಪರ ಮನೋಹರ್ ಏಕಾಂಗಿಯಾಗಿ ವಿಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಹೀಗಾಗಿ ಅಭಿನವ್ ಮನೋಹರ್ ಅವರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಂಡರೂ ಅಚ್ಚರಿಯೇನಿಲ್ಲ
ಇನ್ನು ಈ ಮೂವರು ಆಟಗಾರರಲ್ಲೇ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್ ಮನೀಶ್ ಪಾಂಡೆ, ಸದ್ಯ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಆಲ್ರೌಂಡರ್ ಮನೋಜ್ ಭಾಂಡಗೆ ಹಾಗೂ ಎಲ್ ಆರ್ ಚೇತನ್ ಅವರು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದರೂ ಅಚ್ಚರಿಯೇನಿಲ್ಲ.