ಐಪಿಎಲ್ ಪ್ಲೇ-ಆಫ್‌ಗೆ ಆರ್‌ಸಿಬಿ ಈಗಾಗಲೇ ಅರ್ಹತೆ ಪಡೆದಿದೆ. ಅಗ್ರ-೨ ಸ್ಥಾನ ಗಿಟ್ಟಿಸಲು ಶುಕ್ರವಾರದ ಹೈದರಾಬಾದ್ ವಿರುದ್ಧದ ಪಂದ್ಯ ಗೆಲ್ಲಲೇಬೇಕು. ಕೊಹ್ಲಿ ಲಯ ಕಂಡುಕೊಳ್ಳುವ ನಿರೀಕ್ಷೆಯಿದೆ. ಹೇಜಲ್‌ವುಡ್ ಇಲ್ಲದಿದ್ದರೂ, ರಜತ್ ಮತ್ತು ಸಾಲ್ಟ್ ಲಭ್ಯರಿದ್ದಾರೆ. ಹೈದರಾಬಾದ್‌ಗೆ ಔಪಚಾರಿಕ ಪಂದ್ಯವಾದರೂ ಗೆಲುವಿನ ಹಂಬಲದಲ್ಲಿದೆ.

ಲಖನೌ: ಆರ್‌ಸಿಬಿ ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ ತಂಡದ ಗುರಿ ಇರುವುದು ಅಂಕಪಟ್ಟಿಯಲ್ಲಿ ಅಗ್ರ -2 ಸ್ಥಾನದ ಮೇಲೆ.ಇದನ್ನು ಸಾಧಿಸಬೇಕಿದ್ದರೆ ಶುಕ್ರವಾರ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಪಂದ್ಯದಲ್ಲಿ ಆರ್ ಸಿಬಿಗೆ ಗೆಲುವು ಅಗತ್ಯ.

ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ 12 ಪಂದ್ಯಗಳನ್ನಾಡಿದ್ದು, 8ರಲ್ಲಿ ಗೆದ್ದು, 1 ಪಂದ್ಯ ರದ್ದಾಗಿದ್ದರಿಂದ 17 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಅಗ್ರ-2 ಸ್ಥಾನ ಪಡೆದ ತಂಡಗಳು ಳು ಕ್ವಾಲಿಫೈಯರ್‌-1ರಲ್ಲಿ ಆಡಲಿರುವುದರಿಂದ ಆರ್‌ಸಿಬಿಗೆ ಅದರ ಮೇಲೆ ಕಣ್ಣಿದೆ. ಆದರೆ ಇದಕ್ಕೆ ಕೊನೆ 2 ಪಂದ್ಯದಲ್ಲೂ ಗೆಲ್ಲಲೇಬೇಕು. ಜೊತೆಗೆ, ತಂಡದಲ್ಲಿರುವ ಕೆಲ ಸಮಸ್ಯೆಗಳಿಗೆ ಪ್ಲೇ-ಆಫ್‌ಗೂ ಮುನ್ನ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. ವಿರಾಟ್ ಕೊಹ್ಲಿ ತಮ್ಮ ಅಭೂತಪೂರ್ವ ಲಯ ಮುಂದುವರಿಸಲು ಕಾಯುತ್ತಿದ್ದಾರೆ. ಬಹುತೇಕ ವಿದೇಶಿ ಆಟಗಾರರು ಈ ಪಂದ್ಯಕ್ಕೆ ಲಭ್ಯವಿದ್ದಾರೆ. ಫಿಲ್ ಸಾಲ್ಟ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಆಯ್ಕೆಗೆ ಲಭ್ಯವಿದ್ದು, ಅವರಿಂದ ತಂಡ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್, ಸುಯಶ್ ಶರ್ಮಾ, ಯಶ್ ದಯಾಳ್ ತಂಡದ ಆಧಾರಸ್ತಂಭ. ಕೃನಾಲ್ ಪಾಂಡ್ಯ ಆಲ್ರೌಂಡ್ ಆಟ ತಂಡದ ಸೋಲು-ಗೆಲುವು ನಿರ್ಧರಿಸುವಂತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಾನಾಡಿದ ತವರಿನಾಚೆಯ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ತವರಿನಾಚೆಗಿನ ತನ್ನ ಗೆಲುವಿನ ಓಟ ಮುಂದುವರೆಸಿಕೊಂಡು ಹೋಗಲು ರಜತ್ ಪಾಟೀದಾರ್ ಪಡೆ ಎದುರು ನೋಡುತ್ತಿದೆ. 

ಔಪಚಾರಿಕ ಪಂದ್ಯ: ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಗೆ ಇದು ಔಪಚಾರಿಕ ಪಂದ್ಯ. 12 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದಿರುವ ತಂಡ, ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ. ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಬ್ಯಾಟರ್ ಟ್ರ್ಯಾವಿಸ್ ಹೆಡ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಇದೀಗ ಆರ್‌ಸಿಬಿ ಎದುರಿನ ಪಂದ್ಯಕ್ಕೆ ಅವರು ಫಿಟ್ ಆಗಿರಲಿದ್ದಾರೆ ಎನ್ನುವುದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. 

ಹೇಜಲ್‌ವುಡ್ ಅಲಭ್ಯ: ರಜತ್, ಸಾಲ್ಟ್ ಫಿಟ್
ಗಾಯಗೊಂಡಿರುವ ಆರ್‌ಸಿಬಿ ವೇಗಿ ಜೋಶ್ ಹೇಜಲ್‌ವುಡ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಶುಕ್ರವಾರದ ಪಂದ್ಯಕ್ಕೆ ಗೈರಾಗಲಿದ್ದಾರೆ. ಆದರೆ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ರಜತ್ ಪಾಟೀದಾರ್ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಫಿಲ್ ಸಾಲ್ಟ್ ಈ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿದ್ದಾರೆ ಎಂದು ಮುಖ್ಯ ಕೋಚ್ ಆ್ಯಂಡಿ ಫ್ಲವರ್ ತಿಳಿಸಿದ್ದಾರೆ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:

ಸನ್‌ರೈಸರ್ಸ್ ಹೈದರಾಬಾದ್: ಅಥರ್ವ ಟೈಡೆ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಕಮಿಂಡು ಮೆಂಡಿಸ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್‌(ನಾಯಕ), ಹರ್ಷಲ್ ಪಟೇಲ್, ಹರ್ಷ್ ದುಬೆ, ಝೀಸನ್ ಅನ್ಸಾರಿ, ಇಶಾನ್ ಮಲಿಂಗಾ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜೆಕೊಬ್ ಬೆಥೆಲ್, ರಜತ್ ಪಾಟೀದಾರ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಸಿಕ್ ಸಲಂ, ಯಶ್ ದಯಾಳ್, ಸುಯಾಶ್ ಶರ್ಮಾ. 

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.