ಐಪಿಎಲ್‌ನಲ್ಲಿ ಗುಜರಾತ್, ಆರ್‌ಸಿಬಿ, ಪಂಜಾಬ್ ಮತ್ತು ಮುಂಬೈ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿವೆ. ಏಳು ಪಂದ್ಯಗಳು ಬಾಕಿ ಇರುವಾಗಲೇ ನಾಲ್ಕು ತಂಡಗಳು ಅರ್ಹತೆ ಪಡೆದಿದ್ದು ಇದೇ ಮೊದಲು. ಈಗ ಅಗ್ರ ಎರಡು ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆಯಲಿದೆ. ಮುಂಬೈ ಡೆಲ್ಲಿಯನ್ನು ಸೋಲಿಸಿ ಪ್ಲೇ-ಆಫ್ ಪ್ರವೇಶಿಸಿದೆ. ಡೆಲ್ಲಿ ಟೂರ್ನಿಯಿಂದ ಹೊರಬಿದ್ದಿದೆ.
ನವದೆಹಲಿ: ಕಳೆದ ಹಲವು ವಾರಗಳಿಂದ ಕ್ರಿಕೆಟಿಗರು, ಅಭಿಮಾನಿಗಳಲ್ಲಿದ್ದ ಐಪಿಎಲ್ ಪ್ಲೇ-ಆಫ್ ಸ್ಥಾನದ ಕುತೂಹಲಕ್ಕೆ ತೆರೆಬಿದ್ದಿದೆ. ಈಗಾಗಲೇ ಗುಜರಾತ್, ಆರ್‌ಸಿಬಿ, ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ-4 ಸ್ಥಾನ ಖಚಿತಪಡಿಸಿಕೊಂಡಿವೆ. ಇನ್ನು ಮುಂದೆ ಅಗ್ರ-2 ಸ್ಥಾನಕ್ಕೆ ಈ ತಂಡಗಳು ತೀವ್ರ ಪೈಪೋಟಿ ನಡೆಸಲಿವೆ.
ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಿಯಾದ ತಂಡಗಳು ಕ್ವಾಲಿಫೈಯರ್-1ರಲ್ಲಿ ಆಡಲಿದ್ದು, ಅದರಲ್ಲಿ ಸೋತರೂ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಸಿಗಲಿದೆ. 3 ಮತ್ತು 4ನೇ ಸ್ಥಾನಿಯಾದ ತಂಡಗಳು ಎಲಿಮಿನೇಟರ್ ಆಡಲಿದ್ದು, ಗೆದ್ದ ತಂಡ ಕ್ವಾಲಿಫೈಯರ್-2ಗೆ ಪ್ರವೇಶಿಸಿದರೆ, ಸೋತ ತಂಡ ಹೊರಬೀಳಲಿದೆ. ಹೀಗಾಗಿ ಪ್ರತಿ ತಂಡಕ್ಕೂ ಅಗ್ರ-2 ಸ್ಥಾನ ಮಹತ್ವದ್ದು. ಸದ್ಯ ಅಗ್ರ-4ರಲ್ಲಿರುವ ಎಲ್ಲಾ ತಂಡಗಳಿಗೂ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿದೆ. ಹೀಗಾಗಿ ಲೀಗ್ ಹಂತದ ಕೊನೆ ಪಂದ್ಯದವರೆಗೂ ಭಾರೀ ಪೈಪೋಟಿ, ಕುತೂಹಲ ನಿರೀಕ್ಷೆಯಿದೆ.
ಲೀಗ್‌ನ 7 ಪಂದ್ಯ ಬಾಕಿ ಇದ್ರೂ ಪ್ಲೇ-ಆಫ್ ರೇಸ್ ಅಂತ್ಯ ಇದೇ ಮೊದಲು
ನವದೆಹಲಿ: ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುವುದರೊಂದಿಗೆ 18ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್ ರೇಸ್ ಕೊನೆಗೊಂಡಿದೆ. ಲೀಗ್ ಹಂತದಲ್ಲಿ 7 ಪಂದ್ಯ ಬಾಕಿ ಇರುವಾಗಲೇ ಅಗ್ರ-4ರಲ್ಲಿ ತಂಡಗಳು ಸ್ಥಾನ ಖಚಿತಪಡಿಸಿಕೊಂಡಿದ್ದು ಇದೇ ಮೊದಲು.
ಈ ಮೊದಲು 2011ರಲ್ಲಿ ಲೀಗ್ ಹಂತದಲ್ಲಿ 3 ಪಂದ್ಯ ಬಾಕಿಯಿದ್ದಾಗ ಪ್ಲೇ-ಆಫ್ ರೇಸ್‌ನ 4 ತಂಡಗಳು ಅಂತಿಮಗೊಂಡಿದ್ದವು. ಉಳಿದಂತೆ ಯಾವ ಆವೃತ್ತಿಯಲ್ಲೂ 2ಕ್ಕಿಂತ ಹೆಚ್ಚು ಪಂದ್ಯ ಬಾಕಿ ಇದ್ದಾಗಲೇ ಪ್ಲೇ-ಆಫ್ ರೇಸ್ ಕೊನೆಗೊಂಡಿರಲಿಲ್ಲ. 2008, 2024ರಲ್ಲಿ ತಲಾ 2 ಪಂದ್ಯ, 2012, 2017, 2021, 2022ರಲ್ಲಿ ತಲಾ 1 ಪಂದ್ಯ ಬಾಕಿ ಇದ್ದಾಗಲಷ್ಟೇ ಪ್ಲೇ-ಆಫ್‌ನ 4 ಸ್ಥಾನಗಳು ಭರ್ತಿಯಾಗಿದ್ದವು. ಉಳಿದಂತೆ 2009, 2010, 2013, 2014, 2015, 2016, 2018, 2019, 2020 ಹಾಗೂ 2023ರಲ್ಲಿ ಲೀಗ್ ಹಂತದ ಕೊನೆ ಪಂದ್ಯದವರೆಗೂ ನಾಕೌಟ್ ರೇಸ್‌ನ ಕುತೂಹಲ ಉಳಿದುಕೊಂಡಿದ್ದವು.
ಪ್ಲೇ-ಆಫ್‌ಗೆ ನುಗ್ಗಿದ ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ರೇಸ್‌ನಿಂದಲೇ ಔಟ್
ಮುಂಬೈ: ಈ ಬಾರಿ ಐಪಿಎಲ್‌ನ ಆರಂಭಿಕ 5 ಪಂದ್ಯಗಳ ಪೈಕಿ 4ರಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್, ಬಳಿಕ ಮಾಡಿದ್ದು ಮ್ಯಾಜಿಕ್. ಒಂದು ಹಂತದಲ್ಲಿ ಅಂಕಪಟ್ಟಿಯಲ್ಲಿ ಕೊನೆಯಲ್ಲಿದ್ದ 5 ಬಾರಿ ಚಾಂಪಿಯನ್ ಮುಂಬೈ, ಈಗ ಟೂರ್ನಿಯ 4ನೇ ತಂಡವಾಗಿ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ.
ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ 59 ರನ್ ಭರ್ಜರಿ ಜಯಗಳಿಸಿತು. ಪ್ಲೇ-ಆಫ್ ದೃಷ್ಟಿಯಿಂದ 2 ತಂಡಗಳಿಗೂ ಗೆಲುವು ಅನಿವಾರ್ಯವಾಗಿತ್ತು. ಆದರೆ ತೀರಾ ಕಳಪೆ ಪ್ರದರ್ಶನ ನೀಡಿದ ಡೆಲ್ಲಿ, ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಗುಳಿಯಿತು. ಮುಂಬೈ 13 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಸಂಪಾದಿಸಿದ್ದು, ಡೆಲ್ಲಿ 13 ಪಂದ್ಯದಲ್ಲಿ 6ನೇ ಸೋಲು ಕಂಡಿದ್ದು, 13 ಅಂಕದೊಂದಿಗೆ 5ನೇ ಸ್ಥಾನದಲ್ಲೇ ಬಾಕಿಯಾಯಿತು.
ಟಾಸ್ ಸೋತ ಮುಂಬೈ, ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು. ಸಾಮಾನ್ಯವಾಗಿ ದೊಡ್ಡ ಸ್ಕೋರ್ ದಾಖಲಾಗುವ ವಾಂಖೆಡೆ ಪಿಚ್‌ನಲ್ಲಿ ಈ ಬಾರಿ ಬ್ಯಾಟರ್‌ಗಳು ಪರದಾಡಿದರು. ಆದರೆ ಸೂರ್ಯಕುಮಾರ್ ಅಬ್ಬರದಿಂದಾಗಿ ಮುಂಬೈ 5 ವಿಕೆಟ್‌ಗೆ 180 ರನ್ ಕಲೆಹಾಕಿತು. ಮುಂಬೈನ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ 18.2 ಓವರ್‌ನಲ್ಲಿ 121 ರನ್‌ಗೆ ಆಲೌಟಾಯಿತು.