ಐಪಿಎಲ್ ಫೈನಲ್‌ನಲ್ಲಿ RCB ಮತ್ತು PBKS ಮುಖಾಮುಖಿ. ಟಾಸ್ ಗೆದ್ದ PBKS ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ RCB ಮೊದಲು ಬ್ಯಾಟಿಂಗ್ ಮಾಡಲಿದೆ. ಚೇಸಿಂಗ್‌ನಲ್ಲಿ 3 ಬಾರಿ ಫೈನಲ್ ಸೋತಿರುವ RCBಗೆ ಈ ಬಾರಿ ಗೆಲುವು ಸಿಗುತ್ತಾ?
ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಯಾವುದೇ ಅಳುಕಿಲ್ಲದೇ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲಿಳಿಯಲಿದೆ.
ಮೇಲ್ನೋಟಕ್ಕೆ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆಯಿದೆ. ಆದರೆ ಇತಿಹಾಸವನ್ನು ಗಮನಿಸಿದ್ರೆ ಟಾಸ್ ಸೋತಿದ್ದೇ ಆರ್‌ಸಿಬಿಗೆ ಲಾಭವಾಗುವ ಸಾಧ್ಯತೆಯಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದಕ್ಕೂ ಮೊದಲು ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿತ್ತು. ಮೂರು ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೇಸಿಂಗ್ ಮಾಡುವಾಗಲೇ ಎಡವಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಒಂದು ಸಲ ಆರ್‌ಸಿಬಿ ಆಡಿದ ಐಪಿಎಲ್ ಫೈನಲ್ ಇತಿಹಾಸವನ್ನು ಮೆಲುಕು ಹಾಕೋದಾದ್ರೆ,
2009ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಡೆಕ್ಕನ್ ಚಾರ್ಜರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ್ದ ಡೆಕ್ಕನ್ ಚಾರ್ಜಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿತ್ತು. ಸಾಧಾರಣ ಗುರಿ ಬೆನ್ನತ್ತಿದ ಅನಿಲ್ ಕುಂಬ್ಳೆ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಅಂತಿಮವಾಗಿ ಆರ್‌ಸಿಬಿ 6 ರನ್ ರೋಚಕ ಸೋಲು ಅನುಭವಿಸಿತ್ತು.
ಇನ್ನು ಇದಾದ ಬಳಿಕ 2011ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಮತ್ತೊಮ್ಮೆ ಫೈನಲ್ ಪ್ರವೇಶಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ಮುರುಳಿ ವಿಜಯ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಡೇನಿಯಲ್ ವೆಟ್ಟೋರಿ ನೇತೃತ್ವದ ಆರ್‌ಸಿಬಿ ತಂಡವು 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ ಎದುರು ಸಿಎಸ್‌ಕೆ 58 ರನ್ ಅಂತರದ ಗೆಲುವು ದಾಖಲಿಸಿತ್ತು.
2016ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಆಗ ಮೊದಲು ಬ್ಯಾಟ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೇವಿಡ್ ವಾರ್ನರ್ ಅರ್ಧಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತ್ತು. ಸವಾಲಿನ ಗುರಿ ಬೆನ್ನತ್ತಿದ ಆರ್‌ಸಿಬಿ ಉತ್ತಮ ಆರಂಭ ಪಡೆಯಿತಾದರೂ, ಆ ಬಳಿಕ ವಿಕೆಟ್ ಕಳೆದುಕೊಂಡು ಕೇವಲ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 8 ರನ್ ರೋಚಕ ಸೋಲು ಅನುಭವಿಸಿತ್ತು.
ಈಗ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಆರ್‌ಸಿಬಿ ಯಾವುದೇ ಚೇಸಿಂಗ್ ಒತ್ತಡವಿಲ್ಲದೇ ರನ್ ಗಳಿಸಬಹುದು. ಆರ್‌ಸಿಬಿ ತಂಡವು ಈ ಬಾರಿ ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಹೊಂದಿದೆ. ಒಂದು ವೇಳೆ ಆರ್‌ಸಿಬಿ 200+ ರನ್ ಬಾರಿಸಿದರೆ, ಆ ಸ್ಕೋರ್ ರಕ್ಷಿಸಿಕೊಳ್ಳಬಲ್ಲ ಬೌಲಿಂಗ್ ಲೈನ್‌ಅಪ್ ಬೆಂಗಳೂರು ತಂಡದ ಬಳಿ ಇದೆ. ಹೀಗಾಗಿ ಆರ್‌ಸಿಬಿ ತಂಡವು ಈ ಸಲ ಮೊದಲು ಬ್ಯಾಟ್ ಮಾಡುತ್ತಿರುವುದು ಆರ್‌ಸಿಬಿಯ ಲಕ್ ಬದಲಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡಾ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಟಾಸ್ ಸೋತರೂ ತೊಂದರೆಯೇನಿಲ್ಲ, ಒಳ್ಳೆಯ ಮೊತ್ತ ಕಲೆಹಾಕಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.