2025ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. 9 ವರ್ಷಗಳ ಬಳಿಕ ಆರ್‌ಸಿಬಿ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪಂಜಾಬ್ ತಂಡ 2ನೇ ಬಾರಿಗೆ ಫೈನಲ್ ಆಡಲಿದೆ.

ಅಹಮದಾಬಾದ್: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳ ಪೈಕಿ ಯಾರೇ ಗೆದ್ದರೂ ಇಂದು ಇತಿಹಾಸ ನಿರ್ಮಾಣವಾಗಲಿದ್ದು, 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ಚಾಂಪಿಯನ್ ಉದಯವಾಗಲಿದೆ.

ಉಭಯ ತಂಡಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯಕ್ಕೂ ಕಣಕ್ಕಿಳಿದಿದೆ. ಫೈನಲ್ ಪಂದ್ಯಕ್ಕೆ ಮ್ಯಾಚ್ ಫಿನಿಶರ್ ಟಿಮ್ ಡೇವಿಡ್ ತಂಡ ಕೂಡಿಕೊಳ್ಳಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಇಂಗ್ಲೆಂಡ್ ಅನುಭವಿ ಬ್ಯಾಟಿಂಗ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರೋಚಕ ಪೈಪೋಟಿ: ಟೂರ್ನಿಯ ಪ್ರದರ್ಶನ ಗಮನಿಸಿದರೆ ಎರಡೂ ತಂಡಗಳು ಬಲಿಷ್ಠ. ಆದರೆ ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತವಾಗಿ ಆಡುತ್ತಿರುವುದು ಆರ್‌ಸಿಬಿಯ ಪ್ಲಸ್ ಪಾಯಿಂಟ್ ಆಗಿದ್ದರೆ, ಪಂಜಾಬ್ ಸಾಮರ್ಥ್ಯ ಬಲಿಷ್ಠ ಬ್ಯಾಟಿಂಗ್. ಹೀಗಾಗಿ ಫೈನಲ್‌ನಲ್ಲೂ ರಣರೋಚಕ ಪೈಪೋಟಿ ನಿರೀಕ್ಷಿಸಬಹುದು. ಆರ್‌ಸಿಬಿ ಎಲ್ಲಾ ವರ್ಷ ಕೆಲವೇ ಆಟಗಾರರನ್ನು ನೆಚ್ಚಿಕೊಂಡು ಆಡುತ್ತಿತ್ತು. ಆದರೆ ಈ ಬಾರಿ ಪ್ರತಿಯೋರ್ವ ಆಟಗಾರರೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ(614 ರನ್) ಅಭೂತಪೂರ್ವ ಆಟವನ್ನು ಫೈನಲ್‌ನಲ್ಲಿ ಪ್ರದರ್ಶಿಸಬೇಕಿದ್ದು, ಫಿಲ್ ಸಾಲ್ಟ್ (387) ಅಬ್ಬರದ ಆಟ ತಂಡಕ್ಕೆ ಅತ್ಯಗತ್ಯ. ಮಯಾಂಕ್ ಅಗರ್‌ವಾಲ್, ಜಿತೇಶ್ ಶರ್ಮಾ ನಿರ್ಣಾಯಕ ಘಟ್ಟದಲ್ಲಿ ಸ್ಫೋಟಕ ಆಟದ ಮೂಲಕ ಗಮನಸೆಳೆದಿದ್ದು, ಫೈನಲ್ ನಲ್ಲೂ ಅಬ್ಬರಿಸುವ ಕಾತರದಲ್ಲಿದ್ದಾರೆ. ಶೆಫರ್ಡ್, ಕೃನಾಲ್ ಪಾಂಡ್ಯ ಆಲ್ರೌಂಡ್ ಆಟ ತಂಡದ ಗೆಲುವಿನಲ್ಲಿ ನಿರ್ಣಾಯಕ.

ಬೌಲಿಂಗ್ ಬಲ: ಆರ್‌ಸಿಬಿಯ ಈ ಬಾರಿ ಯಶಸ್ಸಿಗೆ ಕಾರಣ ಬಲಿಷ್ಠ ಬೌಲಿಂಗ್ ಪಡೆ, ಜೋಶ್ ಹೇಜಲ್‌ವುಡ್ (21 ವಿಕೆಟ್) ಎದುರಾಳಿಗಳ ನಿದ್ದೆಗೆಡಿಸಿದ್ದು, ಭುವನೇಶ್ವ‌ ಕುಮಾರ್ (15), ಪಾಂಡ್ಯ (15), ಯಶ್ ದಯಾಳ್ (12) ಹಾಗೂ ಸುಯಶ್ ಶರ್ಮಾ(8) ಸಂಘಟಿತ ದಾಳಿ ನಡೆಸುತ್ತಿದ್ದಾರೆ.

9 ವರ್ಷ ಬಳಿಕ ಫೈನಲ್ ಆಡುತ್ತಿರುವ ಆರ್‌ಸಿಬಿ

ಆರ್‌ಸಿಬಿ ತಂಡ 4ನೇ ಬಾರಿ ಫೈನಲ್‌ನಲ್ಲಿ ಆಡಲಿದೆ. ಈ ಮೊದಲು 2009, 2011 ಹಾಗೂ 2016ರಲ್ಲಿ ಫೈನಲ್ ಗೇರಿದ್ದರೂ ಸೋತಿದ್ದ ತಂಡ, 9 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿದೆ. ಮತ್ತೊಂದೆಡೆ ಪಂಜಾಬ್ 2014ರಲ್ಲಿ ಮೊದಲ ಬಾರಿ ಫೈನಲ್‌ಗೇರಿತ್ತು. 2ನೇ ಪ್ರಯತ್ನದಲ್ಲಿ ತಂಡ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.

ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಆರ್‌ಸಿಬಿ ತಂಡವು 8 ವಿಕೆಟ್ ಅಂತರದ ಸುಲಭ ಗೆಲುವು ಸಾಧಿಸಿತ್ತು. ಇನ್ನು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಉಭಯ ತಂಡಗಳ ಆಟಗಾರರ ಪಟ್ಟಿ:

ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್‌ವಾಲ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ರೊಮ್ಯಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್,

ಯಶ್ ದಯಾಳ್‌, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ.

ಪಂಜಾಬ್ ತಂಡ: ಪ್ರಿಯಾನ್ಸ್ ಆರ್ಯಾ, ಪ್ರಭ್‌ಸಿಮ್ರನ್ ಸಿಂಗ್, ಜೋಶ್ ಇಂಗ್ಲಿಸ್, ಶ್ರೇಯಸ್‌ ಅಯ್ಯರ್ (ನಾಯಕ), ನೇಹಲ್ ವಧೇರಾ, ಮಾರ್ಕಸ್ ಸ್ಟೋಯಿಸ್, ಶಶಾಂಕ್ ಸಿಂಗ್, ಅಜ್ಜತುಲ್ಲಾ ಓಮರ್‌ಝೈ, ಕೈಲ್ ಜೇಮಿಸನ್, ವೈಶಾಖ್ ವಿಜಯ್‌ಕುಮಾರ್, ಅರ್ಶ್‌ದೀಪ್ ಸಿಂಗ್, ಯುಜುವೇಂದ್ರ ಚಹಲ್,

ಪಂದ್ಯ ಆರಂಭ: ರಾತ್ರಿ 7.30 ಹಾಟ್‌ಸ್ಟಾರ್, ಸ್ಟಾರ್ ಸ್ಪೋರ್ಟ್ಸ್