ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಈಗ ಕೊಹ್ಲಿ ತವರಿನಲ್ಲಿ ಸೆಣಸಲಿದೆ. ರಾಹುಲ್ ಮತ್ತು ಕೊಹ್ಲಿ ನಡುವಿನ ಪೈಪೋಟಿ ಮತ್ತು ಹೇಜಲ್‌ವುಡ್ vs ಸ್ಟಾರ್ಕ್ ವೇಗದ ಜಿದ್ದಾಜಿದ್ದಿ ಈ ಪಂದ್ಯದ ಪ್ರಮುಖ ಆಕರ್ಷಣೆ.

ನವದೆಹಲಿ: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ಅಮೋಘ ಆಟ, ವಿಶಿಷ್ಟ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ಆಘಾತಕ್ಕೆ ಒಳಗಾಗಿತ್ತು. ತನ್ನ ತವರಿನಲ್ಲೇ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಆರ್‌ಸಿಬಿ, ಭಾನುವಾರ ವಿರಾಟ್ ಕೊಹ್ಲಿಯ ತವರಿನಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. 

ಉಭಯ ತಂಡಗಳ ಜೊತೆ ಕೆಲ ಆಟಗಾರರ ನಡುವೆಯೂ ಪ್ರಬಲ ಪೈಪೋಟಿ ಕಂಡುಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಪಂದ್ಯ ಹೆಚ್ಚಿನ ಮಹತ್ವ ಸೃಷ್ಟಿಸಿದೆ. ಸದ್ಯ ಎರಡೂ ತಂಡಗಳು ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಡೆಲ್ಲಿ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದರೆ, ಆರ್‌ಸಿಬಿ 9ರ ಪೈಕಿ 6 ಗೆಲುವು ತನ್ನದಾಗಿಸಿಕೊಂಡಿದೆ. ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗಿಸಲಿದೆ.

ಸನ್‌ರೈಸರ್ಸ್ ಎದುರು ಮ್ಯಾಚ್ ಸೋತರೂ ಧೋನಿ ಮನಗೆದ್ದ ಮರಿ ಎಬಿಡಿ!

ಸೇಡಿನ ಕದನ: ವಿರಾಟ್ ಕೊಹ್ಲಿ ತವರಿನಲ್ಲಿ ಈ ಪಂದ್ಯ ನಡೆಯಲಿರುವ ಕಾರಣ, ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷೆಯಿದೆ. ಅವರು ಈ ಬಾರಿ 9 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿದ್ದು, ಈ ಪೈಕಿ 4 ಅರ್ಧಶತಕ ತವರಿನಾಚೆ ಪಂದ್ಯದಲ್ಲಿ ದಾಖಲಾಗಿದೆ. ಮತ್ತೊಂದೆಡೆ ಡೆಲ್ಲಿ ತಂಡದ ರಾಹುಲ್, ಆರ್‌ಸಿಬಿ ವಿರುದ್ಧ ಕಳೆದ ಮುಖಾಮುಖಿಯಲ್ಲಿ ಔಟಾಗದೆ 93 ರನ್ ಸಿಡಿಸಿ ಅಬ್ಬರಿಸಿದ್ದರು. ಕಾಂತಾರ ಸಿನಿಮಾ ಶೈಲಿಯಲ್ಲಿ ಬ್ಯಾಟನ್ನು ನೆಲಕ್ಕೆ ಕುಟ್ಟಿ ಸಂಭ್ರಮಾಚಣೆ ನಡೆಸಿದ್ದು ಕೂಡಾ ವೈರಲ್ ಆಗಿತ್ತು. ಹೀಗಾಗಿ ಡೆಲ್ಲಿಯಲ್ಲಿ ಇವರಿಬ್ಬರು ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ವೇಗಿಗಳ ಸೆಣಸು: ಆಸ್ಟ್ರೇಲಿಯಾದ ಇಬ್ಬರು ಚಾಂಪಿಯನ್ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಜಲ್‌ವುಡ್, ಈ ಬಾರಿ ಕ್ರಮವಾಗಿ ಡೆಲ್ಲಿ ಹಾಗೂ ಆರ್‌ಸಿಬಿ ಪರ ಆಡುತ್ತಿದ್ದಾರೆ. ಹೇಜಲ್‌ವುಡ್ 16 ವಿಕೆಟ್ ಕಿತ್ತಿದ್ದರೆ, ಸ್ಟಾರ್ಕ್ 11 ವಿಕೆಟ್ ಪಡೆದಿದ್ದಾರೆ. ನಿರ್ಣಾಯಕ ಸಂದರ್ಭದಲ್ಲಿ ಮಾರಕ ಯಾರ್ಕರ್, ಸ್ವಿಂಗ್‌ಗಳ ಮೂಲಕ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಇವರಿಗಿದೆ.

ಇನ್ನು, ಉಭಯ ತಂಡಗಳ ಸ್ಪಿನ್ನರ್‌ಗಳೂ ಟೂರ್ನಿ ಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಆರ್‌ಸಿಬಿಯ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ, ಡೆಲ್ಲಿ ಕುದ್ದೀಪ್ ಯಾದವ್ ನಡುವೆ ಪೈಪೋಟಿ ಏರ್ಪಡಲಿದೆ. ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಡೆಲ್ಲಿಯ ಕರುಣ್ ನಾಯರ್, ಪೊರೆಲ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

7 ಮ್ಯಾಚ್ ಸೋತರೂ ಸಿಎಸ್‌ಕೆಗಿದೆ ಇನ್ನೂ ಇದೇ ಪ್ಲೇ ಆಫ್‌ಗೇರುವ ಲಾಸ್ಟ್‌ ಚಾನ್ಸ್! ಇಲ್ಲಿದೆ ಲೆಕ್ಕಾಚಾರ

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 32 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಆರ್‌ಸಿಬಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಆರ್‌ಸಿಬಿ 19 ಪಂದ್ಯಗಳನ್ನು ಜಯಿಸಿದರೆ, ಡೆಲ್ಲಿ 12 ಪಂದ್ಯಗಳನ್ನು ಜಯಿಸಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ. ಇನ್ನು 2021ರಿಂದೀಚೆಗೆ 9 ಮುಖಾಮುಖಿಯಲ್ಲಿ ಆರ್‌ಸಿಬಿ 7 ಪಂದ್ಯ ಗೆದ್ದಿದ್ದರೇ, ಡೆಲ್ಲಿ ಗೆದ್ದಿದ್ದು ಕೇವಲ ಎರಡು ಪಂದ್ಯ ಮಾತ್ರ.

ಸಂಭಾವ್ಯ ಆಟಗಾರರ ಪಟ್ಟಿ

ಆರ್‌ಸಿಬಿ: ಫಿಲ್‌ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮ್ಯಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ.

ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಶರ್ಮಾ, ಫಾಫ್ ಡು ಪ್ಲೆಸಿಸ್, ಕರುಣ್ ನಾಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ದುಷ್ಮಂತ್ ಚಮೀರ, ಮುಕೇಶ್ ಕುಮಾರ್.

ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್