17ನೇ ಆವೃತ್ತಿ ಐಪಿಎಲ್‌ಗೆ ಮಾರ್ಚ್ 22ರಂದು ಚಾಲನೆ..!
ಟೂರ್ನಿ ಆರಂಭದ ಬಗ್ಗೆ ಕೆಲ ತಿಂಗಳುಗಳಿಂದ ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಮಾ.22ರಂದೇ ಈ ಬಾರಿ ಐಪಿಎಲ್ ಶುರುವಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬಗ್ಗೆ ಗೊಂದಲದಲ್ಲಿದ್ದ ಬಿಸಿಸಿಐ ಅಥವಾ ಐಪಿಎಲ್ ಆಡಳಿತ ಮಂಡಳಿ ಈ ವರೆಗೂ ಟೂರ್ನಿ ಬಗ್ಗೆ ಮಾಹಿತಿ ನೀಡಿರಲಿಲ್ಲ.
ನವದೆಹಲಿ(ಫೆ.21): ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹು ನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ. ಟೂರ್ನಿ ಮಾರ್ಚ್ 22ರಂದು ಆರಂಭಗೊಳ್ಳುವುದಾಗಿ ಸ್ವತಃ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಲೋಕಸಭೆ ಚುನಾವಣೆ ಇದ್ದರೂ ಟೂರ್ನಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಟೂರ್ನಿ ಆರಂಭದ ಬಗ್ಗೆ ಕೆಲ ತಿಂಗಳುಗಳಿಂದ ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಮಾ.22ರಂದೇ ಈ ಬಾರಿ ಐಪಿಎಲ್ ಶುರುವಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬಗ್ಗೆ ಗೊಂದಲದಲ್ಲಿದ್ದ ಬಿಸಿಸಿಐ ಅಥವಾ ಐಪಿಎಲ್ ಆಡಳಿತ ಮಂಡಳಿ ಈ ವರೆಗೂ ಟೂರ್ನಿ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್, ‘ಲೋಕಸಭೆ ಚುನಾವಣೆ ಇದ್ದರೂ ಭಾರತದಲ್ಲೇ ಟೂರ್ನಿಯನ್ನು ನಡೆಸುತ್ತೇವೆ. ಮಾ.22ಕ್ಕೆ ಟೂರ್ನಿ ಆರಂಭಿಸಲು ಎದುರು ನೋಡುತ್ತಿದ್ದೇವೆ. ಚುನಾವಣೆ ಕಾರಣದಿಂದಾಗಿ ಟೂರ್ನಿಯ ವೇಳಾಪಟ್ಟಿ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ವಿರುಷ್ಕಾ ದಂಪತಿ 2ನೇ ಮಗುವಿಗೆ ಅಕಾಯ್ ನಾಮಕರಣ,ಈ ಹೆಸರಿನ ಅರ್ಥವೇನು?
ಆರಂಭದಲ್ಲಿ ಟೂರ್ನಿಯ ಮೊದಲ 15 ದಿನದ ವೇಳಾಪಟ್ಟಿ ಪ್ರಕಟಿಸುತ್ತೇವೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಇತರ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಳಿಸುತ್ತೇವೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಜೂನ್ 1ರಿಂದ ಆರಂಭಗೊಳ್ಳಲಿರುವ ಕಾರಣ ಐಪಿಎಲ್ ಕೂಡಾ ಬೇಗನೇ ಮುಕ್ತಾಯಗೊಳಿಸುವ ಅನಿವಾರ್ಯತೆ ಬಿಸಿಸಿಐಗೆ ಇದೆ. ಹೀಗಾಗಿ ಮೇ 26ರಂದು ಐಪಿಎಲ್ ಫೈನಲ್ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
2019ರಲ್ಲೂ ಭಾರತದಲ್ಲೇ ನಡೆದಿದ್ದ ಪೂರ್ಣ ಐಪಿಎಲ್
ಲೋಕಸಭೆ ಚುನಾವಣೆ ಕಾರಣಕ್ಕೆ ಐಪಿಎಲ್ ಬೇರೆ ದೇಶದಲ್ಲಿ ನಡೆಯಬಹುದು ಎಂದು ಆರಂಭದಲ್ಲಿ ಊಹಾಪೋಹ ಹರಡಿದ್ದವು. ಆದರೆ ಅದನ್ನು ಐಪಿಎಲ್ ಮುಖ್ಯಸ್ಥ ಅಲ್ಲಗಳೆದಿದ್ದಾರೆ. ಈ ಮೊದಲು 2009ರಲ್ಲಿ ಲೋಕಸಭೆ ಚುನಾವಣೆ ಕಾರಣಕ್ಕೆ ಟೂರ್ನಿಯನ್ನು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. ಆ ಬಳಿಕ 2014ರಲ್ಲಿ ಆರಂಭದ ಕೆಲ ಪಂದ್ಯಗಳು ಯುಎಇಯಲ್ಲಿ ನಡೆದಿದ್ದರೆ, ಬಳಿಕ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲಾಗಿತ್ತು. 2019ರಲ್ಲಿ ಚುನಾವಣೆ ಹೊರತಾಗಿಯೂ ಟೂರ್ನಿಯನ್ನು ಭಾರತದಲ್ಲೇ ನಡೆಸಲಾಗಿತ್ತು.
ಐಪಿಎಲ್‌ನಲ್ಲಿ ಬ್ಯಾಟರ್ ಆಗಿ ಕಣಕ್ಕಿಳಿಯಲಿರುವ ರಿಷಭ್!
ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ತಾರಾ ಕ್ರಿಕೆಟಿಗ ರಿಷಭ್ ಪಂತ್ 17ನೇ ಆವೃತ್ತಿ ಐಪಿಎಲ್ ವೇಳೆಗೆ ಆಡಲು ಫಿಟ್ ಆಗಲಿದ್ದಾರೆ. ಆದರೆ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
2022ರ ಡಿಸೆಂಬರ್‌ನಲ್ಲಿ ಅಪಘಾತಕ್ಕೀಡಾದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿದಿರುವ ರಿಷಭ್ ಸದ್ಯ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅವರು ಈ ಬಾರಿ ಐಪಿಎಲ್‌ನಲ್ಲಿ ಆಡಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಶೇ.100ರಷ್ಟು ಫಿಟ್ ಅಲ್ಲದ ಕಾರಣ ವಿಕೆಟ್ ಕೀಪಿಂಗ್ ಮಾಡುವಷ್ಟು ಸಮರ್ಥರಾಗಿಲ್ಲ. ಹೀಗಾಗಿ ಕೇವಲ ಬ್ಯಾಟರ್ ಆಗಿ ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.